BWSSB: ಮಳೆಗಾಲದಲ್ಲೂ ಬೆಂಗಳೂರಿನ ಇಲ್ಲಿ 'ಟ್ಯಾಂಕರ್' ನೀರೇ ಆಧಾರ, ಪತ್ತೆಯಾಗದ ಸಮಸ್ಯೆ.!
ಬೆಂಗಳೂರು, ಜುಲೈ 25: ಬೆಂಗಳೂರಿನಲ್ಲಿ ಬೇಸಿಗೆ ಕಾಲದಲ್ಲಿ ನೀರಿಗೆ ಹಾಹಾಕಾರ ಸ್ಥಿತಿ ಉಂಟಾಗುವುದು ಸಾಮಾನ್ಯ. ಆದರೆ ರಾಜ್ಯಾದ್ಯಂತ ಈ ಮಟ್ಟಿಗೆ ಭಾರೀ ಮಳೆ ಆದರೂ ಸಹಿತ, ಕಾವೇರಿ ಕೊಳ್ಳದಲ್ಲಿ ನೀರಿದ್ದರೂ ಸಹಿತ ರಾಜಧಾನಿಯ ಈ ಬಡಾವಣೆಗಳಿಗೆ ಟ್ಯಾಂಕರ್ ನೀರೇ ಆಧಾರವಾಗಿದೆ.
ಬೆಂಗಳೂರಿನ ಬೇಗೂರು ರಸ್ತೆಯನ್ನು ಸೇಂಟ್ ಫ್ರಾನ್ಸಿಸ್ ಶಾಲೆಯ ಬಳಿ ನೀರಿನ ಅಭಾವ ಉಂಟಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಇಲ್ಲಿನ ಬಡಾವಣೆಗಳ ಜನರಿಗೆ ಆರೋಗ್ಯಕರ ನೀರು ಸಿಗುತ್ತಿಲ್ಲ. ಮಳೆಗಾಲದಲ್ಲೂ ಜನ ನೀರಿಗೆ ತತ್ತರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಉಳ್ಳವರು ಟ್ಯಾಂಕರ್ ನೀರು ತರಿಸುತ್ತಿದ್ದಾರೆ ಎನ್ನಲಾಗಿದೆ.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB)ಯು ಕಾವೇರಿ ನದಿಯಿಂದ ನಗರಕ್ಕೆ ನೀರು ಪೂರೈಸುತ್ತಿದೆ. ಆದರೆ ಈ ರಸ್ತೆಯಲ್ಲಿ ಒಡೆದು ಹೋಗಿರುವ ನೀರು ಪೂರೈಕೆಯ ಪೈಪ್ ಸ್ಥಳ ಪತ್ತೆ ಮಾಡುವಲ್ಲಿ ವಿಫಲವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ರಸ್ತೆಯ ಅಕ್ಕಪಕ್ಕದ ಬಡಾವಣೆಗಳ ಜನರಿಗೆ ಸಮಸ್ಯೆ ಉಂಟಾಗಿದೆ.
ಅಸಲಿಗೆ ಇದು 110 ಹಳ್ಳಿಗಳ ವ್ಯಾಪ್ತಿಯಲ್ಲಿ ಬರುತ್ತದೆ. ಇಲ್ಲಿ ಬೆಂಗಳೂರು ಜಲಮಮಂಡಳಿಯು ಪರಿಪೂರ್ಣ ನೀರಿನ ಪೈಪ್ ಲೈನ್‌ಗಳು ಒದಗಿಸುವ ಕಾರ್ಯ ನಡೆಯುತ್ತಿದೆ. ಕುಡಿಯುವ ನೀರಿನ ಪೈಪ್‌ಲೈನ್ ವ್ಯವಸ್ಥೆ ಇರುವ ಸ್ಥಳದಲ್ಲಿ ಸಮಸ್ಯೆ ಆಗಿದ್ದು, ಇದನ್ನು ಜಲಮಂಡಳಿ ಅಧಿಕಾರಿಗಳೇ ನಿರ್ವಹಿಸುತ್ತಿದ್ದಾರೆ.
