Cavuery Row: ಕಾವೇರಿ ನೀರು ನಿರ್ವಹಣೆಯಲ್ಲಿ ಸರ್ಕಾರದ ಧೋರಣೆ ಟೀಕಿಸಿದ ಬೊಮ್ಮಾಯಿ: ರೈತರ ಹಿತಕ್ಕೆ ಆದ್ಯತೆ ನೀಡಿ
ಬೆಂಗಳೂರು: ಕಾವೇರಿ ನೀರು ನಿರ್ವಹಣೆ ವಿಚಾರದಲ್ಲಿ ರಾಜ್ಯ ಸರ್ಕಾರ ನೀರು ಬಿಡದಿರಲು ನಿರ್ಧರಿಸಿತ್ತು. ಇದೀಗ ಕಬಿನಿ ಡ್ಯಾಂ ಭರ್ತಿಯಾಗುವ ಹಂತಕ್ಕೆ ಬರುತ್ತಿದ್ದಂತೆ ನೀರು ಬಿಡುತ್ತಿದೆ. ರಾಜ್ಯ ಸರ್ಕಾರದ ಈ ಧೋರಣೆಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯದ ರೈತರಿಗೆ ನೀರು ಬಿಡದೆ ಸಾಧನೆ ಎಂದು ಬಿಂಬಿಸಿಕೊಳ್ಳುವುದು ಸರಿಯಲ್ಲ ಎಂದು ಅವರು ಕಿಡಿ ಕಾರಿದ್ದಾರೆ.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಪಕ್ಷದ ಕೋರ್ ಕಮಿಟಿ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದೆ. ಮಲೆನಾಡು ಹಾಗೂ ಕೊಡಗು ಭಾಗದಲ್ಲಿ ಸುರಿದ ಮಳೆಯಿಂದಾಗಿ ಜಲಾಶಯಗಳಿಗೆ ಉತ್ತಮ ಪ್ರಮಾಣದ ನೀರು ಹರಿದು ಬರುತ್ತಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡಿಗೆ ತರಾತುರಿಯಲ್ಲಿ ನೀರು ಹರಿಸುವುದನ್ನೇ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದೆ ಎಂದು ದೂರಿದರು.

ಕರ್ನಾಟಕದಲ್ಲಿ ವರುಣದೇವನ ಕೃಪೆಯಿಂದ ಉತ್ತಮ ಮಳೆಯಾಗಿದೆ. ಆದರೆ, ಜಲಾಶಯಗಳು ಭರ್ತಿಯಾಗುವ ಮುನ್ನವೇ ತಮಿಳುನಾಡಿಗೆ ತರಾತುರಿಯಲ್ಲಿ ನೀರು ಹರಿಸಿದೆ. ಏನೇ ಆಗಲಿ "ಸುಪ್ರೀಂ ಕೋರ್ಟ್‌ನಲ್ಲಿ ನಮ್ಮ ಪರವಾಗಿ ವಾದ ಮಂಡಿಸಲು ನಮಗೆ ಬಲವಾದ ಅಂಶಗಳು ಲಭ್ಯವಾಗಿವೆ. ಜೂನ್ ಜುಲೈನಲ್ಲಿ ನೀರು ಬಿಡುವುದು ಅಷ್ಟೆ ಅಲ್ಲ, ಸರ್ಕಾರ ಮುಂದಿನ ದಿನಗಳಲ್ಲಿ ಕಾವೇರಿ ನೀರಿನ ನಿರ್ವಹಣೆಯನ್ನು ಹೇಗೆ ಮಾಡುತ್ತದೆ ಎಂಬುದನ್ನು ನಾವು ಕಾದು ನೋಡಬೇಕಿದೆ ಎಂದು ಹೇಳಿದರು.
ರೈತರ ಹಿತಾಸಕ್ತಿ ಕಾಯುವುದು ಮುಖ್ಯ
ಕರ್ನಾಟಕದ ಜನತೆಗೆ ಕುಡಿಯುವ ನೀರು ಒದಗಿಸುವುದು, ಬೆಂಗಳೂರು, ಮಂಡ್ಯ, ಮೈಸೂರು ಭಾಗದ ಕುಡಿಯುವ ನೀರಿನ ಅಗತ್ಯತೆ ಹಾಗೂ ನಮ್ಮ ಮುಂಗಾರು ಬೆಳೆಗೆ ನೀರು ಸುರಕ್ಷಿತವಾಗಿ ಸಿಗುವಂತೆ ಮಾಡುವುದು ಸರ್ಕಾರದ ಮೊದಲ ಆದ್ಯತೆಯಾಗಬೇಕು. ತಮಿಳುನಾಡಿನವರು 9500 ನಾವು 3500 ಕ್ಯೂಸೆಕ್ಸ್ ಬಿಟ್ಟಿದ್ದೇವೆ ಎನ್ನುವುದು ಹುಡುಗಾಟಿಕೆಯ ಮಾತಾಗಿದೆ. ಅದನ್ನೇ ದೊಡ್ಡ ಸಾಧನೆ ಎಂದು ಬಿಂಬಿಸುವ ರಾಜ್ಯ ಸರ್ಕಾರದ ಧೋರಣೆ ಸರಿಯಲ್ಲ.
