BWSSB: ಜಲಮಂಡಳಿಯ 2.90 ಲಕ್ಷಕ್ಕೂ ಹೆಚ್ಚು ಗ್ರಾಹಕರ ಮಾಹಿತಿ ಸೋರಿಕೆ!
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ (BWSSB) ನೀರಿನ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸುವ ಪೋರ್ಟಲ್‌ನಲ್ಲಿ ಪ್ರಮುಖ ದತ್ತಾಂಶ ಉಲ್ಲಂಘನೆಯಾಗಿರುವ ವಿಚಾರ ಬೆಳಕಿಗೆ ಬಂದಿದ್ದು, ಬರೋಬ್ಬರಿ 2.90 ಲಕ್ಷಕ್ಕೂ ಹೆಚ್ಚು ಗ್ರಾಹಕರ ವಿವರಗಳು ಸೋರಿಕೆಯಾಗಿವೆ. ಪ್ಯಾನ್ ಕಾರ್ಡ್, ಆಧಾರ್ ಸಂಖ್ಯೆಗಳು, ಪಾವತಿ ಡೇಟಾ ಮತ್ತು ಮೊಬೈಲ್ ಸಂಖ್ಯೆಗಳು ಸೇರಿದಂತೆ ಈ ದಾಖಲೆಗಳನ್ನು ಇಂಟರ್ನೆಟ್‌ನಲ್ಲಿ ಭೂಗತ ಡೇಟಾ ಸೋರಿಕೆ ವೇದಿಕೆಯಲ್ಲಿ ಸುಮಾರು 500 ಡಾಲರ್‌ಗಳಿಗೆ ಮಾರಾಟಕ್ಕೆ ಇಡಲಾಗಿತ್ತು ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಬೆಂಗಳೂರು ಮೂಲದ ಸೈಬರ್ ಭದ್ರತಾ ಸಂಸ್ಥೆಯಾದ ಕ್ಲೌಡ್‌ಸೆಕ್ ನಡೆಸಿದ ತನಿಖೆಯಲ್ಲಿ ಈ ವಿಚಾರ ಬೆಳಕಿಗೆ ಬಂದಿದೆ. ಇದು ಡಾರ್ಕ್ ವೆಬ್ ಅನ್ನು ಆಗಾಗ ಮೇಲ್ವಿಚಾರಣೆ ಮಾಡುತ್ತದೆ. ಈ ಸಂಬಂಧ ಈ ತಂಡವು ತಮಗೆ ಸಿಕ್ಕಿರುವ ಮಾಹಿತಿಯನ್ನು ಜಲಮಂಡಳಿ ಅಧ್ಯಕ್ಷರು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಶೇಷ ಕರ್ತವ್ಯಾಧಿಕಾರಿಗೂ ಇಮೇಲ್ ಮಾಡಿರುವುದಾಗಿ ತಿಳಿದುಬಂದಿದೆ.

