ಕೋಟಿ ಕೋಟಿ ಹಣ ಜಪ್ತಿ ಕೇಸ್: ಚಿಕ್ಕಬಳ್ಳಾಪುರ ಸಂಸದ ಕೆ.ಸುಧಾಕರ್‌ಗೆ ಬಿಗ್ ರಿಲೀಫ್
ಬೆಂಗಳೂರು, ಆಗಸ್ಟ್ 2: ಲೋಕಸಭಾ ಚುನಾವಣೆ ವೇಳೆ ಯಲಹಂಕ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮಾದವಾರ ಗ್ರಾಮದಲ್ಲಿ ಗೋವಿಂದಪ್ಪ ಅವರ ಮನೆಯಲ್ಲಿ 4.8 ಕೋಟಿ ರೂಪಾಯಿ ಹಣವನ್ನು ಜಪ್ತಿ ಮಾಡಿದ ಪ್ರಕರಣದಲ್ಲಿ ಚಿಕ್ಕಬಳ್ಳಾಪುರ ಸಂಸದ ಡಾ. ಕೆ. ಸುಧಾಕರ್ ವಿರುದ್ಧದ ಚಾರ್ಜ್‌ಶೀಟ್ ಸೇರಿದಂತೆ ಎಲ್ಲಾ ವಿಚಾರಣಾ ಪ್ರಕ್ರಿಯೆಗೆ ಹೈಕೋರ್ಟ್ ತಡೆ ನೀಡಿದೆ. ಹಾಗಾಗಿ ಸದ್ಯ ಸಂಸದರು ಬಂಧನ ಭೀತಿಯಿಂದ ಪಾರಾಗಿದ್ದಾರೆ.
ತಮ್ಮ ವಿರುದ್ಧದ ವಿಚಾರಣೆ ರದ್ದು ಕೋರಿ ಡಾ. ಕೆ. ಸುಧಾಕರ್ ಹಾಗೂ ಗೋವಿಂದಪ್ಪ ಪ್ರತ್ಯೇಕವಾಗಿ ಸಲ್ಲಿಸಿದ ಅರ್ಜಿಗಳನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ವಿಚಾರಣೆ ನಡೆಸಿ ಈ ಆದೇಶ ನೀಡಿದೆ.

ಮಾದನಾಯಕನಹಳ್ಳಿ ಪೊಲೀಸರು ನೆಲಮಂಗಲ ಜೆಎಂಎಫ್‌ಸಿ ಕೋರ್ಟ್‌ಗೆ ಸಲ್ಲಿಸಿರುವ ಚಾರ್ಜ್‌ಶೀಟ್ ಮತ್ತು ಅದರ ಆಧಾರದಲ್ಲಿ ಜೆಎಂಎಫ್‌ಸಿ ನ್ಯಾಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಗೆ ತಡೆ ನೀಡಿ ಆದೇಶಿಸಿದೆ.
'ಹಣಕ್ಕೂ ಸಂಸದರಿಗೂ ಸಂಬಂಧವಿಲ್ಲ'
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಗೋವಿಂದಪ್ಪ ಮನೆಯಲ್ಲಿ ಚುನಾವಣಾಧಿಕಾರಿಗಳು 4.8 ಕೋಟಿ ರೂ. ಜಪ್ತಿ ಮಾಡಿದ್ದರು. ಆ ಹಣಕ್ಕೂ ಡಾ. ಸುಧಾಕರ್ ಅವರಿಗೆ ಯಾವುದೇ ಸಂಬಂಧವಿಲ್ಲ. ಗೋವಿಂದ ಹಿಂದೆ ಡಾ. ಸುಧಾಕರ್ ಪ್ರತಿನಿಧಿಸುವ ರಾಜಕೀಯ ಪಕ್ಷದ ಪದಾಧಿಕಾರಿ ಆಗಿದ್ದರು. ಹಣ ಜಪ್ತಿ ಮಾಡಿದ ಪ್ರದೇಶ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ ಮತ್ತು ಆ ಕ್ಷೇತ್ರದಿಂದ ಡಾ. ಸುಧಾಕರ್ ಸ್ಪರ್ಧಿಸಿದ್ದು, ಜಪ್ತಿ ಮಾಡಿದ ಹಣ ಮತದಾರರಿಗೆ ಹಂಚಲು ಬಳಸಿಕೊಳ್ಳಲು ಸಂಗ್ರಹಿಸಿ ಇಡಲಾಗಿತ್ತು ಎಂಬ ಅನುಮಾನ ಮತ್ತು ಊಹೆಯ ಆಧಾರದಲ್ಲಿ ಅರ್ಜಿದಾರರ ವಿರುದ್ಧ ಐಪಿಸಿ 171-ಬಿ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದರು.
