Breaking: ಬೆಂಗಳೂರು ಜಲಮಂಡಳಿಯ ಟಿಕೆ ಹಳ್ಳಿ ಪಂಪಿಂಗ್ ಘಟಕಕ್ಕೆ ನುಗ್ಗಿದ ಮಳೆ ನೀರು
ಬೆಂಗಳೂರು ಸೆಪ್ಟಂಬರ್ 05: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನಲ್ಲಿರುವ ತೊರೆಕಾಡನಹಳ್ಳಿ (ಟಿಕೆ ಹಳ್ಳಿ) ನೀರು ಪಂಪಿಂಗ್ ಘಟಕಕ್ಕೆ ನೀರು ತುಂಬಿಕೊಂಡಿದೆ. ತಾಂತ್ರಿಕ ಸಹಾಯದಿಂದ ನೀರು ತೆಗೆಯುವ ಕೆಲಸವಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮಂಡ್ಯ ಜಿಲ್ಲೆ ಭೇಟಿಗೂ ಮುನ್ನ ಸೋಮವಾರ ಬೆಂಗಳೂರಿನಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ನೀರು ಪಂಪಿಂಗ್ ಘಟಕಕ್ಕೆ ಮಳೆ ನೀರು ನುಗ್ಗಿ ಕಾವೇರಿ ನೀರು ಸರಬರಾಜು ಸ್ಥಗಿತಗೊಂಡಿದೆ. ಈ ಬಗ್ಗೆ ಬೆಳಗ್ಗೆ ಮಾಹಿತಿ ಗೊತ್ತಾಗಿದ್ದು, ಶಿಕ್ಷಕರ ದಿನಾಚರಣೆ ಪೂರ್ಣಗೊಳಿಸಿ ಮಂಡ್ಯದ ಟಿಕೆ ಹಳ್ಳಿಯ ಘಟಕಕ್ಕೆ ತೆರಳುವುದಾಗಿ ಅವರು ಹೇಳಿದರು.
ಮಳೆಯಿಂದಾಗಿ ಟಿಕೆ ಹಳ್ಳಿಯ ಕಾವೇರಿ ನೀರು ಪಂಪಿಂಗ್ ಘಟಕದಲ್ಲಿ ಪಂಪ್‌ಸೆಟ್, ತಾಂತ್ರಿಕ ಸಹಾಯದಿಂದ ನೀರು ಹೊರತೆಗೆಯು ಕೆಲಸವಾಗುತ್ತಿದೆ. ಮಧ್ಯಾಹ್ನದ ಹೊತ್ತಿಗೆ ಎಲ್ಲವೂ ಸರಿಹೋಗಲಿದೆ. ಈಗಾಗಲೆ ಬೆಂಗಳೂರು ಜಲಮಂಡಳಿ ಅಧಿಕಾರಿಗಳು, ಎಂಜಿನಿಯರ್‌ಗಳೂ ಹಾಗೂ ಮಂಡ್ಯ ಜಿಲ್ಲೆಯ ಆ ಭಾಗದ ಎಂಜಿನಿಯರ್‌ಗಳು ಸೇರಿದಂತೆ ಸರ್ಕಾರದ ಕಾರ್ಯದರ್ಶಿಗಳು ಸ್ಥಳಕ್ಕೆ ತೆರಳಿದ್ದಾರೆ. ಅಗತ್ಯ ಕ್ರಮಗಳೆಲ್ಲವನ್ನು ಕೈಗೊಂಡಿದ್ದಾರೆ ಎಂದು ಸುದ್ದಿಗಾರರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.

ಮಹದೇವಪುರ, ಬೊಮ್ಮನಹಳ್ಳಿಯಲ್ಲೂ ಮಳೆ ಅವಾಂತರ
ಭಾನುವಾರ ರಾತ್ರಿಯಿಂದ ಸುರಿದ ಭಾರಿ ಮಳೆಗೆ ಬೆಂಗಳೂರಲ್ಲೂ ಸಮಸ್ಯೆಗಳು ಉಂಟಾಗಿವೆ. ಕಳೆದ ಎರಡು ದಿನದ ಹಿಂದೆ ಆಗಿದ್ದ ಪ್ರದೇಶಗಳಲ್ಲೇ ಮಳೆಯಿಂದ ಮತ್ತೆ ಸಮಸ್ಯೆ ಉಂಟಾಗಿದೆ. ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಸುಮಾರು 30ಕಡೆ ಹಾಗೂ ಬೊಮ್ಮನಹಳ್ಳಿಯ ಹಲವು ಕಡೆಗಳಲ್ಲಿ ಮಳೆಯಿಂದ ಜನ ತತ್ತರಿಸಿದ್ದಾರೆ.

ಈ ಸಂಬಂಧ ಅಗತ್ಯ ನೆರವಿಗಾಗಿ ಎರಡು ಕಡೆಗಳಲ್ಲೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್)ಯ 30 ಜನರ ತಂಡಗಳನ್ನು ಕಳುಹಿಸಲಾಗಿದೆ. ರಸ್ತೆ ಹಾಗೂ ಬಡಾವಣೆಗಳಲ್ಲಿ ನಿಂತ ನೀರಿನ ತೆರವಿಗೆ ಕ್ರಮ ಕೈಗೊಳ್ಳಲಾಗಿದೆ. ರಕ್ಷಣಾ ಪಡೆಗಳ ಜತೆಗೆ ಜನರ ಸುರಕ್ಷತೆಗೆ ಬೋಟ್ ವ್ಯವಸ್ತೆ ಸಹ ಮಾಡಲಾಗಿದೆ. ಸಿಬ್ಬಂದಿ ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಬೊಮ್ಮಾಯಿ ವಿವರಿಸಿದರು.












Click it and Unblock the Notifications