ಡಿವೈಎಸ್ಪಿ ಗಣಪತಿ ಸಾವು ಪ್ರಕರಣ: ಕಾಲಾವಕಾಶ ಕೇಳಿದ ಸಿಬಿಐ
ಬೆಂಗಳೂರು, ಡಿಸೆಂಬರ್ 18: ರಾಜ್ಯಾದ್ಯಂತ ಕುತೂಹಲ ಕೆರಳಿಸಿರುವ ಡಿವೈಎಸ್ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆ ವರದಿ ಜನರ ಮುಂದೆ ಬರಲು ಇನ್ನಷ್ಟು ತಡವಾಗುವ ಸಾಧ್ಯತೆ ಇದೆ.
ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು, ಹೆಚ್ಚುವರಿಯಾಗಿ ಆರು ತಿಂಗಳ ಕಾಲಾವಕಾಶ ಕೋರಿ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ.
ಗಣಪತಿ ಅವರ ತಂದೆ ಕುಶಾಲಪ್ಪ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಮರು ತನಿಖೆ ನಡೆಸಿ ಮೂರು ತಿಂಗಳಲ್ಲಿ ವರದಿ ಸಲ್ಲಿಸುವಂತೆ ಸೆಪ್ಟೆಂಬರ್ 5ರಂದು ಆದೇಶಿಸಿತ್ತು. ಈ ಅವಧಿ ಡಿಸೆಂಬರ್ 5ಕ್ಕೆ ಕೊನೆಗೊಂಡಿದೆ. ಈವರೆಗಿನ ಮಾಡಲಾಗಿರುವ ತನಿಖೆಯ ಪ್ರಮುಖ ಅಂಶಗಳು ಹಾಗೂ ತನಿಖಾ ಪ್ರಗತಿಯ ವರದಿ ಸಲ್ಲಿಸಿರುವ ಸಿಬಿಐ ಹೆಚ್ಚುವರಿ ಕಾಲಾವಕಾಶ ಕೋರಲಾಗಿದೆ.

ಈ ಪ್ರಕರಣದ ಸಂಬಂಧ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್, ಐಪಿಎಸ್ ಅಧಿಕಾರಿಗಳಾದ ಪ್ರಣವ್ ಮೊಹಂತಿ ಹಾಗೂ ಎ.ಎಂ. ಪ್ರಸಾದ್ ವಿರುದ್ಧ ಅ.26ರಂದು ಎಫ್ಐಆರ್ ದಾಖಲಿಸಿಕೊಂಡಿದ್ದ ಸಿಬಿಐ, ತನಿಖೆ ಚುರುಕುಗೊಳಿಸಿದೆ.
ಗಣಪತಿ ಶವ ದೊರೆತ ವಸತಿ ಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಅಧಿಕಾರಿಗಳು, ಗಣಪತಿಯ ತಂದೆ, ತಾಯಿ, ಸಹೋದರಿಯಿಂದ ಹೇಳಿಕೆ ಪಡೆದಿದ್ದಾರೆ. ಆತ್ಮಹತ್ಯೆ ಪ್ರಕರಣವನ್ನು ತನಿಖೆ ನಡೆಸಿದ್ದ ಮಡಿಕೇರಿ ಪೊಲೀಸ್ ಇನ್‌ಸ್ಪೆಕ್ಟರ್ ಮೇದಪ್ಪ ಅವರ ವಿಚಾರಣೆಯನ್ನೂ ಸಿಬಿಐ ಅಧಿಕಾರಿಗಳು ನಡೆಸಿದ್ದಾರೆ.
ಗಣಪತಿ ಸಾವಿನ ಬಗ್ಗೆ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಕೇಶವನಾರಾಯಣ ಆಯೋಗದಿಂದಲೂ ಸಿಬಿಐ ಅಧಿಕಾರಿಗಳು ಮಾಹಿತಿ ಪಡೆದುಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಯೋಗದ ಬಳಿ ಇರುವ ದಾಖಲೆಗಳನ್ನು ನೀಡುವಂತೆ ಮನವಿ ಸಲ್ಲಿಸಿದ್ದಾರೆ.
ನಮ್ಮ ಕುಟುಂಬವು ಈಗಾಗಲೇ ನೊಂದಿದ್ದು ತನಿಖೆಯು ಮತ್ತಷ್ಟು ತಡವಾಗುವುದು ಬೇಡ. ವಕೀಲರೊಂದಿಗೆ ಚರ್ಚಿಸಿ ಎಷ್ಟು ಸಮಯ ನೀಡಬಹುದು ಎಂಬುದರ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಲಾಗುವುದು. ಸಿಬಿಐನಿಂದ ನ್ಯಾಯ ಸಿಗುವ ವಿಶ್ವಾಸವಿದೆ ಎಂದು ಡಿವೈಎಸ್‌ಪಿ ಗಣಪತಿ ಸಹೋದರ ಎಂ.ಕೆ. ಮಾಚಯ್ಯ ತಿಳಿಸಿದ್ದಾರೆ.












Click it and Unblock the Notifications