ಜಿಬಿಎ ಚುನಾವಣೆ: ಮತದಾರರ ಸಮಸ್ಯೆಗಳ ಪರಿಹಾರಕ್ಕಾಗಿ 'ಬುಕ್ ಎ ಕಾಲ್' ಆಪ್ ಬಿಡುಗಡೆ, ಬಳಕೆ ವಿಧಾನ ಇಲ್ಲಿದೆ
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಕೆಲವೇ ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಈ ಸಂಬಂಧ ಜಿಬಿಎ ಅಧಿಕಾರಿಗಳು ಈಗಾಗಲೇ ಕರಡು ಮತದಾರರ ಪಟ್ಟಿ ಪ್ರಕಟಿಸಿದ್ದಾರೆ. ಇದೀಗ ಕೇಂದ್ರ ಚುನಾವಣೆ ಆಯೋಗವು ಮತದಾರರ ಅಹವಾಲು ಆಲಿಸಿ ಪರಿಹಾರಕ್ಕೆ ಅನುಕೂಲವಾಗುವಂತೆ 'Book a call' ಎಂದು ಅಪ್ಲಿಕೇಷನ್ ಅನ್ನು ಬಿಡುಗಡೆ ಮಾಡಿದೆ. ಇದರ ಬಳಕೆ ಹೇಗೆ, ವಿಧಾನಗಳು ಇಲ್ಲಿವೆ.
ಮತದಾರರಿಗೆ ಸ್ಥಳೀಯವಾಗಿ ತಮ್ಮ ವ್ಯಾಪ್ತಿಯ ಮತಗಟ್ಟೆಗಳಲ್ಲಿ ಸುಲಲಿತವಾಗಿ ಮತಗಟ್ಟೆ ಅಧಿಕಾರಿಗಳಿಂದ ಮತದಾರರ ಪಟ್ಟಿಯ ಅಹವಾಲುಗಳ ಉತ್ತರ ಪಡೆಯಲು Book a call ಎಂಬ ಅಂತರ್ಜಾಲದ ಅಪ್ಲಿಕೇಷನ್ ಅನ್ನು ಪರಿಚಯ ಮಾಡಲಾಗಿದೆ. ಈ ಸೌಲಭ್ಯವನ್ನು ಪಡೆಯಲು ಕೆಳಕಂಡಂತೆ ಕ್ರಮ ಅನುಸರಿಸಬೇಕಿದೆ ಎಂದು ಭಾರತ ಚುನಾವಣಾ ಆಯೋಗ (ಇಸಿಐ) ಮಾಹಿತಿ ನೀಡಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ತಿಳಿಸಿದೆ.

ಭಾರತ ಚುನಾವಣಾ ಆಯೋಗದ ಜಾಲತಾಣ eci.in ನಲ್ಲಿ ವೊಟರ್ ಸರ್ವೀಸ್ ಪೋರ್ಟಲ್ (VSP) ತೆರೆದ ನಂತರ ಬುಕ್ ಎ ಕಾಲ್ ಟು ಬಿಎಲ್ಓ ನಮೂದಿಸಬೇಕು. ಬಳಿಕ ಕಾಲ್ ರಿಕ್ವೆಸ್ಟ್ ಟು ಬಿಎಲ್ಓ ಆಯ್ಕೆ ಮೇಲೆ ಕ್ಲಿಕ್ ಮಾಡಿದರೆ ಮತದಾರರಿಗೆ ರೆಫ್‌ರೆನ್ಸ್ ಐಡಿ ಬರುತ್ತದೆ. ಇದರ ಆಧಾರದ ಮೇಲೆ ಮತಗಟ್ಟೆ ಅಧಿಕಾರಿಗಳು ನಮೂದಾಗಿರುವ ತಮ್ಮ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಅಹವಾಲುಗಳನ್ನು ಪರಿಹರಿಸಲಿದ್ದಾರೆ.
ಇನ್ನೂ ಈ ಸೌಲಭ್ಯವನ್ನು ವಿಶೇಷ ಸಮಗ್ರ ಪರಿಷ್ಕರಣೆ-2025 (Special Intensive Revision) ಮೊದಲೇ ಸಕ್ರಿಯವಾಗಿದೆ. ಚಾಲ್ತಿಯಲ್ಲಿರುವ ಈ ಸೇವೆಯನ್ನು ಮತದಾರರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತರ ಮನವಿ ಮಾಡಿದ್ದಾರೆ.
ಹೊಸ ಆಪ್ ಮೂಲಕ ಸೌಲಭ್ಯ ಪಡೆಯುವ ವಿಧಾನ
1.ಭಾರತ ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್ eci.in ಗೆ ಭೇಟಿ ನೀಡಿ.