ಏಕೆಂದರೆ ಇಲ್ಲಿಯವರೆಗೆ ನಮ್ಮ ರೈತರ ಕಾಲುವೆಗಳಿಗೆ ಒಂದು ಹನಿ ನೀರನ್ನೂ ಹರಿಸಿಲ್ಲ. ರೈತರಿಗೆ ನೀರು ಕೊಡದೆ, ಸಾಧನೆ ಮಾಡಿದ್ದೇವೆ ಎಂದು ಬಿಂಬಿಸಿಕೊಳ್ಳುವುದು ಸರಿಯಲ್ಲ ಎಂದರು. ಸರ್ಕಾರ ಕೈಗೊಳ್ಳುವ ನಿರ್ಧಾರ ಹಾಗೂ ಸಭೆಯಲ್ಲಿ ಮಂಡಿಸುವ ಪ್ರಸ್ತಾಪಗಳನ್ನು ಗಮನಿಸಿ ಮುಂದಿನ ನಡೆ ತೀರ್ಮಾನಿಸಲಾಗುವುದು ಎಂದು ಬೊಮ್ಮಾಯಿ ತಿಳಿಸಿದರು.
ಕಾವೇರಿ: ಸಂದರ್ಭಕ್ಕೆ ತಕ್ಕಂತೆ ನಿರ್ಧಾರ
ಕಬಿನಿ ಅಣೆಕಟ್ಟು ಭರ್ತಿಯಾಗುತ್ತಿದೆ. ಅಣೆಕಟ್ಟು ತುಂಬಿದಾಗ ನೀರು ಹರಿಸಲೇಬೇಕಾಗುತ್ತದೆ. ಅದನ್ನು ಹಿಡಿದಿಡಲು ಸಾಧ್ಯವಿಲ್ಲ. ನೀರು ಬಿಡಬಾರದು ಎಂದು ಹೋರಾಟ ಮಾಡುವ ನಿರ್ಧಾರವನ್ನು ಕೈಬಿಡಬೇಕು. ಬಂದ್‌ಗೆ ಕರೆ ನೀಡಲಾಗಿದೆ. ಹೋರಾಟ ಎಲ್ಲರ ಹಕ್ಕು, ಆದರಿಂದ ಯಾರಿಗೂ ತೊಂದರೆ ಆಗಬಾರದು ಎಂದು ಡಿಕೆ ಶಿವಕುಮಾರ್ ಅವರು ಪ್ರತಿಭಟನೆಗೆ ಮುಂದಾದ ರೈತರಿಗೆ, ಕನ್ನಡಪರ ಹೋರಾಟಗಾರರಿಗೆ ಕರೆ ನೀಡಿದ್ದಾರೆ.
ಕಬಿನಿ ನೀರಿನ ಸಂಗ್ರಹಣೆ ಬಗ್ಗೆ ಅಧಿಕಾರಿಗಳು ಪ್ರತಿ ಗಂಟೆಯೂ ಮಾಹಿತಿ ನೀಡುತ್ತಿದ್ದಾರೆ. ಒಳಹರಿವು 40 ಸಾವಿರ ಕ್ಯೂಸೆಕ್ಸ್ ತಲುಪಿದೆ. ಪ್ರಕೃತಿ ಯಾರ ಸ್ವತ್ತೂ ಅಲ್ಲ. ಪ್ರಕೃತಿಯ ಅಣತಿಯಂತೆ ನಾವು ಬದುಕುತ್ತಿದ್ದೇವೆ. ನಾವು ನೀರು ಬಿಡುಗಡೆ ಮಾಡಲ್ಲ ಎಂದು ತೀರ್ಮಾನ ಮಾಡಿದರೂ, ಜಲಾಶಯ ತುಂಬಿದಾಗ ನೀರನ್ನು ಹಿಡಿದಿಟ್ಟುಕೊಳ್ಳಲು ಆಗುವುದಿಲ್ಲ. ಹೋರಾಟಗಾರರು ನೀರು ಬಿಡುವ ಕಡೆ ಹೋಗಬಾರದು. ಅಲ್ಲದೇ ಈ ಹಿಂದೆ ದೇವೇಗೌಡರು, ಎಸ್ ಕೃಷ್ಣ, ಸಿದ್ದರಾಮಯ್ಯರ ಕಾಲದಲ್ಲೂ ಸಂದರ್ಭಕ್ಕೆ ತಕ್ಕಂತೆ ಸೂಕ್ತ ನಿರ್ಧಾರ ಕೈಗೊಂಡಿರುವುದಾಗಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಈ ಹಿಂದೆ ತಮಿಳುನಾಡಿಗೆ ನೀರು ಬಿಡುವುದಿಲ್ಲ ಎಂದಿದ್ದ ಡಿಕೆ ಶಿವಕುಮಾರ್, ಕೊಂಚ ನೀರಿನ ಪ್ರಮಾಣ ಏರಿಕೆ ಆಗುತ್ತಿದ್ದಂತೆ ಕಾವೇರಿ ಉಪನದಿ ಕಬಿನಿಯಿಂದ ನೀರು ಬಿಡುಗಡೆ ಮಾಡಲಾಗಿದೆ. ಈ ನಿರ್ಧಾರವನ್ನು ಬೊಮ್ಮಾಯಿ ಸೇರಿದಂತೆ ಬಿಜೆಪಿ ನಾಯಕರು ಖಂಡಿಸಿದ್ದಾರೆ.


Click it and Unblock the Notifications
