ಸುಪ್ರೀಂ ಕೋರ್ಟ್ ವಿಚಾರಣೆಗೂ ಕಾವೇರಿ ನೀರಿನ ಹೊರಹರಿವು ಹೆಚ್ಚಳ: ಇಕ್ಕಟ್ಟಿಗೆ ಸಿಲುಕಿದ ಸಿದ್ದರಾಮಯ್ಯ ಸರ್ಕಾರ
ಬೆಂಗಳೂರು, ಆಗಸ್ಟ್ 31: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (ಸಿಡಬ್ಲ್ಯುಎಂಎ) ಸೂಚನೆ ನಂತರ ಕೃಷ್ಣರಾಜ ಸಾಗರ ಜಲಾಶಯದಿಂದ ತಮಿಳುನಾಡಿಗೆ ನೀರಿನ ಹೊರಹರಿವನ್ನು ಕರ್ನಾಟಕ ಹೆಚ್ಚಿಸಿದೆ.
ಕೃಷ್ಣರಾಜ ಸಾಗರ ಜಲಾಶಯದಲ್ಲಿ ಬುಧವಾರ 2,300 ಕ್ಯೂಸೆಕ್ ಒಳಹರಿವು ಇದ್ದರೆ, 4,398 ಕ್ಯೂಸೆಕ್‌ನಷ್ಟು ಹೊರಹರಿವು ಇದೆ ಎಂದು ವರದಿಗಳು ಹೇಳಿವೆ.

ಮೈಸೂರು ಜಿಲ್ಲೆಯ ಕಬಿನಿ ಜಲಾಶಯದಲ್ಲಿ ಹೊರ ಹರಿವಿನ ಪ್ರಮಾಣ 2,000 ಕ್ಯೂಸೆಕ್‌ನಷ್ಟಿದೆ. ಎರಡೂ ಜಲಾಶಯಗಳಿಂದ ಒಟ್ಟು ಹೊರಹರಿವು ಸುಮಾರು 6,400 ಕ್ಯುಸೆಕ್‌ನಷ್ಟಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕರ್ನಾಟಕದಿಂದ ತಮಿಳುನಾಡಿಗೆ 5,000 ಕ್ಯೂಸೆಕ್ ನೀರು ಬಿಡುವಂತೆ ಕರ್ನಾಟಕ ಸರ್ಕಾರಕ್ಕೆ ಸಿಡಬ್ಲ್ಯುಎಂಎ ಸೂಚಿಸಿದೆ. ಈ ಹರಿವು ಸೆಪ್ಟೆಂಬರ್ 12 ರ ವರೆಗೆ ಅಂದರೆ 15 ದಿನಗಳವರೆಗೆ ಇರಲಿದೆ.
ಶುಕ್ರವಾರ ಸುಪ್ರೀಂ ವಿಚಾರಣೆ
ಪ್ರತಿನಿತ್ಯ 24,000 ಕ್ಯೂಸೆಕ್ ನೀರು ಬಿಡಬೇಕು. ಈ ಕುರಿತು ಸುಪ್ರೀಂ ಕೋರ್ಟ್ ಕರ್ನಾಟಕಕ್ಕೆ ನಿರ್ದೇಶನ ನೀಡಬೇಕು ಎಂದು ತಮಿಳುನಾಡು ಒತ್ತಾಯಿಸಿದೆ. ಈ ವಿಚಾರವಾಗಿ ತಮಿಳುನಾಡು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಶುಕ್ರವಾರ ಸುಪ್ರೀಂ ಕೋರ್ಟ್ ಪುನರಾರಂಭಿಸಲಿದೆ.

ಅಸಮಾಧಾನ ವ್ಯಕ್ತಪಡಿಸಿದ ಕರ್ನಾಟಕ
ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಮಳೆ ಕಡಿಮೆಯಾಗಿದೆ. ರಾಜ್ಯದ ಮೂವತ್ತು ಜಿಲ್ಲೆಗಳು ನೀರಿನ ತೊಂದರೆ ಅನುಭವಿಸುತ್ತಿದೆ. ಕುಡಿಯುವ ನೀರು ಹಾಗೂ ರೈತರ ಬೆಳೆಗಳಿಗೆ ನೀರಿನ ಅಭಾವ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ತಮಿಳು ನಾಡಿಗೆ ಹರಿಸುವ ನೀರಿನ ಪ್ರಮಾಣ ಹೆಚ್ಚಿಸಿದ್ದು ಕರ್ನಾಟಕದ ಆ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಅಸಮಾಧಾನ ವ್ಯಕ್ತಪಡಿಸಿದೆ.
ರಾಜ್ಯದ ಪರಿಸ್ಥಿತಿಯನ್ನು ಸುಪ್ರೀಂ ಕೋರ್ಟ್‌ಗೆ ಅರ್ಥಮಾಡಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಕಾರ್ಯತಂತ್ರ ರೂಪಿಸಿದೆ. ಈ ಮೂಲಕ ನೆರೆಯ ತಮಿಳುನಾಡಿಗೆ ಬಿಡುವ ಕಾವೇರಿ ನೀರಿನ ಪ್ರಮಾಣವನ್ನು ಕಡಿಮೆ ಮಾಡಲು ಕರ್ನಾಟಕ ಪ್ರಯತ್ನಿಸಲಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬುಧವಾರ ಹೇಳಿದ್ದಾರೆ.
ರಾಜ್ಯದ ಕಾನೂನು ತಂಡವನ್ನು ಭೇಟಿ ಮಾಡಲು ಗುರುವಾರ ದೆಹಲಿಗೆ ತೆರಳುವುದಾಗಿ ಶಿವಕುಮಾರ್ ತಿಳಿಸಿದ್ದಾರೆ. ಈ ವರ್ಷ ಮಳೆಯ ಕೊರತೆಯಿಂದಾಗಿ ತಮಿಳುನಾಡಿಗೆ 3,000 ಕ್ಯೂಸೆಕ್ ಕಾವೇರಿ ನೀರನ್ನು ಮಾತ್ರ ಬಿಡಬಹುದು ಎಂದು ಕರ್ನಾಟಕ ಹೇಳಿದೆ.
ಎರಡೂ ರಾಜ್ಯಗಳಲ್ಲಿ ಪ್ರತಿಪಕ್ಷಗಳು ಆಡಳಿತಾರೂಢ ಪಕ್ಷಗಳ ಮೇಲೆ ಒತ್ತಡ ಹೇರಿದ್ದು, ರಾಜ್ಯದ ಜನರ ಹಿತವನ್ನು ಕಡೆಗಣಿಸುತ್ತಿವೆ ಎಂದು ಆರೋಪಿಸಿವೆ.












Click it and Unblock the Notifications