Dairy Milk: ಪರಭಾಷಿಕರಿಗೆ ಕನ್ನಡ ಪಾಠ ಮಾಡಲು ಟೀಚರ್ ಆದ ಡೈರಿ ಮಿಲ್ಕ್
ಕರ್ನಾಟಕಕ್ಕೆ ಬಂದಿರುವ ಬಹುತೇಕ ಪರಭಾಷಿಕರಿಗೆ ಕನ್ನಡ ಅಂದ್ರೆ ಸಿಟ್ಟಾಗುತ್ತಾರೆ. ನೇರವಾಗಿ ಕನ್ನಡ ಗೊತ್ತಿಲ್ಲ, ನಾವ್ ಕಲಿಯಲ್ಲ, ಮಾತನಾಡಲ್ಲ ಅಂತಾರೆ. ಇದೇ ವಿಚಾರಕ್ಕೆ ಬೀದಿ ಗಲಾಟೆಯಿಂದ ಹಿಡಿದು ಬೀದಿಗಿಳಿದು ಪ್ರತಿಭಟನೆಗಳೂ ನಡೆದಿವೆ. ಕೆಲವರು ಕನ್ನಡ ಕಲಿಸಲು ಹಲವು ಪ್ರಯತ್ನಗಳನ್ನೂ ಮಾಡಿದ್ದಾರೆ. ಸರ್ಕಾರದಿಂದಲೂ ಕನ್ನಡ ಕಲಿಕೆಗೆ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಅದು ಅಷ್ಟರಮಟ್ಟಿಗೆ ಯಶಸ್ವಿಯಾಗಿಲ್ಲ. ಇದೀಗ ಕಾಡ್ಬರೀಸ್ ಬ್ರ್ಯಾಂಡ್‌ನ ಹೆಸರಾಂತ ಡೈರಿ ಮಿಲ್ಕ್ (Cadbury Dairy Milk) ಚಾಕೊಲೇಟ್ ಮೂಲಕ ಪರಭಾಷಿಕರಿಗೆ ಕನ್ನಡ ಕಲಿಸಲು ವಿಭಿನ್ನ ಹೆಜ್ಜೆ ಇಟ್ಟಿದೆ.
ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ಎಂಬ ನಿಟ್ಟಿನಲ್ಲಿ ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡವನ್ನು ಕಡ್ಡಾಯವಾಗಿ ಬಳಸಬೇಕು ಎಂಬ ನಿಯಮವನ್ನ ಸರ್ಕಾರವೇ ರೂಪಿಸಿದೆ. ಆದರೆ ಪರಭಾಷಿಕರಿಂದ ಸ್ವಂತ ನೆಲದಲ್ಲಿ ಕನ್ನಡಕ್ಕೆ ಸಿಗಬೇಕಾದ ಗೌರವ, ಸ್ಥಾನಮಾನ ಸಿಗುತ್ತಿಲ್ಲ ಎನ್ನುವ ಮಾತಿದೆ. ಕೆಲವರು ಕನ್ನಡ ಕಲಿಯುವ ಆಸಕ್ತಿಯಿಂದ ತಾವಾಗಿಯೇ ಒಂದೊಂದು ಚಿಕ್ಕ ಪದಗಳನ್ನು ಕಲಿಯುವುದೂ ಉಂಟು. ಕೆಲವರು ಗೊತ್ತಿದ್ದರೂ ನಮಗೆ ಕನ್ನಡಕ್ಕಿಂತ ನಮ್ಮ ಭಾಷೆಯೇ ಹೆಚ್ಚು ದರ್ಪದಿಂದ ನಡೆದುಕೊಳ್ಳುವವರೂ ಇದ್ದಾರೆ. ಆದರೆ ಡೈರಿ ಮಿಲ್ಕ್ ಇದೀಗ ಕನ್ನಡ ಟೀಚರ್ ಕೆಲಸ ಮಾಡಲು ಮುಂದಾಗಿದೆ.

ಡೈರಿ ಮಿಲ್ಕ್ ಚಾಕೊಲೇಟ್ ಅಂದ್ರೆ ಸಣ್ಣ ಮಕ್ಕಳಿಂದ ದೊಡ್ಡವರಿಗೂ ಇಷ್ಟವಾಗುತ್ತೆ. ದಶಕಗಳಿಂದಲೂ ಬಾಯಿ ಸಿಹಿ ಮಾಡುತ್ತಿರುವ ಡೈರಿ ಮಿಲ್ಕ್‌ಗೆ ವಿಶೇಷ ಅಭಿಮಾನಿಗಳೂ ಇದ್ದಾರೆ. ಇಂದಿಗೂ ಮಕ್ಕಳಿಗೆ ಏನಾದರೂ ಕೊಡಿಸಬೇಕು ಅನ್ನೋರು ಮೊದಲಿಗೆ ಡೈರಿ ಮಿಲ್ಕ್ ಖರೀದಿಸುವುದು ವಾಡಿಕೆ. ಹೀಗಾಗಿ ಸಿಹಿ ಹಂಚುವ ಜೊತೆಗೆ ಸ್ವಲ್ಪ ಸ್ವಲ್ಪ ಕನ್ನಡವನ್ನೂ ಕಲಿಸೋಣ ಎಂದು ಮಹತ್ವದ ಹೆಜ್ಜೆ ಇಟ್ಟಿದೆ.