ಕೊಳಚೆ ಮಿಶ್ರಿತ ನೀರು, ಅನಾರೋಗ್ಯದ ಆತಂಕ
ಕಾವೇರಿ ನೀರಿನ ಪೈಪ್ ಒಡೆದ ಪರಿಣಾಮ, ಕೊಳಚೆ ನೀರು ಪೈಪ್ ಒಳಗೆ ಮಿಶ್ರಣಗೊಂಡು ಪೂರೈಕೆ ಆಗುತ್ತಿದೆ. ಹೀಗಾಗಿ ಈ ಭಾಗದ ಜನರು ಆನಾರೋಗ್ಯ ಉಂಟಾಗುವ ಆತಕದಲ್ಲಿದ್ದಾರೆ. ಇಂತಹ ತೊಂದರೆ ಆದಾಗ ಸಮಸ್ಯೆ ಕಂಡುಹಿಡಿಯಲು ಹಲವೆಡೆ ಅಂತಹ ಪೈಪ್‌ಗಳನ್ನು ಅಳವಡಿಸಲಾಗಿದೆ. ಆದರೆ ಪೈಪ್ ಎಲ್ಲಿ, ಎಷ್ಟು ಕಡೆಗಳಲ್ಲಿ ಒಡೆದಿವೆ ಎಂಬುದು ನಾಲ್ಕು ದಿನವಾದರೂ ಪತ್ತೆ ಆಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಇದರಿಂದ ನೀರಿನ ಅಭಾವ ಉಂಟಾಗುವುದು ಮಾತ್ರವಲ್ಲದೆ ವಾಹನ ಸವಾರರು ವಾಹನ ಚಲಾಯಿಸಲು ಪರದಾಡುವಂತಾಗಿದೆ. ಜನರಿಗೆ ಸದ್ಯಕ್ಕೆ ಟ್ಯಾಂಕರ್ ನೀರೆ ಆಧಾರವಾಗಿದೆ. ಈ ಕುರಿತು ಬೆಂಗಳೂರು ಜಲಮಂಡಳಿಯು ಸಮಸ್ಯೆ ಸೃಷ್ಟಿಯಾಗಿ ಮೂರು ದಿನಗಳ ನಂತರ ಕಾರ್ಯಪವೃತ್ತವಾಗಿದೆ ಎಂದು ಸ್ಥಳೀಯರು ದೂರಿದರು.
BWSSB ಅಧಿಕಾರಿಗಳು ಹೇಳಿದ್ದೇನು?
ಸಮಸ್ಯೆ ಕುರಿತು 'ಒನ್ ಇಂಡಿಯಾ ಕನ್ನಡ' ಜೊತೆಗೆ ಮಾತನಾಡಿದ ಬೆಂಗಳೂರು ಜಲಮಂಡಳಿಯ ಕಾರ್ಯನಿರ್ವಾಹಕ ಇಂಜಿನಿಯರ್ ಅಧಿಕಾರಿ ರಾಘವೇಂದ್ರ ಅವರು, ನಮ್ಮ ಜಲಮಂಡಳಿ ಅಧಿಕಾರಿಗಳು ಸಮಸ್ಯೆ ಪತ್ತೆ ಮಾಡಿದ್ದಾರೆ. ಒಂದು ಕಡೆ ಪೈಪ್ ಒಡೆದಿರುವುದನ್ನು ಬೊಮ್ಮನಹಳ್ಳಿ ವಲಯದ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಇನ್ನು ಎಲ್ಲೆಲ್ಲಿ ಒಡೆದಿದೆ ನೋಡಿಕೊಂಡು ಶನಿವಾರದ ಒಳಗೆ ಸಮಸ್ಯೆ ಬಗೆಹರಿಸಲಿದ್ದಾರೆ ಎಂದು ಜಲಮಂಡಳಿ ಪರ ಮಾಹಿತಿ ನೀಡಿದರು.
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ಭೂಗತ ಕಾರ್ಯ ಕೈಗೊಂಡ ವೇಳೆ ಪೈಪ್ ಒಡೆದು ಈ ರೀತಿ ಸಮಸ್ಯೆ ಆಗಿದೆ. ಇದು ಬೊಮ್ಮನಹಳ್ಳಿ ವಲಯವ್ಯಾಪ್ತಿಗೆ ಬರುತ್ತದೆ. ಇನ್ನೆರಡು ದಿನದಲ್ಲಿ ಸಮಸ್ಯೆ ಬಗೆಹರಿಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications