Cauvery Dispute: ಕಾವೇರಿಯನ್ನು ತಡೆಯದಿದ್ರೆ ಕರ್ನಾಟಕ ಬಂದ್: ಬೆಂಗಳೂರಿನಲ್ಲಿ ಕರವೇ ಪ್ರವೀಣ್ ಶೆಟ್ಟಿ ಬಣ ಎಚ್ಚರಿಕೆ
ಬೆಂಗಳೂರು, ಸೆಪ್ಟೆಂಬರ್, 22: ಕಾವೇರಿ ನೀರು ತಮಿಳುನಾಡಿಗೆ ಬಿಡದಂತೆ ಆಗ್ರಹಿಸಿ ಕನ್ನಡ ಪರ ಸಂಘಟನೆಯಿಂದ ಪ್ರತಿಭಟನೆ ನಿರಂತವಾಗಿ ನಡೆಯುತ್ತಿದೆ. ನಿನ್ನೆಯಷ್ಟೇ ಕರವೇ ನಾರಾಯಣ ಗೌಡರ ಬಣ ಬೆಂಗಳೂರಿನಲ್ಲಿ ಘರ್ಜಿಸಿದ್ದಾರೆ. ಆ ಬೆನ್ನಲ್ಲೇ ಇಂದು ಕರವೇ ಪ್ರವೀಣ್ ಶೆಟ್ಟಿ ಬಣ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ರಾಜಕಾರಣಿಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಕರವೇ ಪ್ರವೀಣ್ ಶೆಟ್ಟಿ ಬಣದಿಂದ ಇಂದು ವಿಧಾನಸೌಧ ಮುತ್ತಿಗೆಗೆ ಕರೆ ಕೊಟ್ಟಿದ್ದು, ಕೆ.ಆರ್.ಪುರದಿಂದ ವಿಧಾನಸೌಧದವರೆಗೂ ಜಾಥ ಮಾಡಿ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸುವ ಯೋಜನೆ ರೂಪಿಸಿ ಕೊಳ್ಳಲಾಗಿತ್ತು. ಕೆ.ಆರ್.ಪುರ ಬಿಬಿಎಂಪಿ ಸರ್ಕಲ್‌ನಿಂದ ಕರವೇ ಕಾರ್ಯಕರ್ತರ ಜಾಥ ಮೊದಲು ಆರಂಭ ಆಗಿತ್ತು. ಕೆ.ಆರ್. ಪುರದಿಂದ ಕಾಲ್ನಡಿಗೆ ಮೂಲಕ ಬಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಯೋಜನೆ ಕೂಡಾ ರೂಪಿಸಿಕೊಂಡಿದ್ದರು.

ಕಾವೇರಿ ನೀರನ್ನು ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಬಿಡದಂತೆ ಆಗ್ರಹಿಸಿದ ಸಂಘಟನೆ ಕನ್ನಡಿಗರಿಗೆ ಮಾತ್ರ ಕಾವೇರಿ ನೀರು ಸೀಮಿತವಾಗಿಬೇಕು, ಈ ವಿಚಾರಕ್ಕೆ ಸಂಬಂಧ ಪಟ್ಟ ಹಾಗೇ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಬೇಕು. ಪ್ರತಿ ನಿತ್ಯ 5000 ಕ್ಯೂಸೆಕ್ ನೀರಿನ ಬಗ್ಗೆ ರಾಜ್ಯದ ನಾಯಕರು ಧ್ವನಿ ಎತ್ತಬೇಕು. ಈ ಬಗ್ಗೆ ಕೇಂದ್ರ ಸರ್ಕಾರದ ಬಳಿ ರಾಜ್ಯದ ಸಂಸದರು ಮನವರಿಕೆ ಮಾಡಿ ಕೊಡಬೇಕು ಅಂತಾ ಆಗ್ರಹಿಸಿದರು.
ಪ್ರತೀ ಸಲ ಮಳೆ ಬಂದಾಗ ನಾವು ತಮಿಳುನಾಡಿಗೆ ನೀರು ಬಿಟ್ಟಿದ್ದೇವೆ. ಈಗ ನಮ್ಮಲ್ಲಿ ಬರ ಇದೆ, ಈಗ ನೀರು ಬಿಡಲು ಹೇಗೆ ಸಾಧ್ಯ? ಅಂತಾ ಪ್ರಶ್ನಿಸುವ ಮೂಲಕ ಗುಡುಗಿದರು. ನಮ್ಮ ಅಧಿಕಾರಿಗಳ ಬೇಜವಾಬ್ದಾರಿಯಿಂದ ರಾಜ್ಯಕ್ಕೆ ಕಾವೇರಿ ನೀರಿನ ವಿಚಾರದಲ್ಲಿ ಅನ್ಯಾಯವಾಗಿದೆ. ಹೀಗೆ ಮುಂದುವರೆದರೆ ಗಡಿ ಬಂದ್ ಮಾಡಲು ಮುಂದಾಗುತ್ತೇವೆ ಎಂದು ವಾರ್ನ್ ಮಾಡಿದರು.
ಇನ್ನು ನಮ್ಮ ಸಂಸದರು ಕೇಂದ್ರದ ಮೇಲೆ ಒತ್ತಡ ತರಬೇಕು. ಒಂದೊಮ್ಮೆ ಕಾವೇರಿ ನೀರು ಬಿಟ್ಟರೆ ಮುಂದೆ ಕರ್ನಾಟಕ ಬಂದ್ ಮಾಡಲಿದ್ದೇವೆ. ಎಲ್ಲಾ ಕನ್ನಡಪರ ಸಂಘಟನೆಗಳು, ರೈತ ಸಂಘಗಳು ದೊಡ್ಡ ಹೋರಾಟ ನಡೆಸಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.
ಕೆ.ಆರ್.ಪುರ ಬಿಬಿಎಂಪಿ ಸರ್ಕಲ್‌ನಿಂದ ಪ್ರತಿಭಟನೆ ಆರಂಭ ಮಾಡಿ ಬೇಕೆ ಬೇಕೆ ನ್ಯಾಯಬೇಕು ಅಂತಾ ಕರವೇ ಕಾರ್ಯಕರ್ತರು ಘೋಷಣೆ ಮೊಳಗಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಕರವೇ ಕಾರ್ಯಕರ್ತರ ಪಾದಯಾತ್ರೆಯನ್ನು ಪೊಲೀಸರು ತಡೆ ಹಿಡಿಯಿಡಿದಿದ್ದು, ಪರಿಣಾಮ ನಡುರಸ್ತೆ ಮೇಲೆ ಕೂತು ಕಾರ್ಯಕರ್ತರು ಕೇಂದ್ರ ಹಾಗೂ ರಾಜ್ಯದ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.
ಬಳಿಕ ಪ್ರತಿಭಟನಾ ನಿರತ ಕರವೆ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು. ಅಲ್ಲದೆ ಇದೇ ವೇಳೆ ನಾಳೆಯೂ ಪ್ರತಿಭಟನೆ ಮಾಡುತ್ತೇವೆ ಅಂತಾ ಪ್ರತಿಭಟನಾ ನಿರತ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications