IPL 2025: ಬೆಂಗಳೂರಲ್ಲಿ ಆರ್‌ಸಿಬಿ ಪಂದ್ಯಾವಳಿ: ನೀರು ಪೂರೈಕೆ ಬಗ್ಗೆ BWSSB ಮಹತ್ವದ ಮಾಹಿತಿ
ಬೆಂಗಳೂರು, ಮಾರ್ಚ್ 10: ಇಂಡಿಯನ್ ಪ್ರೀಮಿಯರ್ ಲೀಗ್ ಇದೇ ಮಾರ್ಚ್ 22ರಿಂದ ಮೇ 25ರವರೆಗೆ ನಡೆಯಲಿದೆ. ಇದರಲ್ಲಿ ಕೆಲವು ಕ್ರಿಕೆಟ್ ಪಂದ್ಯಾವಳಿಗಳು ಬೆಂಗಳೂರಿನಲ್ಲಿ ನಡೆಯಲಿವೆ. ಗುಜ್‌ರಾತ್, RCB, ರಾಜಸ್ಥಾನ್ ರಾಯಲ್ಸ್, ಮುಂಬೈ ಟೀಂಗಳು ಸೇರಿದಂತೆ ಕೆಲವು ಪಂದ್ಯಾವಳಿಗಳು ಇಲ್ಲಿನ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ನಡೆಯಲಿವೆ. ಈ ಬಾರಿಯೂ ನೀರು ಪೂರೈಕೆ ವಿಚಾರವಾಗಿ 'ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ'ಯು (BWSSB) ಮಹತ್ವದ ಮಾಹಿತಿ ನೀಡಿದೆ.
ಬೆಂಗಳೂರು ನಗರ ಏಷ್ಯಾದಲ್ಲೇ ಅತೀ ಹೆಚ್ಚು ಸಂಸ್ಕರಿಸಿದ ನೀರಿನ ಮರುಬಳಕೆಯ ಖ್ಯಾತಿ ಪಡೆದಿದೆ. ಸಂಸ್ಕರಿಸಿದ ನೀರಿನ ಮರುಬಳಕೆಯ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿಸಲು BWSSB ಪ್ಲಾನ್ ಮಾಡಿಕೊಂಡಿದೆ. ಈ ನಿಟ್ಟಿನಲ್ಲಿ ಈ ವರ್ಷವು IPL 2025 ವೇಳೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯಿಂದ ಸಂಸ್ಕರಿಸಿದ ನೀರನ್ನು ಸರಬರಾಜು ಮಾಡಲಿದೆ ಎಂದು ಮಂಡಳಿ ಅಧ್ಯಕ್ಷ ಡಾ ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಕಳೆದ ಬಾರಿ ಬೆಂಗಳೂರು ನಗರದಲ್ಲಿ ನೀರಿನ ಸಮಸ್ಯೆ ತೀವ್ರವಾದಾಗ ಸಂಸ್ಕರಿಸಿದ ನೀರಿನ ಬಳಕೆಗೆ ಉತ್ತೇಜನ ನೀಡಲಾಗಿತ್ತು. ಈ ಬಾರಿಯೂ IISc ವಿಜ್ಞಾನಿಗಳು ಅಂತರ್ಜಲ ಕುಸಿತದಿಂದ ನೀರಿನ ಕೊರತೆ ಉಂಟಾಗಲಿರುವ ಬಗ್ಗೆ ಮುನ್ಸೂಚನೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಬೆಂಗಳೂರು ಜಲಮಂಡಳಿ ಸಂಸ್ಕರಿಸಿದ ನೀರಿನ ಮರುಬಳಕೆಯ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಲು ಮುಂದಾಗಿದೆ.
ಕುಡಿಯುವ ಹಾಗೂ ಅಡುಗೆಗೆ ಹೊರತುಪಡಿಸಿ ಬಹಳಷ್ಟು ದಿನನಿತ್ಯದ ಚಟುವಟಿಕೆಗಳಿಗೆ ಸಂಸ್ಕರಿಸಿದ ನೀರನ್ನು ಬಳಸಬಹುದಾಗಿದೆ. ದೇಶದ ಗಮನ ಸೆಳೆಯುವಂತಹ ಐಪಿಎಲ್ ಕ್ರೀಡಾ ಕೂಟಕ್ಕೆ ಅಗತ್ಯವಿರುವ ನೀರಿನ ಅವಶ್ಯಕತೆ ಪೂರೈಸುವ ನಿಟ್ಟಿನಲ್ಲಿ ಸಂಸ್ಕರಿಸಿದ ನೀರನ್ನು ಸರಬರಾಜು ಮಾಡಲಾಗುವುದು. ಇದರಿಂದ ದೇಶಾದ್ಯಂತ ಇನ್ನಷ್ಟು ಸಂಸ್ಕರಿಸಿದ ನೀರಿನ ಮರುಬಳಕೆಯ ಬಗ್ಗೆ ಹೆಚ್ಚಿನ ಪ್ರಚಾರವಾಗಲಿದೆ. ಈ ಹಿನ್ನಲೆಯಲ್ಲಿ ಈ ಬಾರಿಯೂ ಬೆಂಗಳೂರು ಜಲಮಂಡಳಿ ಸಂಸ್ಕರಿಸಿದ ನೀರಿನ ಪೂರೈಕಗೆ ಸಿದ್ಧತೆ ನಡೆದಿದೆ ಎಂದರು.
ಪಂದ್ಯಾವಳಿಗಳ ಸಂದರ್ಭದಲ್ಲಿ ಪ್ರತಿನಿತ್ಯ ಸುಮಾರು 75,000 ಲೀಟರ್ ಗಳಷ್ಟು ನೀರಿನ ಅವಶ್ಯಕತೆ ಬೀಳುತ್ತದೆ. ಇದಕ್ಕಾಗಿ ಕಬ್ಬನ್ ಪಾರ್ಕ್ ತ್ಯಾಜ್ಯ ನೀರು ಸಂಸ್ಕರಣ ಘಟಕದಿಂದ ಅಗತ್ಯ ನೀರನ್ನು ದೊರಕಿಸಿ ಕೊಡುವಂತೆ KSCA ಪದಾಧಿಕಾರಿಗಳು ಮಾಡಿದ್ದ ಮನವಿಗೆ ಸ್ಪಂದಿಸಿ ಕಳೆದ ವರ್ಷದಿಂದ ಸಂಸ್ಕರಿಸಿದ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಇದೇ ವ್ಯವಸ್ಥೆಯನ್ನು ಈ ಬಾರಿಯೂ ಮುಂದುವರೆಸುವುದಾಗಿ ಅಧ್ಯಕ್ಷರು ತಿಳಿಸಿದರು.












Click it and Unblock the Notifications