BWSSB: ಅನಧೀಕೃತ ಕಾವೇರಿ ನೀರಿನ ಸಂಪರ್ಕ ಅಧಿಕೃತಗೊಳಿಸಲು ಅಧ್ಯಕ್ಷರ ಕರೆ
ಬೆಂಗಳೂರು, ಆಗಸ್ಟ್ 28: ಬೆಂಗಳೂರು ಜಲಮಂಡಳಿ ವ್ಯಾಪ್ತಿಯಲ್ಲಿ ಅನಧಿಕೃತ ಸಂಪರ್ಕಗಳನ್ನು ಅಧಿಕಾರಿಗಳು ಸರ್ವೇ ನಡೆಸಿ ಪತ್ತೆ ಮಾಡಿದ್ದರು. ಅನೇಕ ಅನಧಿಕೃತ ಸಂಪರ್ಕಗಳನ್ನು ಕಡಿತಗೊಳಿಸಲಾಗಿತ್ತು. ಇದೀಗ ಅವುಗಳನ್ನ ಅಧಿಕೃತಗೊಳಿಸುವ ಮೂಲಕ ಜಲಮಂಡಳಿಯ ಆದಾಯ ಹೆಚ್ಚಿಸಲು ಕೈಜೋಡಿಸಬೇಕು ಎಂದು BWSSB ಅಧ್ಯಕ್ಷರಾದ ಡಾ ವಿ ರಾಮ್ ಪ್ರಸಾತ್ ಮನೋಹರ್ ಕರೆ ನೀಡಿದರು.
ಬುಧವಾರ ರಾಜಧಾನಿ ಬೆಂಗಳೂರಿನಲ್ಲಿ 'ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ' (BWSSB) ಸನ್ನದ್ದು ಪಡೆದ ಗುತ್ತಿಗೆದಾರರ ಸಂಘ ಆಯೋಜಿಸಿದ್ದ ಕಾವೇರಿ ತಾಯಿಗೆ ಬಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡರು. ಬೆಂಗಳೂರಿಗೆ ಜೀವನಾಡಿಯಾಗಿರುವ ಕಾವೇರಿಗೆ ಪೂಜೆ ಮಾಡಿ, ಬಾಗಿನ ಅರ್ಪಿಸಿದರು.

ಗುತ್ತಿಗೆದಾರರ ಕಾರ್ಯಕ್ಕೆ ಶ್ಲಾಘನೆ
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾವೇರಿ ತಾಯಿಗೆ ಕೃತಜ್ಞತೆ ಸಲ್ಲಿಸುವ ಉತ್ತಮ ಕಾರ್ಯಕ್ರಮ ಆಯೋಜಿಸಿರುವುದು ಬಹಳ ಸಂತಸದ ವಿಷಯವಾಗಿದೆ. ಈ ಬಾರಿ ಬೇಸಿಗೆಯಲ್ಲಿ ನೀರಿನ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಉತ್ತಮ ಸೇವೆಯನ್ನು ಸಲ್ಲಿಸಿದ್ದೀರಿ.
ನಮಗೆ ನೀರು ಕೊಟ್ಟು ನಮ್ಮ ಬದುಕನ್ನ ಕಟ್ಟಿಕೊಳ್ಳಲು ಅವಕಾಶ ನೀಡಿರುವ ತಾಯಿಗೆ ಕೃತಜ್ಞತೆ ಸಲ್ಲಿಸುವುದು ಬಹಳ ಮುಖ್ಯ. ಇದೇ ರೀತಿಯಲ್ಲಿ ಮಂಡಳಿಯ ಸನ್ನದ್ದು ಪಡೆದ ಗುತ್ತಿಗೆದಾರರು ಹಾಗೂ ಪ್ಲಂಬರ್‌ಗಳು ಜಲಮಂಡಳಿಗೂ ಕೃತಜ್ಞತೆ ಸಲ್ಲಿಸುವುದಕ್ಕೂ ಆದ್ಯತೆ ನೀಡಬೇಕು.
ಕಾವೇರಿ ನೀರು ಪೋಲಾಗದಂತೆ ಸಹಕರಿಸಿ
ನೂರು ಕಿಲೋಮೀಟರ್ ದೂರದಿಂದ ಬೆಂಗಳೂರು ಮಹಾನಗರಕ್ಕೆ ಯೋಜನೆಗಳ ಮೂಲಕ ಬೆಂಗಳೂರು ಜಲಮಂಡಳಿ ಸರಬರಾಜು ನೀರನ್ನು ಮಾಡುತ್ತಿದೆ. ಈ ಶುದ್ಧ ಹಾಗೂ ಅಮೂಲ್ಯ ನೀರನ್ನ ಸಮರ್ಪಕವಾಗಿ ಬಳಸುವ ಕ್ರಮಗಳಾದ ಏರಿಯೇಟರ್ ಅಳವಡಿಕೆ ಹಾಗೂ ಪೋಲಾಗದಂತೆ ತಡೆಯಲು ಮಂಡಳಿಯ ಜೊತೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಇನ್ನೂ ನಗರದಲ್ಲಿ ಜಲಮಂಡಳಿಯ ನೊಂದಾಯಿತ ಪ್ಲಂಬರ್‌ಗಳ ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಲಮಂಡಳಿಯ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಚಂದ್ರಮೌಳಿ ಡಿ.ಎನ್ ಅವರು, ಪ್ರಧಾನ ಕಾರ್ಯದರ್ಶಿಗಳಾದ ಕುಮಾರ್.ಜಿ, ಉಪಾಧ್ಯಕ್ಷರಾದ ಚಂದ್ರಶೇಖರ್ ಪಿ.ಎಲ್, ಗೌರವಾಧ್ಯಕ್ಷರಾದ ಶ್ರೀನಿವಾಸ್ ಬಿ.ಟಿ, ಮಾಜಿ ಗೌರವಾಧ್ಯಕ್ಷರಾದ ಲೋಕೇಶ್ ರಾವ್ ಹಾಗೂ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications