BWSSB: 110 ಹಳ್ಳಿಗಳಿಗೆ ಸಿಹಿಸುದ್ದಿ ಕೊಟ್ಟ ಬೆಂಗಳೂರು ಜಲಮಂಡಳಿ
ಬೆಂಗಳೂರು, ಮೇ 15: ಬೆಂಗಳೂರಿಗೆ ಭವಿಷ್ಯದ ಆಸರೆಯಾಗಿರುವ ಕಾವೇರಿ 5 ನೇ ಹಂತದ ಕಾಮಗಾರಿ ಸಂಪೂರ್ಣಗೊಳ್ಳಲುವ ಕಾಲ ಸನ್ನಿಹಿತವಾಗಿದೆ. ಈ ಯೋಜನೆಯಿಂದ ಬೆಂಗಳೂರಿಗೆ ನೀರು ತರಲಿರುವ ಜಲಮಂಡಳಿಯು ನಗರ ವ್ಯಾಪ್ತಿಯ 110 ಗ್ರಾಮಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ.
ಕಾವೇರಿ-5ನೇ ಹಂತದ ಕಾಮಗಾರಿಯನ್ನು ಹಾರೋಹಳ್ಳಿ ಬಳಿ ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ಪರಿಶೀಲನೆ ನಡೆಸಿ ಬಳಿಕ ಈ ಕುರಿತು ಪ್ರಕಟಣೆ ಹೊರಡಿಸಿದ್ದಾರೆ.

ಬೆಂಗಳೂರು ಜಲಂಡಳಿಯು ಅಧಿಕಾರಿಗಳು ತನ್ನ ವ್ಯಾಪ್ತಿಯ 110 ಗ್ರಾಮಗಳಲ್ಲಿ ಕಾವೇರಿ ನೀರು ಪೂರೈಕೆ ಮಾಡುವ ಸಲುವಾಗಿ ಅಷ್ಟು ಗ್ರಾಮಗಳ ಜನರ ಮನೆಬಾಗಿಲಿಗೆ ತೆರಳಲಿದ್ದಾರೆ. ಅಧಿಕಾರಿಗಳು ಎಲ್ಲ ಗ್ರಾಮದ ಜನರು ಕಾವೇರಿ ನೀರು ಪಡೆಯುವಂತೆ ಪ್ರೋತ್ಸಾಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಇನ್ನೇನು ಕಾಮಗಾರಿ ಪೂರ್ಣವಾಗಿ ನೀರು ಪೂರೈಕೆ ಆರಂಭ
ಈಗಾಗಲೇ ನಡೆಯುತ್ತಿದ್ದ ಕಾವೇರಿ 5 ನೇ ಹಂತದ ಅಂತಿಮ ಹಂತದ ಕಾಮಗಾರಿಗಳು ಅಂತಿಮ ಹಂತಕ್ಕೆ ಬಂದಿವೆ. ಇನ್ನು ಕೆಲವೇ ವಾರಗಳಲ್ಲಿ ಈ ಕಾಮಗಾರಿಗಳು ಪೂರ್ಣಗೊಳ್ಳಲಿದ್ದು, ನೀರು ಸರಬರಾಜು ಆರಂಭವಾಗಲಿದೆ. ಇದಕ್ಕೂ ಮೊದಲು ನೀರಿನ ಸೂಕ್ತ ಪೂರೈಕೆಗೆ ಅಗತ್ಯ ವ್ಯವಸ್ಥೆ ಕಲ್ಪಿಸಲಾಗುವುದು. ಹೊಸ ಕಾವೇರಿ ಸಂಪರ್ಕಗಳನ್ನು ನೋಂದಾಯಿಸಿಕೊಳ್ಳುವ ಪ್ರಕ್ರಿಯೆ ನಡೆಸಬೇಕಾಗಿದೆ ಎಂದು ಹೇಳಿದರು.
ಬೆಂಗಳೂರಿಗೆ ಹೆಚ್ಚುವರಿ ಕಾವೇರಿ ನೀರು ಲಭ್ಯ
ಈ 5 ನೇ ಹಂತದ ಯೋಜನೆಯಿಂದ ಬೆಂಗಳೂರು ನಗರಕ್ಕೆ 750 ಎಂಎಲ್‌ಡಿ ಯಷ್ಟು ಹೆಚ್ಚಿನ ನೀರು ಲಭ್ಯವಾಗಲಿದೆ. ಇದನ್ನ ಸಮರ್ಪಕವಾಗಿ ಬಳಕೆ ಮಾಡುವ ನಿಟ್ಟಿನಲ್ಲಿ ಈ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು 110 ಗ್ರಾಮಗಳಲ್ಲಿ ಎಲ್ಲರೂ ಕಾವೇರಿ ನೀರಿನ ಸಂಪರ್ಕ ಪಡೆಯಲು ಪ್ರೋತ್ಸಾಹಿಸಬೇಕು ಎಂದರು.

ಅನಧಿಕೃತ ಕಾವೇರಿ ನೀರಿನ ಸಂಪರ್ಕ ಪತ್ತೆಗೆ ಸೂಚನೆ
ಜಲಮಂಡಳಿಯಿಂದ ನೀರು ಪಡೆಯುವ ಉದ್ದೇಶಕ್ಕಾಗಿ 110 ಗ್ರಾಮಗಳಲ್ಲಿ ಕೆಲವೆಡೆ ಅನಧಿಕೃತವಾಗಿ ನೀರಿನ ಸಂಪರ್ಕ ಹೊಂದಲಾಗಿದೆ ಎಂಬ ದೂರುಗಳು ಕೇಳಿ ಬಂದಿವೆ. ಇವುಗಳ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ಇವುಗಳನ್ನ ಸಕ್ರಮಗೊಳಿಸಿ ಜಲಮಂಡಳಿಗೆ ಆದಾಯ ಬರುವಂತೆ ಕ್ರಮ ಕೈಗೊಳ್ಳಿ ಎಂದು ಅಧ್ಯಕ್ಷರು ನಿರ್ದೇಶಿಸಿದರು.
ಇನ್ನೂ ಐದನೇ ಹಂತದ ಕಾವೇರಿ ನೀರು ಪಡೆಯಲು ಹೊಸ ಸಂಪರ್ಕ ಪಡೆಯುವವರು ಜಲಮಂಡಳಿಯಲ್ಲಿ ನೊಂದಾಯಿಸಿಕೊಳ್ಳಬೇಕು. ಇದರಿಂದ ನೀರಿನ ಸದ್ಬಳಕೆ ಆಗುತ್ತದೆ. ಇದರೊಂದಿಗೆ ಜಲಮಂಡಳಿಗೆ ಅಗತ್ಯವಾದ ಆದಾಯ ದೊರೆಯಲಿದೆ. ಅದು ಸಾಲದ ಮರುಪಾವತಿಗೆ ನೆರವಾಗುತ್ತದೆ.
ಆದ್ದರಿಂದ ಅಧಿಕಾರಿಗಳು ಜನರ ಮನೆಬಾಗಿಲಿಗೆ ತೆರಳಿ ನೀರಿನ ಸಂಪರ್ಕ ತಗೆದುಕೊಳ್ಳುವ ನಿಟ್ಟಿನಲ್ಲಿ ಪ್ರೋತ್ಸಾಹಿಸಬೇಕು. ಹೆಚ್ಚಿನ ಜನರು ಕಾವೇರಿ ನೀರಿನ ಸಂಪರ್ಕ ಪಡೆದುಕೊಳ್ಳುವಂತೆ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.












Click it and Unblock the Notifications