ಗುಜರಿ ಅಂಗಡಿ ಮಾಲೀಕನಿಂದ ಬೆಂಗಳೂರಲ್ಲಿ ಬೆಸ್ಕಾಂ ಬ್ಯಾಟರಿ ಕಳುವು
ಬೆಂಗಳೂರು, ಆ. 22: ಬೆಂಗಳೂರಿನಲ್ಲಿ ಬೆಸ್ಕಾಂ ಬ್ಯಾಟರಿಗಳನ್ನು ಕದಿಯುವ ಕಳ್ಳ ಗ್ಯಾಂಗ್ ನ್ನು ಮಲ್ಲೇಶ್ವರ ಪೊಲೀಸರು ಬಂಧಿಸಿದ್ದಾರೆ. ಹಣ ಗಳಿಸಲು ಗುಜರಿ ವ್ಯಾಪಾರಿ ಮತ್ತು ಸಹಚರರು ಸೇರಿ ಲಕ್ಷಾಂತರ ರೂಪಾಯಿ ಬ್ಯಾಟರಿಗಳನ್ನು ಕಳ್ಳತನ ಮಾಡಿರುವ ಜಾಲವನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ಮಲ್ಲೇಶ್ವರಂ 18 ನೇ ಕ್ರಾಸ್ ಬಳಿ ಇರುವ ಸರ್ಕಾರಿ ಕಾಲೇಜು ಹತ್ತಿರ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಗೆ ಸಂಬಂದಿಸಿದ 11 ಕೆವಿ ಅಧಿಕ ಒತ್ತಡದ ನಿಯಂತ್ರಣ ಬಾಕ್ಸ್ ( ಆರ್‌ಎಂಡಿ ) ಬ್ಯಾಟರಿ ಅಳವಡಿಸಲಾಗಿತ್ತು. ಈ ಬಾಕ್ಸ್ ನಲ್ಲಿದ್ದ ಆರು ಬ್ಯಾಟರಿಗಳು ಇತ್ತೀಚೆಗೆ ಕಳುವು ಆಗಿದ್ದವು. ಆ. 06 ರಂದು ಬ್ಯಾಟರಿ ಕಳುವು ಆಗಿರುವ ವಿಚಾರ ತಿಳಿದ ಬೆಸ್ಕಾಂ ಅಧಿಕಾರಿಗಳು ಈ ಸಂಬಂಧ ಮಲ್ಲೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಬೆಸ್ಕಾಂ ಬ್ಯಾಟರಿ ಕಳುವು ಬಗ್ಗೆ ಸಿಸಿಟಿವಿ ದೃಶ್ಯ ಆಧರಿಸಿ ತನಿಖೆ ನಡೆಸಿದ ಮಲ್ಲೇಶ್ವರ ಪೊಲೀಸರು ನಾಲ್ವರು ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾರೆ. ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದ್ದ ಆಟೋ ನಂಬರ್ ಜಾಡು ಹಿಡಿದು ಆರೋಪಿಗಳನ್ನು ಬಂಧಿಸಿದ್ದಾರೆ. ನಾಲ್ವರು ಆರೋಪಿಗಳು ಬೆಂಗಳೂರಿನಲ್ಲಿ ಕದ್ದಿದ್ದ ನೂರಕ್ಕೂ ಅಧಿಕ ಬ್ಯಾಟರಿಗಳನ್ನು ವಶಪಡಿಸಿಕೊಂಡಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಎರಡು ಆಟೋಗಳನ್ನು ಸಹ ಜಪ್ತಿ ಮಾಡಿದ್ದಾರೆ.

ಬಂಧಿತ ಪ್ರಮುಖ ಆರೋಪಿ ತಮಿಳುನಾಡು ಮೂಲದವನಾಗಿದ್ದು, ಬೆಂಗಳೂರು ಕೋಗಿಲು ಕ್ರಾಸ್ ಬಳಿ ಗುಜರಿ ವ್ಯಾಪಾರ ಮಾಡುತ್ತಿದ್ದ. ತನ್ನ ಮೂವರು ಸ್ನೇಹಿತರನ್ನು ತಮಿಳುನಾಡಿನಿಂದ ಕರೆಸಿ ಕೆಲಸ ಕೊಡುವುದಾಗಿ ಹೇಳಿ ಬೆಸ್ಕಾಂ ಬ್ಯಾಟರಿಗಳನ್ನು ಕದ್ದು ಮಾರಾಟ ಮಾಡುತ್ತಿದ್ದರು. ಬೆಸ್ಕಾಂ ನಿಯಂತ್ರಣ ಬಾಕ್ಸ್ ಗಳಲ್ಲಿರುವ ಈ ಬ್ಯಾಟರಿಗಳನ್ನು ರಾತ್ರಿ ವೇಳೆ ಕದ್ದು ತಮಿಳುನಾಡಿನಲ್ಲಿ ಮಾರಾಟ ಮಾಡುತ್ತಿದ್ದರು. ಬೆಂಗಳೂರಿನಲ್ಲಿ ಬೆಸ್ಕಾಂ ಬ್ಯಾಟರಿ ಕಳುವು ಸಂಬಂಧ ಬೆಂಗಳೂರಲ್ಲಿ ದಾಖಲಾಗಿದ್ದ ಹನ್ನೊಂದು ಪ್ರಕರಣಗಳು ಪತ್ತೆಯಾಗಿವೆ.

ಮಲ್ಲೇಶ್ವರ ಎಸಿಬಿ ಪ್ರವೀಣ್ ಎಂ ಅವರ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಚಂದ್ರಶೇಖರ್ ಮತ್ತು ತಂಡ ಬ್ಯಾಟರಿ ಕಳುವು ಗ್ಯಾಂಗ್ ನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.












Click it and Unblock the Notifications