Get Updates
Get notified of breaking news, exclusive insights, and must-see stories!

ತಕರಾರು ಅರ್ಜಿ ಶೀಘ್ರ ವಿಲೇಮಾಡದ ತಹಶೀಲ್ದಾರರ ವಿರುದ್ಧ ಕಠಿಣ ಕ್ರಮ: ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಸಚಿವ ಕೃಷ್ಣ ಬೈರೇಗೌಡ

ಬೆಂಗಳೂರು ನವಿಂಬರ್ 10: ತಹಶೀಲ್ದಾರ್ ನ್ಯಾಯಾಲಯದಲ್ಲಿರುವ ತಕರಾರು ಅರ್ಜಿಗಳನ್ನು ಜನವರಿ ಒಳಗಾಗಿ ಸಂಪೂರ್ಣವಾಗಿ ನ್ಯಾಯಯುತ ವಿಲೇವಾರಿಮಾಡಬೇಕು, ಅಧಿಕಾರಿಗಳು ಈ ಸೂಚನೆಯನ್ನು ಪಾಲಿಸದೇ ಇದ್ದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳನ್ನು ಎಚ್ಚರಿಸಿದ್ದಾರೆ.

ಕಂದಾಯ ಇಲಾಖೆಯ ನಾಲ್ಕೂ ವಿಭಾಗದ ಪ್ರಗತಿ ಪರಿಶೀಲನಾ ಸಭೆಯನ್ನು ವಿಕಾಸೌಧದ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿತ್ತು. ಈ ವೇಳೆ ಕಳೆದ ನಾಲ್ಕು ತಿಂಗಳಿನಿಂದಲೂ ಹಲವು ಸೂಚನೆಗಳನ್ನು ನೀಡಿದ್ದಾಗ್ಯೂ ಉತ್ತಮ ನಿರ್ವಹಣೆ ತೋರದ ತಹಶೀಲ್ದಾರ್ ್ಗಳಿಗೆ ಎಚ್ಚರಿಕೆ ನೀಡಿದ ಸಚಿವರು, ''ಜನಸಾಮಾನ್ಯರು ಅವರ ದೈನಂದಿನ ಕೆಲಸ ಬಿಟ್ಟು ದಿನಂಪ್ರತಿ ನಿಮ್ಮ ಕಚೇರಿಗಳಿಗೆ ಅಲೆಯುತ್ತಿರಬೇಕಾ? ಎಂದು ಕಿಡಿಕಾರಿದರು. ಯಾವುದೇ ಪ್ರಕರಣ 90 ದಿನಗಳಲ್ಲಿ ಇತ್ಯಾರ್ಥಗೊಳ್ಳಬೇಕು ಎಂದು ಕಾನೂನು ಇದ್ದರೂ, ಐದು ವರ್ಷದಷ್ಟು ಹಳೆಯ ಪ್ರಕರಣಗಳೂ ಸಹ ಈವರೆಗೆ ವಿಲೇ ಆಗಿದೆ ಉಳಿಯಲು ಏನು ಕಾರಣ?'' ಎಂದು ಪ್ರಶ್ನಿಸಿದರು.

minister-krishna-byre-gowda-warns

ಮಂದುವರೆದು ಮಾತನಾಡಿದ ಅವರು, '' ಜನರಿಯ ಒಳಗೆ 90 ದಿನಕ್ಕೂ ಹಳೆಯ ಯಾವ ಪ್ರಕರಣಗಳೂ ಉಳಿಯಬಾರದು. ಒಂದು ವೇಳೆ ಅಧಿಕಾರಿಗಳು ಈ ಸೂಚನೆಯನ್ನು ಮೀರಿದಲ್ಲಿ ನೋಟೀಸ್ ಜಾರಿಗೊಳಿಸಲಾಗುವುದು ಹಾಗೂ ಕಠಿಣ ಕ್ರಮ ಜರುಗಿಸಲಾಗುವುದು'' ಎಂದು ಎಚ್ಚರಿಸಿದರು.