2. Voter Service Portal (VSP) ಆಯ್ಕೆಮಾಡಿ.
3. Book a Call to BLO" ಮೇಲೆ ಕ್ಲಿಕ್ ಮಾಡಿ.
4. Call Request to BLO ಸಲ್ಲಿಸಿ.
5. ಸಲ್ಲಿಸಿದ ನಂತರ ಮತದಾರರಿಗೆ Reference ID ನೀಡಲಾಗುತ್ತದೆ.
6. ಮತಗಟ್ಟೆ ಅಧಿಕಾರಿಗಳಿಗೆ ಕರೆ ಮಾಡಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.
ಜನವರಿ 30ರ ಶುಕ್ರವಾರ ಫೋನ್-ಇನ್ ಕಾರ್ಯಕ್ರಮ
ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಸಾರ್ವಜನಿಕರ ಅಹವಾಲುಗಳನ್ನು ನೇರವಾಗಿ ಆಲಿಸುವ ಉದ್ದೇಶದಿಂದ ಉತ್ತರ ನಗರ ಪಾಲಿಕೆಯ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಅವರ ನೇತೃತ್ವದಲ್ಲಿ ಇದೇ ಶುಕ್ರವಾರ ಜನವರಿ 30ರಂದು ಫೋನ್-ಇನ್ ಕಾರ್ಯಕ್ರಮ ನಡೆಯಲಿದೆ. ಸಾರ್ವಜನಿಕರು ಬೆಳಗ್ಗೆ 7ಗಂಟೆಯಿಂದ 9.00 ಗಂಟೆಯವರೆಗೆ ಸಾರ್ವಜನಿಕರು ಸ್ಥಳೀಯರ ಸಮಸ್ಯೆಗಳ ಕುರಿತು ಪರಿಹಾರವನ್ನು ನೇರವಾಗಿ ಆಯುಕ್ತರಿಂದ ಪಡೆಯಬಹುದಾಗಿದೆ.
ಈ ಅವಧಿಯಲ್ಲಿ ನಾಗರಿಕರು ರಸ್ತೆ ಗುಂಡಿಗಳು ಹಾಗೂ ದುರಸ್ತಿ ಕಾರ್ಯಗಳು, ಬೀದಿ ದೀಪಗಳ ನಿರ್ವಹಣೆ, ಮನೆ ಮನೆ ಕಸ ಸಂಗ್ರಹಣೆ ಮತ್ತು ವಿಲೇವಾರಿ, ಅಪಾಯಕಾರಿಯಾದ ಮರಗಳು ಮತ್ತು ಕೊಂಬೆಗಳ ತೆರವು, ಸೊಳ್ಳೆ ನಿಯಂತ್ರಣ ಕ್ರಮಗಳು, ಬೀದಿ ನಾಯಿಗಳ ನಿಯಂತ್ರಣ, ಉದ್ಯಾನವನಗಳ ಅಭಿವೃದ್ಧಿ ಹಾಗೂ ಸಂರಕ್ಷಣೆ, ಅನಧಿಕೃತ ಬ್ಯಾನರ್ ಮತ್ತು ಪೋಸ್ಟರ್ ಗಳ ತೆರವು, ಪಾದಚಾರಿ ಮಾರ್ಗಗಳ ಮೇಲಿನ ಒತ್ತುವರಿ ನಿವಾರಣೆ, ಇ-ಖಾತಾ ಸಂಬಂಧಿತ ಸಮಸ್ಯೆಗಳು ಸೇರಿದಂತೆ ವಿವಿಧ ನಾಗರಿಕ ಸಮಸ್ಯೆಗಳ ಕುರಿತು ಆಯುಕ್ತರೊಂದಿಗೆ ನೇರವಾಗಿ ಮಾತನಾಡಬಹುದು.
ಫೋನ್-ಇನ್ ಕಾರ್ಯಕ್ರಮದಲ್ಲಿ ಸ್ವೀಕರಿಸಲಾದ ಎಲ್ಲಾ ಅಹವಾಲುಗಳನ್ನು 'ಸಹಾಯ 2.0' ಪೋರ್ಟಲ್ ನಲ್ಲಿ ದಾಖಲಿಸಿ, ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ತಕ್ಷಣವೇ ಕಳುಹಿಸಲಾಗುತ್ತದೆ. ದೂರು ದಾಖಲಾಗಿರುವ ವಿವರಗಳು ಹಾಗೂ ಸಂಬಂಧಿತ ಅಧಿಕಾರಿಗಳ ಮಾಹಿತಿಯನ್ನು ನಾಗರಿಕರಿಗೆ ಎಸ್.ಎಂ.ಎಸ್ ಮೂಲಕ ತಿಳಿಸಲಾಗುವುದು.
ಸಾರ್ವಜನಿಕರು ಮೊಬೈಲ್/ವಾಟ್ಸಪ್: 9480685705 ಅಥವಾ ಲ್ಯಾಂಡ್‌ಲೈನ್ 080-22975936 / 080-23636671ಗೆ ಸಂಪರ್ಕಿಸುವಂತೆ ಪಾಲಿಕೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.












Click it and Unblock the Notifications