ಲಂಚದ ಆರೋಪ : ಅಲೋಕ್ ಕುಮಾರ್ ವಿರುದ್ಧದ ಕೇಸ್ ರದ್ದು
ಬೆಂಗಳೂರು, ಸೆಪ್ಟೆಂಬರ್ 15; ಲಂಚಕ್ಕೆ ಬೇಡಿಕೆಯಿಟ್ಟಿದ್ದ ಆರೋಪದಲ್ಲಿ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ವಿರುದ್ಧದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ಇದರಿಂದಾಗಿ ಅವರಿಗೆ ದೊಡ್ಡ ರಿಲೀಫ್ ಸಿಕ್ಕಿದೆ. ಈ ಪ್ರಕರಣದಿಂದಾಗಿ ಅವರು ಹಲವು ವರ್ಷಗಳಿಂದ ಮುಜುಗರ ಅನುಭವಿಸುತ್ತಿದ್ದರು.
ಬೆಂಗಳೂರು ನಗರದ ವೈಯಾಲಿ ಕಾವಲ್ ಪೊಲೀಸ್ ಠಾಣೆ ವ್ಯಾಪ್ತಿಯ ಆರೆಂಜ್ ಬಾರ್‌ನ ಮಾಲೀಕರು ಮತ್ತು ಗ್ರಾಹಕರ ನಡುವೆ ನಡೆದಿದ್ದ ಗಲಾಟೆ ಸಂಬಂಧ ಪ್ರಕರಣ ಮುಕ್ತಾಯಗೊಳಿಸಲು ಅಲೋಕ್ ಕುಮಾರ್ ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆ ಎಂಬುದು ಆರೋಪವಾಗಿತ್ತು.

ತಮ್ಮ ವಿರುದ್ಧದ ಪ್ರಕರಣ ಮತ್ತು ಈ ಸಂಬಂಧ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆ ರದ್ದು ಕೋರಿ ಅಲೋಕ್ ಕುಮಾರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಹೈಕೋರ್ಟ್ ಏನು ಹೇಳಿದೆ?; ಅರ್ಜಿದಾರ ಐಪಿಎಸ್ ಅಧಿಕಾರಿಯ ವಿರುದ್ಧ ವಿಚಾರಣೆ ಪರಿಗಣಿಸುವುದಕ್ಕಾಗಿ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೇ ಲೋಕಾಯುಕ್ತ ವಿಚಾರಣಾ ಸಂಜ್ಞೆ ಪರಿಗಣಿಸಿದೆ ಎಂದು ಅಭಿಪ್ರಾಯಪಟ್ಟಿಸಿದೆ.
ಆದರೆ, ಅರ್ಜಿದಾರರ ವಿರುದ್ಧ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದ ಬಳಿಕ ವಿಚಾರಣೆಗೆ ಪರಿಗಣಿಸಲು ವಿಚಾರಣಾ ನ್ಯಾಯಾಲಯ ಸ್ವಾತಂತ್ರ್ಯವಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಅಲ್ಲದೆ, ಆರೋಪ ಸಂಬಂಧ ದಾಖಲಾಗಿದ್ದ ಎಫ್‌ಐಆರ್‌ನಲ್ಲಿ ಅರ್ಜಿದಾರ ಅಲೋಕ್ ಕುಮಾರ್ ಹೆಸರು ಉಲ್ಲೇಖವಾಗಿಲ್ಲ. ಅಲ್ಲದೆ, ಬಾರ್‌ನಲ್ಲಿ ನಡೆದ ಗಲಾಟೆ ಹಾಗೂ ಲಂಚಕ್ಕೆ ಬೇಡಿಕೆಯಿಟ್ಟ ಆರೋಪದಲ್ಲಿ ಲೋಕಾಯುಕ್ತ ಪೊಲೀಸರು 'ಬಿ' ರಿಪೋರ್ಟ್ ಸಲ್ಲಿಸಿದ್ದು, ಈ ನಿಟ್ಟಿನಲ್ಲಿ ಪ್ರಕರಣ ರದ್ದುಪಡಿಸಲಾಗುತ್ತಿದೆ ಎಂದು ನ್ಯಾಯಪೀಠ ತಿಳಿಸಿದೆ.
ಪ್ರಕರಣದ ಹಿನ್ನೆಲೆ: ರೌಡಿ ಶೀಟರ್ ಆಗಿದ್ದ ಬಿ. ಎಂ. ಮಲ್ಲಿಕಾರ್ಜುನ ಅಲಿಯಾಸ್ ಫೈಟರ್ ರವಿ ಮತ್ತವರ ಆಪ್ತರು ವೈಯಾಲಿ ಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಆರೆಂಜ್ ಬಾರ್‌ನಲ್ಲಿ ಮದ್ಯ ಸೇವಿಸುವ ಸಂದರ್ಭದಲ್ಲಿ ಗಲಾಟೆ ನಡೆದಿತ್ತು. ಈ ಆರೋಪದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಈ ಪ್ರಕರಣವನ್ನು ಮುಕ್ತಾಯಗೊಳಿಸಲು ವೈಯಾಲಿ ಕಾವಲ್‌ನ ಪೊಲೀಸ್ ಅಧಿಕಾರಿಗಳು ಪ್ರಾರಂಭದಲ್ಲಿ 5 ಲಕ್ಷ, ಬಳಿಕ ಒಂದು ಕೋಟಿ ರೂ. ಗಳಿಗೆ ಬೇಡಿಕೆ ಇಟ್ಟಿದ್ದಾರೆ ಎಂಬುದಾಗಿ ಫೈಟರ್ ರವಿ ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ 'ಬಿ' ರಿಪೋಟ್ ಸಲ್ಲಿಸಿದ್ದರು.
'ಬಿ' ರಿಪೋರ್ಟ್ ತಿರಸ್ಕರಿಸಿದ್ದ ವಿಶೇಷ ನ್ಯಾಯಾಲಯ ಅಲೋಕ್ ಕುಮಾರ್ ವಿರುದ್ಧ ವಿಚಾರಣೆ ಮುಂದುವರೆಸಿತ್ತು. ಅದನ್ನು ಪ್ರಶ್ನಿಸಿ ಅಲೋಕ್ ಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದರು.












Click it and Unblock the Notifications