ಫೋನ್ ಕದ್ದಾಲಿಕೆ ಸಿಬಿಐ ತನಿಖೆ ಚುರುಕು: ಎಚ್‌ಡಿಕೆಗೆ ಸಂಕಷ್ಟ
ಬೆಂಗಳೂರು, ಸೆಪ್ಟೆಂಬರ್ 02: ಫೋನ್ ಕದ್ದಾಲಿಕೆ ಪ್ರಕರಣದ ತನಿಖೆಯನ್ನು ಸಿಬಿಐ ಚುರುಕುಗೊಳಿಸಿದ್ದು, ನಿನ್ನೆ ಸತತ ಹಲವು ಗಂಟೆಗಳ ಕಾಲ ಸೈಬರ್ ಕ್ರೈಂ ವಿಭಾಗದ ಅಧಿಕಾರಿಗಳನ್ನು ವಿಚಾರಣೆ ನಡೆಸಿದ್ದಾರೆ.
ನಿನ್ನೆ ಸೈಬರ್ ಕ್ರೈಂ ವಿಭಾಗಕ್ಕೆ ಬಂದಿದ್ದ ಸಿಬಿಐ ಎಸ್‌ಐ ಕಿರಣ್ ನೇತೃತ್ವದ ತಂಡ, ಹಲವು ಗಂಟೆಗಳ ಕಾಲ ಅಲ್ಲಿನ ಅಧಿಕಾರಿಗಳು, ಸಿಬ್ಬಂದಿಯನ್ನು ಫೋನ್ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದಾರೆ.
ಕುಮಾರಸ್ವಾಮಿ ಅವರ ಸೂಚನೆ ಮೇರೆಗೆ ಕಾಂಗ್ರೆಸ್‌ನ ಕೆಲ ಹಿರಿಯ ನಾಯಕರು, ಬಿಜೆಪಿ ನಾಯಕರು, ಅತೃಪ್ತ ಶಾಸಕರ ಫೋನ್ ಕದ್ದಾಲಿಕೆ ನಡೆದಿದೆ ಎಂಬ ಆರೋಪವೂ ಎದ್ದಿದ್ದು, ಈ ಪ್ರಕರಣವನ್ನು ಬಿಜೆಪಿ ಸರ್ಕಾರವು ಸಿಬಿಐಗೆ ವಹಿಸಿದೆ.

ಕುಮಾರಸ್ವಾಮಿ ಆದೇಶದ ಮೇರೆಗೆ ಫೋನ್ ಕದ್ದಾಲಿಕೆಗಳು ನಡೆದಿವೆ ಎಂದು ಅನರ್ಹ ಶಾಸಕ ವಿಶ್ವನಾಥ್ ಆರೋಪ ಮಾಡಿದ್ದರು. ಇದಕ್ಕೆ ಪೂರಕವೆಂಬಂತೆ ಅದೇ ಸಮಯದಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮತ್ತು ಮಧ್ಯವರ್ತಿಯೊಬ್ಬರ ನಡುವೆ ನಡೆದ ಮಾತುಕತೆಯ ಆಡಿಯೋ ವೈರಲ್ ಆಗಿತ್ತು. ಆ ಆಡಿಯೋವನ್ನು ಕುಮಾರಸ್ವಾಮಿ ಅವರ ಆಪ್ತ ಐಪಿಎಸ್ ಅಧಿಕಾರಿಯೇ ಬಿಡುಗಡೆ ಮಾಡಿಸಿದ್ದಾರೆ. ಹಾಗೂ ಭಾಸ್ಕರ್ ರಾವ್ ಅವರ ಫೋನ್ ಕದ್ದಾಲಿಕೆ ಮಾಡಿದ್ದರು ಎಂಬ ಆರೋಪವೂ ಕೇಳಿ ಬಂದಿತ್ತು.
ಸಿಬಿಐ ತಂಡವು ರಾಜ್ಯ ಗೃಹ ಇಲಾಖೆ ಕಾರ್ಯದರ್ಶಿ ಅವರನ್ನು ನಿನ್ನೆ ಭೇಟಿ ಮಾಡಿದೆ. ಆಗಸ್ಟ್ 2018ರಿಂದ ಮೇ 2019ರವರೆಗೆ ನಡೆದ ಫೋನ್ ಟ್ಯಾಪಿಂಗ್ ಬಗ್ಗೆ ಮಾಹಿತಿ ಕೇಳಿದೆ. ಫೋನ್ ಟ್ಯಾಪಿಂಗ್ಗೆ ಪೊಲೀಸರು ಅನುಮತಿ ನೀಡಿರುವ ವಿವರ ಹಾಗೂ ತಾವು ಈ ಸಂಬಂಧ ಸಹಿ ಮಾಡಿರುವ ದಾಖಲೆ ಒದಗಿಸಿ ಎಂದು ಗೃಹ ಕಾರ್ಯದರ್ಶಿ ಅವರಿಗೆ ಸಿಬಿಐ ಅಧಿಕಾರಿಗಳು ಕೇಳಿದ್ದಾರೆ.
ಇಂದೂ ಸಹ ತನಿಖೆ ಮುಂದುವರೆರಿಸಿರುವ ಸಿಬಿಐ ತಂಡ, ಫೋನ್ ಕದ್ದಾಲಿಕೆ ಪ್ರಕರಣಗ ಸ್ಥಳಗಳ ಮಹಜರ್ ಮಾಡಿದ್ದಾರೆ. ಜೊತೆಗೆ ಫೋನ್ ಕದ್ದಾಲಿಕೆಯಿಂದ ಸಂಗ್ರಹವಾಗಿರುವ ಭಾರಿ ಪ್ರಮಾಣದ ಮಾಹಿತಿಯನ್ನು ಸಿಬಿಐ ವಶಪಡಿಸಿಕೊಳ್ಳಲಿದೆ.












Click it and Unblock the Notifications