ಬೆಂಗಳೂರು: ನಿಮ್ಮ ಪ್ರದೇಶದಲ್ಲಿನ 264 'ಥೀಮ್ ಬೇಸ್ಡ್' ಮತಗಟ್ಟೆಗಳ ವಿವರ ಹೀಗಿದೆ
ಬೆಂಗಳೂರು, ಮೇ 09: ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮತದಾರರನ್ನು ಸೆಳೆಯುವ ಉದ್ದೇಶದಿಂದ ವಿವಿಧ ಪ್ರದೇಶಗಳಲ್ಲಿ 264 'ಥೀಮ್ ಬೇಸ್ಡ್' ಮತಗಟ್ಟೆಗಳ ಸ್ಥಾಪನೆ ಮಾಡಲಾಗಿದೆ. ಈ ಮೂಲಕ ಹಿಂದಿನಿಂದಲೂ ಕಡಿಮೆ ಇದ್ದ ಮತದಾನ ಪ್ರಮಾಣವನ್ನು ಗರಿಷ್ಠ ಮಟ್ಟದಲ್ಲಿ ಹೆಚ್ಚಿಗೆ ಮಾಡುವ ಚುನಾವಣಾಧಿಕಾರಿಗಳು ಪ್ರಯತ್ನಿಸಿದ್ದಾರೆ. ಅದರ ಸಾಕಾರಕ್ಕೆ ಎಲ್ಲ ಮತದಾರರು ಕೈ ಜೋಡಿಸಬೇಕಿದೆ.
ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಮತದಾರರಿಗೆ ಮತದಾನ ಹಕ್ಕಿನ ಜಾಗೃತಿಗಾಗಿ, ಮತಗಟ್ಟೆಗಳಿಗೆ ಸೆಳೆಯಲು ವಿಶೇಷವಾಗಿ 'ಥೀಮ್ ಬೇಸ್ಡ್' (ವಿಷಯಾಧಾರಿತ) ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ ಮತ್ತು ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಒಟ್ಟು 264 ಹೊಸ ಬಗೆಯ ಮತಗಟ್ಟೆ ನಿರ್ಮಿಸಲಾಗಿದೆ.

ಮಹಿಳೆಯರು, ವಿಶೇಷ ಚೇತನರು, ಹಿರಿಯ ನಾಗರಿಕರು, ಕ್ರಿಡಾಪಟುಗಳು ಸೇರಿದಂತೆ ವಿವಿಧ ವರ್ಗದ ಮತದಾರರನ್ನು ಸೆಳೆಯಲು, ಎಲ್ಲ ವಿಧದ ಜನರಿಗೆ ಮತದಾನ ಜಾಗೃತಿ ಮೂಡಿಸುವ ಸಲುವಾಗಿ ಹೀಗೆ ವಿಶೇಷ ಮತಗಟ್ಟೆ ಸ್ಥಾಪಿಸಲಾಗಿದೆ. ಇವಲ್ಲವು ಮಹಿಳಾಸ್ನೇಹಿ, ಅಂಗವಿಕಲ ಸ್ನೇಹಿ ಸೇರಿದಂತೆ ಒಟ್ಟಾರೆ ಮತದಾರ ಸ್ನೇಹಿ ಮತಗಟ್ಟೆಗಳಾಗಿವೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ತಿಳಿಸಿದೆ.
ವಿಭಾಗವಾರು ಥೀಮ್ ಬೇಸ್ ಮತಗಟ್ಟೆ ಹೆಸರು
ಪಿಂಕ್ ಮತಗಟ್ಟೆ, ಯುವ ಮತದಾರರ ಮತಗಟ್ಟೆ, ಸಿರಿಧಾನ್ಯ ಮತಗಟ್ಟೆ, ವಿಶೇಷ ಚೇತನ ಮತಗಟ್ಟೆ, ಸಂಸ್ಕೃತಿ ಮತಗಟ್ಟೆ, ಪರಿಸರ(ಹಸಿರು ಬಣ್ಣದ) ಮತಗಟ್ಟೆ, ವಿಜ್ಞಾನ ಮತ್ತು ತಂತ್ರಜ್ಞಾನ ಮತಗಟ್ಟೆ, ಮಾಜಿ ಸೈನಿಕ ಮತಗಟ್ಟೆ, ತೃತೀಯ ಲಿಂಗಿ ಮತಗಟ್ಟೆ, ಕ್ರೀಡಾ ಮತಗಟ್ಟೆ, ಮಾದರಿ ಮತಗಟ್ಟೆಗಳಿರಲಿವೆ.
ವಿಭಾಗವಾರು ಮತಗಟ್ಟೆಗಳ ವಿವರ ನೋಡುವುದಾದರೆ, ಬೆಂಗಳೂರು ಕೇಂದ್ರ ವ್ಯಾಪ್ತಿಯಲ್ಲಿ ಈ ಮೇಲಿನ ಎಲ್ಲ ವಿಧದ ಮತಗಟ್ಟೆಗಳ ಸಂಖ್ಯೆ ಒಟ್ಟು 68. ಬೆಂಗಳೂರು ಉತ್ತರ 62, ಬೆಂಗಳೂರು ದಕ್ಷಿಣ 64, ಬೆಂಗಳೂರು ನಗರ 70 ವಿಶೇಷ ಮತಗಟ್ಟೆಗಳು (ಒಟ್ಟು 264) ಇವೆ.

ಚುನಾವಣೆ ದಿನಾಂಕ ಘೋಷಣೆ ಆದಾಗಿನಿಂದಲೂ ಬಿಬಿಎಂಪಿ ಮುಖ್ಯ ಆಯುಕ್ತರು ಮತ್ತು ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ನೇತೃತ್ವದಲ್ಲಿ ನಗರದ ಎಂಟು ವಲಯಗಳ ವ್ಯಾಪ್ತಿಯಲ್ಲಿ, ಐಟಿ ಬಿಟಿ ಕಂಪನಿಗಳಲ್ಲಿ, ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ, ಅಪಾರ್ಟ್‌ಮೆಂಟ್ ನಿವಾಸಿಗಳ ಸಂಘ ಸೇರಿದಂತೆ ವಿವಿಧ ಸಮುದಾಯಗಳಿಗೆ ಮತದಾನ ಜಾಗೃತಿ ಮೂಡಿಸಲಾಗಿದೆ.
ಸೋಮವಾರವಷ್ಟೇ ನಗರದ ಟೌನ್‌ಹಾಲ್‌ನಲ್ಲಿ ಮತಗಟ್ಟೆಗೆ, ಮಹಿಳೆಯರಿಗೆ ಜಾಗೃತಿ ಮೂಡಿಸುವ ಪಿಂಕಥಾನ್ ಕಾರ್ಯಕ್ರಮಕ್ಕೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಚಾಲನೆ ನೀಡಿದ್ದಾರೆ.












Click it and Unblock the Notifications