ಕಳೆದ ನಾಲ್ಕು ತಿಂಗಳಲ್ಲಿ 30000 ಪ್ರಕರಣ ವಿಲೇ:

ಸಭೆಯಲ್ಲಿ ಸಮರ್ಥ ಅಧಿಕಾರಿಗಳ ಬಗ್ಗೆ ಮೆಚ್ಚುಗೆಯನ್ನೂ ಸೂಚಿಸಿದ ಸಚಿವ ಕೇಷ್ಣ ಬೈರೇಗೌಡ ಅವರು,'' ನಮ್ಮ ಸರ್ಕಾರ ಅಧಿಕಾರಕ್ಕೇರಿದ ಸಂದರ್ಭದಲ್ಲಿ ಎಸಿ (ಉಪ ವಿಭಾಗಾಧಿಕಾರಿ) ನ್ಯಾಯಾಲಯದಲ್ಲೇ ಒಟ್ಟು 59,339 ಪ್ರಕರಣಗಳು ಬಾಕಿ ಇದ್ದವು.

ಆದರೆ, ಕಳೆದ ನಾಲ್ಕು ತಿಂಗಳ ಅವಧಿಯಲ್ಲೇ ಈ ಪ್ರಕರಣಗಳ ಸಂಖ್ಯೆಯನ್ನು 30000ಕ್ಕೆ ಇಳಿಸಲಾಗಿದೆ. ಮಂದಿನ ಮೂರು ತಿಂಗಳ ಅವಧಿಯಲ್ಲಿ ಈ ಎಲ್ಲಾ ಪ್ರಕರಣಗಳನ್ನೂ ಇತ್ಯಾರ್ಥಗೊಳಿಸಿ ಶೇ. 100ರಷ್ಟು ಸಾಧನೆ ಮಾಡಬೇಕಿದೆ'' ಎಂದು ಕಾಲಮಿತಿ ನೀಡಿದರು.

ಪಾರದರ್ಶಕ ಬರ ಪರಿಹಾರಕ್ಕೆ ಒತ್ತು:

ಬರ ಪರಿಹಾರದ ಹಣವನ್ನು ಸರಿಯಾದ ಸಮಯಕ್ಕೆ ಪಾರದರ್ಶವಾಗಿ ರೈತರಿಗೆ ತಲುಪಿಸಬೇಕು ಎಂದು ಸಭೆಯನ್ನು ಅಧಿಕಾರಿಗಳಿಗೆ ಸೂಚಿಸಲಾಯಿತು. ಬರ ಪರಿಹಾರ ಹಣ ನೀಡಲು ರಾಜ್ಯದ ಶೇ. 95ರಷ್ಟು ರೈತರ ಹೆಸರಲ್ಲಿ ಐಡಿ ಸೃಷ್ಟಿಸಲಾಗಿದೆ. ಆದರೆ, ಅವರ ಜಮೀನಿನ ಸಂಪೂರ್ಣ ವೀಸ್ತೀರಣದ ಮಾಹಿತಿಯನ್ನು ನಮೂದಿಸಲಾಗಿಲ್ಲ. ಇದರಿಂದ ಅರ್ಹ ರೈತರಿಗೆ ಸಂಪೂರ್ಣ ಪರಿಹಾರ ಸಿಗುವುದಿಲ್ಲ.

ಹೀಗಾಗಿ ಅಧಿಕಾರಿಗಳು ಅಭಿಯಾನ ಕೈಗೊಳ್ಳಬೇಕು, ಎಲ್ಲಾ ರೈತರ ಭೂಮಿಯ ವಿಸ್ತೀರ್ಣವನ್ನು ಸಂಪೂರ್ಣವಾಗಿ ''ಫ್ರೂಟ್ಸ್'' ತಂತ್ರಾಂಶದಲ್ಲಿ ನಮೂದಿಸಬೇಕು. ಈ ಮೂಲಕ ಎಲ್ಲಾ ರೈತರಿಗೂ ಪಾರದರ್ಶಕವಾಗಿ ಬರ ಪರಿಹಾರ ಹಣ ತಲುಪಲು ಸಹಕರಿಸಬೇಕು'' ಎಂದು ತಿಳಿಸಿದರು.

ಬಗರ್ ಹುಕುಂ ರೈತರಿಗೆ ಸಿಹಿ ಸುದ್ದಿ

ನಮೂನೆ 50, 53, 57ಕ್ಕೆ ಸಂಬಂಧಿಸಿದಂತೆ ಅಕ್ರಮ-ಸಕ್ರಮಗೊಳಿಸಿ ಸಾಗುವಳಿ ಚೀಟಿ ನೀಡಲು ಕೋರಿ ಸಾವಿರಾರು ಜನ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ಮುಂದಿನ 15 ದಿನಗಳೊಳಗಾಗಿ 100 ತಾಲೂಕುಗಳಲ್ಲಿ ಬಗರ್ ಹುಕುಂ ಸಮಿತಿ ರಚನೆ ಮಾಡಲಾಗುವುದು ಎಂದೂ ಸಭೆಯಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

minister-krishna-byre-gowda-warns

ಈ ಬಗ್ಗೆ ಮಾತನಾಡಿದ ಅವರು, "ಅಕ್ರಮವಾಗಿ ಸಾಗುವಳಿ ನಡೆಸುತ್ತಿರುವ ಅರ್ಹ ರೈತರಿಗೆ ಸಾಗುವಳಿ ಚೀಟಿ ನೀಡುವ ಸಲುವಾಗಿ ಬಗರ್ ಹುಕುಂ ಸಮಿತಿಯನ್ನು ಮುಂದಿನ 15 ದಿನಗಳ ಒಳಗಾಗಿ 100 ತಾಲೂಕುಗಳಲ್ಲಿ ರಚಿಸಲಾಗುವುದು. ಅಧಿಕಾರಿಗಳು ಮುಂದಿನ 6 ತಿಂಗಳಲ್ಲಿ ಯಾವ ಅರ್ಜಿಯೂ ಬಾಕಿ ಉಳಿಸದಂತೆ ಸಂಪೂರ್ಣ ವಿಲೇವಾರಿ ಮಾಡಬೇಕು. ಅಲ್ಲದೆ, ಅರ್ಹ ಫಲಾನುಭವಿಗಳಿಗೆ ಶೀಘ್ರ ಸಾಗುವಳಿ ಚೀಟಿ ನೀಡಬೇಕು ಎಂದು ಸೂಚಿಸಿದರು.

"ಅರ್ಜಿ ವಿಲೇವಾರಿ ಸಂದರ್ಭದಲ್ಲಿ ಪ್ರಭಾವಿಗಳ ಮಾತಿಗೆ ಮಣಿಯದೆ ಅಧಿಕಾರಿಗಳು ಯಾವುದೇ ಪ್ರಭಾವಿಗಳ ಅಥವಾ ರಾಜಕೀಯ ಪಕ್ಷದ ನಾಯಕರಿಗೆ ಅನುಕೂಲವಾಗುವಂತೆ ವರ್ತಿಸಬಾರದು, ಬದಲಾಗಿ ಬಡ ಜನರಿಗೆ ಮತ್ತು ಅರ್ಹರಿಗೆ ನ್ಯಾಯ ಒದಗಿಸಲು ಬದ್ಧರಾಗಿರಬೇಕು. ಬಗರ್ ಹುಕುಂ ಆಪ್ ಮೂಲಕ ಸ್ಯಾಟಲೈಟ್ ಇಮೇಜ್ ಮಾಹಿತಿ ಪಡೆದು ಅರ್ಜಿ ವಿಲೇವಾರಿ ಮಾಡಬೇಕು" ಎಂದು ತಾಕೀತು ಮಾಡಿದರು.

ಕಂದಾಯ ಗ್ರಾಮಗಳ ಘೋಷಣೆಗೂ ಕಾಲಮಿತಿ!

ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಂದಾಯ ಗ್ರಾಮಗಳ ಘೋಷಣೆಗೂ ಕಾಲಮಿತಿ ನಿಗದಿಪಡಿಸಲಾಯಿತು. ಊರಿನಿಂದ ಹೊರಗಡೆ ಇರುವಂತ ತಾಂಡ- ಗೊಲ್ಲರಹಟ್ಟಿ ಸೇರಿದಂತೆ ಸುಮಾರು 3292 ವಸತಿ ಪ್ರದೇಶಗಳಿವೆ. ಆದರೆ, ಈ ಯಾವ ಗ್ರಾಮಗಳೂ ಕಂದಾಯ ಇಲಾಖೆಗೆ ಸೇರದ ಕಾರಣ ಕಂದಾಯೇತರ ಜನವಸತಿ ನಿವಾಸಿಗಳು ಅಭಿವೃದ್ಧಿ ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆ.

ಇದೇ ಕಾರಣಕ್ಕೆ ಕರ್ನಾಟಕ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ತಂದು ತಾಂಡ-ಗೊಲ್ಲರಹಟ್ಟಿ ಸೇರಿದಂತೆ ಹಲವು ಪ್ರದೇಶಗಳನ್ನು ಕಂದಾಯ ಗ್ರಾಮ ಎಂದು ಘೋಷಿಸಲು ಅನುವುಮಾಡಿಕೊಡಲಾಗಿತ್ತು. ಸಾರ್ವಜನಿಕರ 30 ವರ್ಷಗಳ ಬೇಡಿಕೆಗೆ ಅನುಗುಣವಾಗಿ 2013ರ ಕಾಂಗ್ರೆಸ್ ಸರ್ಕಾರ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಹತ್ವದ ನಿರ್ಧಾರ ತೆಗದುಕೊಂಡಿದ್ದರು.

ಆದರೂ, ಕಳೆದ ಐದು ವರ್ಷಗಳ ಅವಧಿಯಲ್ಲಿ 1300 ಕಡೆಗಳಲ್ಲಿ ಮಾತ್ರ ಕಂದಾಯ ಗ್ರಾಮ ಘೋಷಿಸಲಾಗಿದೆ. ಉಳಿದ ತಾಂಡಾ-ಗೊಲ್ಲರಹಟ್ಟಿಗಳು ಹಲವು ಯೋಜನೆಗಳಿಂದ ವಂಚಿತವಾಗುತ್ತಿವೆ. ಹೀಗಾಗಿ ಜನವರಿ ಒಳಗಡೆ 1800 ಕಡೆ ಕಂದಾಯ ಗ್ರಾಮವಾಗಿ ಘೋಷಿಸಿ ಹಕ್ಕು ಪತ್ರ ನೀಡಿ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಒತ್ತು

ಕುಡಿಯುವ ನೀರಿನ ಸಮಸ್ಯೆ ಕಂಡುಬಂದ 24 ಗಂಟೆಗಳ ಒಳಗಾಗಿ ಆ ಭಾಗಕ್ಕೆ ಟ್ಯಾಂಕರ್ ಮೂಲಕ ನೀರನ್ನು ಪೂರೈಸಿ ಎಂದು ಅಧಿಕಾರಿಗಳಿಗೆ ಸಭೆಯಲ್ಲಿ ಸೂಚನೆ ನೀಡಲಾಯಿತು.

ಎಲ್ಲಾ ಜಿಲ್ಲಾಡಳಿತಗಳಲ್ಲೂ ಟ್ಯಾಂಕರ್ ಸಿದ್ದವಾಗಿರಬೇಕು ಹಾಗೂ ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆಗೆ ಪಡೆದು ಸಮಸ್ಯೆ ಇರುವ ಹಳ್ಳಿಗಳಿಗೆ ನೀರು ಸರಬರಾಜು ಮಾಡಬೇಕು. ಸದ್ಯಕ್ಕೆ ಯಾವ ಜಿಲ್ಲೆಯಲ್ಲೂ ಮೇವಿನ ಕೊರತೆ ಇಲ್ಲ. ಒಂದು ವೇಳೆ ಮೇವಿಗೆ ಕೊರತೆ ಕಂಡುಬಂದರೆ ಮೇವನ್ನೂ ಸಹ ಸೂಕ್ತ ಕಾಲಕ್ಕೆ ಜಿಲ್ಲಾಡಳಿತ ಒದಗಿಸಬೇಕು" ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+