ಅಲ್ಲದೆ, ಐಪಿಸಿ-171-ಬಿ ಮತದಾರರಿಗೆ ಆಮಿಷ ಅಥವಾ ಲಂಚ ನೀಡುವ ಬಗ್ಗೆ ವ್ಯಾಖ್ಯಾನಿಸುತ್ತದೆ. ಅದರಂತೆ ಓಟಿಗಾಗಿ ಲಂಚ ಅಥವಾ ಹಣ ಹಂಚುವವರು ಮತ್ತು ಹಣ ತೆಗೆದುಕೊಳ್ಳುವವರು ಇಬ್ಬರು ಇರಬೇಕು. ಆರೋಪ ಸಾಬೀತಾಗಿಲ್ಲ ಎಂದು ಹೇಳಿದರು.
ಮುಖ್ಯವಾಗಿ ಈ ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ವಿಚಾರಣೆಗೆ ಆದೇಶಿಸಿದೆ. ಆದರೆ, ಈ ಪ್ರಕರಣ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ವ್ಯಾಪ್ತಿಗೆ ಬರುತ್ತದೆ. ಹಾಗಾಗಿ, ಮ್ಯಾಜಿಸ್ಟ್ರೇಟ್ ನ್ಯಾಯಾಲಯ ವಿಚಾರಣೆಗೆ ಆದೇಶಿಸಿರುವುದು ಕಾನೂನು ಬಾಹಿರ. ಈ ಹಿನ್ನೆಲೆಯಲ್ಲಿ ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸಬೇಕು ಎಂದು ಕೋರಿದರು.
ಸರ್ಕಾರದ ಪರ ವಕೀಲರು, ಪ್ರಕರಣ ರದ್ದುಪಡಿಸಬಾರದು, ಚುನಾವಣಾ ನೋಡಲ್ ಅಧಿಕಾರಿಗೆ ಅರ್ಜಿದಾರರು ಸಂದೇಶ ಕಳಿಸಿದ್ದು, ಫೋನ್ ಮಾಡಿರುವ ಸಾಕ್ಷಿ ಇದೆ. ದಾಳಿ ನಡೆಸಿದಾಗ 4.8 ಕೋಟಿ ರೂ. ಸಿಕ್ಕಿದೆ. ಆದ್ದರಿಂದ ಅರ್ಜಿದಾರ ಆರೋಪಿಗಳ ವಿಚಾರಣೆಗೆ ಅವಕಾಶ ನೀಡಬೇಕು ಎಂದು ಕೋರಿದರು.
ಪ್ರಕರಣದ ಹಿನ್ನೆಲೆ ಏನು..?
ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನದ ಹಿಂದಿನ ದಿನ ಚುನಾವಣಾ ಆಯೋಗದ ಅಧಿಕಾರಿಗಳು ಗೋವಿಂದಪ್ಪ ಅವರ ಮನೆಯಿಂದ 4.8 ಕೋಟಿ ರೂ. ಹಣವನ್ನು ಜಪ್ತಿ ಮಾಡಿದ್ದರು. ಈ ಹಣ ಚಿಕ್ಕಬಳ್ಳಾಪುರ ಲೋಕಸಭೆ ಚುನಾವಣೆಯಲ್ಲಿ ಮತದಾರರಿಗೆ ಹಂಚುವ ಹಣ ಎಂದು ಹೇಳಲಾಗಿತ್ತು. ಈ ವಿಚಾರವಾಗಿ ಚುನಾವಣಾ ನೀತಿ ಸಂಹಿತೆ ಜಾರಿಯ ರಾಜ್ಯ ನೋಡಲ್ ಅಧಿಕಾರಿ ಮನೀಶ್ ಮೌದ್ಗಿಲ್ ಅವರಿಗೆ ವಾಟ್ಸ್ ಆಪ್ ಮೆಸೇಜ್ ಮಾಡಿದ್ದ ಸುಧಾಕರ್ ಅವರು, ಪ್ರಕರಣದಲ್ಲಿ ತಮಗೆ ಸಹಾಯ ಮಾಡಿದರೆ ಅಭಾರಿಯಾಗಿರುತ್ತೇನೆ ಎಂದು ಕೇಳಿಕೊಂಡಿದ್ದರು ಎನ್ನಲಾಗಿದೆ. ಆದ್ದರಿಂದ ಚುನಾವಣಾ ನೀತಿ ಸಂಹಿತೆ ಜಾರಿ ತಂಡದ ಅಧಿಕಾರಿ ಮಾದನಾಯಕಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಎಫ್‌ಐಆರ್ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದ ಪೊಲೀಸರು, ನೆಲಮಂಗಲ ಜೆಎಂಎಫ್‌ಸಿ ಕೋರ್ಟ್‌ಗೆ ಆರೋಪ ಪಟ್ಟಿ ಸಲ್ಲಿಸಿದ್ದರು.












Click it and Unblock the Notifications