ಚಾಕೋಲೇಟ್ ಕವರ್ ಮೇಲೆ ಕನ್ನಡದಲ್ಲಿ ಪ್ರತಿನಿತ್ಯ ಬಳಸುವ ಸರಳ ಪದಗಳನ್ನು ಇಂಗ್ಲಿಷ್‌ನಲ್ಲೇ ಮುದ್ರಿಸಿ, ಅದರ ಅರ್ಥ ವಿವರಿಸುವ ವಿಭಿನ್ನ ಪ್ರಯತ್ನಕ್ಕೆ ಕೈಹಾಕಿದೆ. ನೇರವಾಗಿ ಕನ್ನಡ ಪದಗಳನ್ನು ಬಳಸುವುದರ ಬದಲಿಗೆ ಇಂಗ್ಲಿಷ್‌ನಲ್ಲೇ ಕನ್ನಡದ ಪದಗಳನ್ನು ಮುದ್ರಿಸಲಾಗಿದೆ. ಇದು ಸುಲಭವಾಗಿ ಮೆಸೇಜ್‌ನಲ್ಲಿ ಬಳಸುವ ಪದಗಳಂತೆಯೇ ಇವೆ. ಚಾಕೊಲೇಟ್ ಮೇಲೆ "ಸ್ವಲ್ಪ ಸ್ವಲ್ಪ ಕನ್ನಡ" ಎಂದು ಬರೆಯಲಾಗಿದೆ.
ಏನೆಲ್ಲ ಕನ್ನಡ ಪದಗಳ ಪಾಠ?
ಧನ್ಯವಾದ (dhanyavada)
ಏನು? (enu)
ಕ್ಷಮಿಸಿ (kshamisi)
ಹೇಗಿದ್ದೀಯಾ? (hegiddiya?)
ಸ್ವಲ್ಪ (swalpa)
ಸಹಾಯ ಬೇಕಾ? (sahaya beka)
ಸಂಜೆ (sanje)
ಬೆಳಿಗ್ಗೆ (beligge)
ರಾತ್ರಿ (ratri)
ಕನ್ನಡ ಭಾಷಾ ಕಲಿಕೆ ಸುಲಭವಾಗಬೇಕೆಂಬ ಉದ್ದೇಶದಿಂದ, ಜನಪ್ರಿಯ ಡೈರಿ ಮಿಲ್ಕ್ ಚಾಕೊಲೇಟ್ ಕಂಪನಿಯು ಈ ವಿಶಿಷ್ಟ ಪ್ಯಾಕೇಜ್ ಅನ್ನು ಪರಿಚಯಿಸಿದೆ. ಪರಭಾಷಿಕರಿಗೆ ಕನ್ನಡ ಭಾಷೆ ಕಲಿಕೆಗೆ ಪ್ರೋತ್ಸಾಹ ನೀಡುವುದು ಇದರ ಉದ್ದೇಶವಾಗಿದೆ. ಕನ್ನಡ ಗೊತ್ತಿಲ್ಲ ಎನ್ನುವವರಿಗೆ ಕನ್ನಡ ಕಲಿಸಲು ಡೈರಿ ಮಿಲ್ಕ್ ಚಾಕೊಲೇಟ್ ಇದೆ ಎಂದು ನನಗೆ ತಿಳಿದಿರಲಿಲ್ಲ, ಇದು ಒಳ್ಳೆಯ ಕೆಲಸ ಎಂದು ಕನ್ನಡಿಗರು ಫಿದಾ ಆಗಿದ್ದಾರೆ. ಈ ಪ್ರಯೋಗವು ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಕನ್ನಡ ಕಲಿಯಲು ಬಯಸುವ ವಲಸಿಗರಿಗೂ ಅನುಕೂಲವಾಗಲಿದೆ.
ಈ ಹಿಂದೆ ಭಾರತದಾದ್ಯಂತ ಭಾಷಾ ವೈವಿಧ್ಯತೆಯನ್ನು ಆಚರಿಸಲು ಕ್ಯಾಡ್ಬರಿ ಡೈರಿ ಮಿಲ್ಕ್ ಕನ್ನಡದಲ್ಲೇ "ಧನ್ಯವಾದಗಳು" ಎಂದು ಮುದ್ರಿಸಿದ್ದ ವಿಶೇಷ ಚಾಕೊಲೇಟ್‌ಗಳನ್ನು ಎಂಟು ವಿಭಿನ್ನ ಭಾಷೆಗಳಲ್ಲಿ ಹೊರತಂದಿತ್ತು. ಇಂಗ್ಲಿಷ್, ಹಿಂದಿ, ಮರಾಠಿ, ಗುಜರಾತಿ, ಬಂಗಾಳಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಈ ಚಾಕೊಲೇಟ್ ಗಮನ ಸೆಳೆದಿತ್ತು. ಇದೀಗ ಕನ್ನಡದ ಸರಳ ಹಾಗೂ ದಿನಬಳಕೆ ಪದಗಳನ್ನು ಕಲಿಸಲು ಮುಂದಾಗಿದೆ.












Click it and Unblock the Notifications