ಏಪ್ರಿಲ್ 10ರಂದು ಕ್ಲೌಡ್‌ಸೆಕ್ ಜಲಮಂಡಳಿಯ ಡೇಟಾಬೇಸ್‌ಗೆ ನೇರ ಪ್ರವೇಶ ಇರುವುದನ್ನು ಹಾಗೂ ಬ್ರೀಚ್‌ಫೋರಮ್‌ನಲ್ಲಿ ಮಾರಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದೆ. ಜಲಮಂಡಳಿ ಡೇಟಾಬೇಸ್‌ಗೆ ಪ್ರವೇಶ ಪಡೆಯಲು 500 ಡಾಲರ್ ಪಾವತಿಸಬೇಕು ಎಂದು ಮೊತ್ತ ಕೂಡ ನಿಗದಿಪಡಿಸಲಾಗಿತ್ತು ಎಂಬುದು ಇದೀಗ ಬಯಲಿಗೆ ಬಂದಿದೆ. ಡೇಟಾಬೇಸ್‌ನಲ್ಲಿ ಬರೋಬ್ಬರಿ 2,91,212 ಬಳಕೆದಾರರ ದಾಖಲೆಗಳಿವೆ. ಈ ಡೇಟಾ ಬಳಕೆದಾರರ ಪಾಸ್‌ವರ್ಡ್‌ಗಳನ್ನು ಒಳಗೊಂಡಿಲ್ಲ. ಪೋಸ್ಟ್ ಮಾದರಿಯಲ್ಲಿ ಡೇಟಾದ ಕೆಲವು ಸಾಲುಗಳನ್ನು ಒಳಗೊಂಡಿತ್ತು. ಡೇಟಾ ಡಂಪ್ ಹೊರತುಪಡಿಸಿ, ನೇರ ರೂಟ್ ಪ್ರವೇಶವು ಖರೀದಿದಾರರಿಗೆ ಜಲಮಂಡಳಿಯ ನಿರ್ಣಾಯಕ ಕಾರ್ಯಾಚರಣೆಯ ಡೇಟಾವನ್ನು ತಿದ್ದಲು ಅಥವಾ ಅಳಿಸಲು ಅನುವು ಮಾಡಿಕೊಡುತ್ತದೆ ಎಂದು ಪತ್ತೆ ಹಚ್ಚಿದೆ.
ಜಲಮಂಡಳಿ ಹೇಳಿದ್ದೇನು?
ಸೈಬರ್ ವಂಚಕರು ಸಾರ್ವಜನಿಕವಾಗಿ ಪ್ರವೇಶಿಸಬಹುದಾದ ಫೈಲ್‌ನಲ್ಲಿ ಡೇಟಾಬೇಸ್ ಬಳಸಿಕೊಳ್ಳುವ ಮೂಲಕ 2,90,000ಕ್ಕೂ ಹೆಚ್ಚು ಬಳಕೆದಾರರ ದಾಖಲೆಗಳನ್ನು ಒಳಗೊಂಡಿರುವ ಜಲಮಂಡಳಿ ಡೇಟಾಬೇಸ್‌ಗೆ ಅನಧಿಕೃತ ಪ್ರವೇಶ ಪಡೆದಿದ್ದಾನೆ ಎಂದೂ ಕಂಡುಹಿಡಿದಿದೆ. ಆದರೆ ಜಲಮಂಡಳಿಯು ಎಲ್ಲ ಡೇಟಾ ಸುರಕ್ಷಿತವಾಗಿದೆ, ಅಗತ್ಯವಿರುವ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ. ಸಂಪೂರ್ಣ ಬಿಲ್ಲಿಂಗ್ ಡೇಟಾವನ್ನು ಕರ್ನಾಟಕ ಸರ್ಕಾರವು ನಿರ್ವಹಿಸುವ ರಾಜ್ಯ ಡೇಟಾ ಕೇಂದ್ರದಲ್ಲಿ ಸಂಗ್ರಹಿಸಲಾಗಿದೆ. ಇದನ್ನು ದಿನದ 24 ಗಂಟೆಯೂ ಮೇಲ್ವಿಚಾರಣೆ ನಡೆಸಲು ಹೆಚ್ಚಿನ ಭದ್ರತಾ ವ್ಯವಸ್ಥೆ ಇದೆ. ಬಿಲ್ಲಿಂಗ್ ಡೇಟಾದ ಉಲ್ಲಂಘನೆಯು ಅಸಾಧ್ಯ ಎಂದು ಹೇಳಿದೆ.

ಈ ವಿಚಾರ ಸಂಬಂಧ ಕ್ರಮ ಕೈಗೊಳ್ಳಲಾಗುವುದು. ನಾವು ಸೈಬರ್ ಕ್ರೈಂ ಪೊಲೀಸರಲ್ಲಿ ಪ್ರಕರಣ ದಾಖಲಿಸುತ್ತೇವೆ. ಒಂದು ವೇಳೆ ನಿಜವಾಗಿಯೂ ಉಲ್ಲಂಘನೆಯಾಗಿದ್ದರೆ, ನಾವು ಅದರ ಮೂಲವನ್ನು ಪತ್ತೆ ಹಚ್ಚುತ್ತೇವೆ. ಭವಿಷ್ಯದಲ್ಲಿ ಈ ರೀತಿ ಮತ್ತೆ ನಡೆಯದಂತೆ, ಇದಕ್ಕೆ ಪರಿಹಾರ ಕಂಡುಹಿಡಿಯಲು ನಮ್ಮ ತಾಂತ್ರಿಕ ತಂಡದ ಮೂಲಕ ಡೇಟಾವನ್ನು ರಕ್ಷಿಸಲು ಪ್ರಯತ್ನಿಸುತ್ತೇವೆ ಎಂದು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಸ್ಪಷ್ಟಡಿಸಿದ್ದಾರೆ.











Click it and Unblock the Notifications