ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಕೇಸ್: ಕೆಂಪೇಗೌಡ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಟ್ಟೆಚ್ಚರ
ಬೆಂಗಳೂರು ಮಾರ್ಚ್ 2: ಬೆಂಗಳೂರಿನ ರಾಮೇಶ್ವರ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಆದ ಬೆನ್ನಲ್ಲೆ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಕಟ್ಟೆಚ್ಚರ ವಹಿಸಲಾಗಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಸಿಐಎಸ್ಎಫ್ ಸಿಬ್ಬಂದಿ ಪ್ರತಿ ಪ್ರಯಾಣಿಕರ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.
ಏರ್ಪೋರ್ಟ್ ಗೆ ಬರುವ ಪ್ರತಿ ಪ್ರಯಾಣಿಕನ ಲೆಗೇಜ್ ಚೆಕ್ ಮಾಡಲಾಗುತ್ತಿದೆ. ಈಗಾಗಲೇ ಏರ್ಪೋರ್ಟ್ ಆಡಳಿತ ಮಂಡಳಿಗೆ ರಾಮೇಶ್ವರ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಸಿಸಿ ಟಿವಿ ವಿಶುವಲ್ಸ್ ಕಳಿಸಲಾಗಿದೆ. ಹೀಗಾಗಿ ಏರ್ಪೋರ್ಟ್ ನ ಇಂಟಲಿಜೆನ್ಸ್ ಸಿಬ್ಬಂದಿಗಳು ಕೂಡ ಅಲರ್ಟ್ ಆಗಿದ್ದಾರೆ. ಜೊತೆಗೆ ಬೇರೆ ಬೇರೆ ರಾಜ್ಯದಿಂದ ಬರುತ್ತಿರುವ ಪ್ರಯಾಣಿಕರ ತಪಾಸಣೆ ಮಾಡಲಾಗುತ್ತಿದೆ. ಹೆಚ್ಚು ಗಮನ ಹರಿಸಲಾಗಿದೆ.

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿರುವುದು ಬಾಂಬ್ ಸ್ಫೋಟ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಚಿತಪಡಿಸಿದ್ದಾರೆ. ಭಾರೀ ಸುಧಾರಿತ ವಸ್ತುಗಳನ್ನು ಬಳಸಿ ಸ್ಫೋಟ ಮಾಡಿದ್ದಾರೆ. ಓರ್ವ ವ್ಯಕ್ತಿ ಬ್ಯಾಗ್‌ನಲ್ಲಿ ಸ್ಫೋಟಕಗಳನ್ನು ತಂದಿಟ್ಟಿದ್ದಾನೆ. ನನಗೆ ಪ್ರತಿಹಂತದ ಮಾಹಿತಿ ಕೊಡುವಂತೆ ಪೊಲೀಸ್ ಆಯುಕ್ತರಿಗೆ ತಿಳಿಸಿದ್ದೇನೆ ಎಂದು ಹೇಳಿದ್ದಾರೆ.
ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ರಾಮೇಶ್ವರಂ ಕೆಫೆ ಹೋಟೆಲ್‌ನಲ್ಲಿ ಶುಕ್ರವಾರ ಮಧ್ಯಾಹ್ನ 1.30ಕ್ಕೆ ಸ್ಫೋಟ ಸಂಭವಿಸಿದ್ದು, 10 ಜನ ಗಾಯಗೊಂಡಿದ್ದಾರೆ. ಅದರಲ್ಲಿ ಇಬ್ಬರ ಸ್ಥಿತಿ ಗಂಭೀರ ಎಂದು ತಿಳಿದುಬಂದಿದೆ. ಮೊದಲು ಸಿಲಿಂಡರ್ ಸ್ಫೋಟ ಎನ್ನಲಾಗಿತ್ತು. ಆದರೆ, ಬಳಿಕ ಸುಧಾರಿತ ಐಇಡಿ ಬಳಸಿ ಸ್ಫೋಟಿಸಲಾಗಿದೆ ಎಂದು ತಿಳಿದುಬಂದಿದೆ.

ಘಟನೆಯಲ್ಲಿ ಓರ್ವ ಮಹಿಳೆ ತೀವ್ರವಾಗಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಒಟ್ಟು 9 ಮಂದಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಓರ್ವ ಶಂಕಿತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೆಫೆಯ ಒಳಗಡೆ ಸ್ಫೋಟಕವನ್ನು ಇರಿಸಿ ಬಳಿಕ ಬೈಕ್‌ನಲ್ಲಿ ತೆರಳಿದ್ದ ಶಂಕಿತನ ಬೈಕ್ ಮಾಹಿತಿಯನ್ನು ಆಧರಿಸಿ ಆತನನ್ನು ವಶಕ್ಕೆ ಪಡೆದು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದೆ.
ಹೋಟೆಲ್‌ನಲ್ಲಿ ಕೈ ತೊಳೆಯುವ ಜಾಗದಲ್ಲಿ ಅಪರಿಚಿತ ವ್ಯಕ್ತಿ ಬ್ಯಾಗ್ ಇಟ್ಟು ಹೋಗಿದ್ದು, ಅದರಿಂದ ಸ್ಫೋಟ ಸಂಭವಿಸಿದೆ. ಹೋಟೆಲ್ ಮಾಲೀಕ ನಾಗರಾಜ್ ಅವರು ಗ್ಯಾಸ್ ಸಿಲಿಂಡರ್‌ನಿಂದ ಸ್ಫೋಟ ಸಂಭವಿಸಿಲ್ಲ ಎಂದು ಸ್ಪಷ್ಟನೆಯನ್ನು ನೀಡಿದ್ದರು.

ರಾಮೇಶ್ವರಂ ಕೆಫೆಯಲ್ಲಿ ನಡೆದ ಭೀಕರ ಸ್ಫೋಟಕ್ಕೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್ 307 (ಕೊಲೆ ಯತ್ನ), 471 (ಸುಳ್ಳು ಸ್ಪಷ್ಟನೆಯ ದಸ್ತಾವೇಜನ್ನು ನೈಜವಾದುದೆಂದು ಬಳಸುವುದು) ಮತ್ತು ಯುಎಪಿಯ 16 (ಭಯೋತ್ಪಾದಕ ಕೃತ್ಯ), 18 (ಪಿತೂರಿ) ಹಾಗೂ 38 (ಭಯೋತ್ಪಾದಕ ಸಂಘಟನೆಗೆ ಸಂಬಂಧಿಸಿದ ಅಪರಾಧ) ಮತ್ತು ಎಕ್ಸ್‌ಪ್ಲೋಸಿವ್ ಸಬ್ಸ್ಟೆನ್ಸ್ ಆ್ಯಕ್ಟ್ 3 (ಜೀವಕ್ಕೆ ಅಥವಾ ಆಸ್ತಿಗೆ ಅಪಾಯನ್ನುಂಟುಮಾಡುವ ಸ್ಫೋಟ) ಮತ್ತು 4 (ಜೀವಕ್ಕೆ ಹಾನಿಯುಂಟುಮಾಡುವ ಉದ್ದೇಶದಿಂದ ಸ್ಫೋಟಕ ತಯಾರಿಕೆ) ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.












Click it and Unblock the Notifications