Cauvery issue: ಸಿದ್ದರಾಮಯ್ಯಗೆ ಹಕ್ಕೊತ್ತಾಯ ಸಲ್ಲಿಸಿದ ಮುಖಂಡರು
ಬೆಂಗಳೂರು, ಸೆಪ್ಟಂಬರ್ 29: ಕರ್ನಾಟಕ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರನ್ನು ಅವೈಜ್ಞಾನಿಕವಾಗಿ ಹರಿಸುತ್ತಿದ್ದು, ಅದನ್ನೂ ಈ ಕ್ಷಣವೇ ನಿಲ್ಲಿಸಬೇಕು ಎಂದು ಒತ್ತಾಯಿಸಿ ಎಎಪಿ ರಾಜ್ಯಾಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಮತ್ತು ರಾಜ್ಯ ಕಬ್ಬು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಕ್ಕೋಹತ್ತಾಯ ಸಲ್ಲಿಸಿದರು.
ವಿಧಾನಸಭೆ ವಿಶೇಷ ಅಧಿವೇಶನ ಕರೆದು, ಸಂಕಷ್ಟ ಸೂತ್ರ ಜಾರಿಯಾಗುವ ತನಕ ತಮಿಳುನಾಡಿಗೆ ನೀರು ಹರಿಸುವುದಿಲ್ಲ ಎಂಬ ಸಂದೇಶವನ್ನು ಕೇಂದ್ರ ಸರ್ಕಾರ ಹಾಗೂ ಕಾವೇರಿ ನೀರು ನಿರ್ವಹಣಾ ಮಂಡಳಿಗೆ ತಿಳಿಸಬೇಕು ಎಂದು ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಚಂದ್ರು ಹಾಗೂ ಕುರುಬೂರು ಶಾಂತಕುಮಾರ್ ಜಂಟಿಯಾಗಿ ಒತ್ತಾಯಿಸಿದ್ದಾರೆ.

ಕಾವೇರಿ ವ್ಯಾಪ್ತಿಗೆ ಸೇರಿದ 4 ರಾಜ್ಯಗಳ ಪರಿಣಿತರು, ನೀರಾವರಿ ತಜ್ಞರು, ರೈತ ಪ್ರತಿನಿಧಿಗಳು, ಹವಮಾನ ತಜ್ಞರು, ನೀರಾವರಿ ಇಲಾಖೆಯ ಅಧಿಕಾರಿಗಳಿರುವ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸಬೇಕು.
ಇನ್ನೂ ಕುಡಿಯುವ ನೀರಿಗಾಗಿ ಹೆಚ್ಚು ಮಳೆ ನೀರು ಸಂಗ್ರಹಿಸಿಟ್ಟುಕೊಳ್ಳಲು ಮೇಕೆದಾಟು ಯೋಜನೆ ನಿರ್ಮಾಣ ಕಾರ್ಯ ಆರಂಭಿಸಬೇಕು, ಅಗತ್ಯ ಹಣ ಬಿಡುಗಡೆ ಮಾಡಬೇಕು ಎಂಬ ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.
ಹೋರಾಟಗಾರರ ಮೇಲಿನ ಕೇಸ್ ಹಿಂಪಡೆಯಿರಿ
ಕರ್ನಾಟಕ ನೆಲ, ಜಲ, ಭಾಷೆ ಹಾಗೂ ರೈತರಿಗಾಗಿ ಹೋರಾಟ ಮಾಡಿದ ಸಂಘಟನೆಗಳ ಮುಖಂಡರುಗಳ, ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ಮುಖಂಡರ ಮೇಲಿರುವ ಹೋರಾಟದ ಮೊಕ್ಕದ್ದಮೆಗಳನ್ನು ಕೂಡಲೇ ಹಿಂಪಡೆಯುವಂತೆ ಅವರು ಆಗ್ರಹಿಸಿದರು.

ಇದೇ ವಾರ ಸೆಪ್ಟಂಬರ್ 26ರಂದು ನಾವು ನಡೆಸಿದ ಬೆಂಗಳೂರು ಬಂದ್ ಸಂದರ್ಭ ಕರೆ ಮಾಡಿ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ ಅವರು ಮಾತುಕತೆಗೆ ಆಹ್ವಾನಿಸಿದ್ದರು. ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಸಚಿವ ರಾಮಲಿಂಗಾರೆಡ್ಡಿ ಅವರು 3 ದಿನಗಳಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿಸುವುದಾಗಿ ಭರವಸೆ ನೀಡಿದ್ದರು. ಸಿದ್ದರಾಮಯ್ಯ ಅವರು ಶುಕ್ರವಾರ ಭೇಟಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಹಾಗಾಗಿ ಅವರ ನಿವಾಸಕ್ಕೆ ಮುತ್ತಿಗೆ ಹಾಕುವ ಪೂರ್ವ ಯೋಜನೆಯನ್ನು ಕೈಬಿಡಲಾಯ್ತು ಎಂದು ಮುಖ್ಯಮಂತ್ರಿ ಚಂದ್ರು ತಿಳಿಸಿದರು.
ಮೋಹನ್ ದಾಸರಿ ನೇತೃತ್ವದಲ್ಲಿ ಪ್ರತಿಭಟನೆ
ಕರ್ನಾಟಕ ಬಂದ್‌ಗೆ ಬೆಂಬಲ ನೀಡಿದ ಆಮ್ ಆದ್ಮಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಖಾಲಿ ಕೊಡ ಹಿಡಿದು ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ದಾಸರಿ, ಬೆಂಗಳೂರಲ್ಲಿ ಬೇಸಿಗೆಯ ದಿನಗಳು ಹೇಗಿರಬಹುದು ಎಂಬುದನ್ನು ಈಗಲೇ ಊಹಿಸಬಹುದು. ಕುಡಿಯುವ ನೀರಿಗೆ ಹಾಹಾಕಾರ ಸಂಭವಿಸುವ ಸಾಧ್ಯತೆಗಳೇ ಕಣ್ಮುಂದೆ ಕಾಣಿಸುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಬೆಂಗಳೂರಲ್ಲಿರುವ ಪ್ರತಿಯೊಬ್ಬರು ದಿನಕ್ಕೆ ಕನಿಷ್ಠ 150 ಲೀಟರ್ ನೀರನ್ನು ಖರ್ಚು ಮಾಡುತ್ತಿದ್ದಾರೆ. ಜನರು ಈಗಲೇ ಎಚ್ಚೆತ್ತುಕೊಳ್ಳಬೇಕು. ನೀರನ್ನು ಬೇಕಾಬಿಟ್ಟಿ ಖರ್ಚು ಮಾಡಬಾರದು. ಮಳೆಗಾಲವು ಅಂತಿಮ ದಿನಗಳನ್ನು ಪ್ರವೇಶಿಸದರೂ ನಿರೀಕ್ಷಿತ ಮಳೆ ಬಿದ್ದಿಲ್ಲ. ಕುಡಿಯುವ ನೀರಿಗೆ ಮೊದಲ ಆಧ್ಯತೆ ಕೊಡಿ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಹೀಗಿದ್ದರೂ ತಮಿಳುನಾಡಿಗೆ ನೀರು ಹರಿಸುವಂತೆ ಆದೇಶಿಸಲಾಗಿದೆ ಎಂದು ಹೇಳಿದರು.
ಇದೇ ವೇಳೆ ಪಕ್ಷದ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಕುಶಾಲಾ ಸ್ವಾಮಿ, ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ ಸೇರಿದಂತೆ ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.












Click it and Unblock the Notifications