ಬೆಂಗಳೂರು ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ ಕೊಟ್ಟ ಬಿಎಂಟಿಸಿ
ಬೆಂಗಳೂರು, ಡಿಸೆಂಬರ್ 23; ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ನಗರದ ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ ನೀಡಿದೆ. ಹಲವು ವರ್ಷಗಳ ಬೇಡಿಕೆ ಈಡೇರುವ ಕಾಲ ಹತ್ತಿರವಾಗಿದ್ದು, ಸಾವಿರಾರು ಜನರಿಗೆ ಅನುಕೂಲವಾಗಲಿದೆ.
ಬಿಎಂಟಿಸಿ ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಬಸ್ ಸೇವೆ ಆರಂಭಿಸಲು ಮುಂದಾಗಿದೆ. ಇದರಿಂದಾಗಿ ರೈಲು ನಿಲ್ದಾಣದಿಂದ ನಗರದ ವಿವಿಧ ಭಾಗಕ್ಕೆ ಸಂಚಾ ನಡೆಸುವ ಪ್ರಯಾಣಿಕರಿಗೆ ಸಹಾಯಕವಾಗಲಿದೆ.
ಮೆಜೆಸ್ಟಿಕ್ ರೈಲು ನಿಲ್ದಾಣದಿಂದ ಬಿಎಂಟಿಸಿ ಬಸ್ ಇಲ್ಲ. ನಿಲ್ದಾಣಕ್ಕೆ ಆಗಮಿಸುವ ಜನರು ತಮ್ಮ ಲಗೇಜ್ ಹೊತ್ತು ಬಿಎಂಟಿಸಿ ಬಸ್ ನಿಲ್ದಾಣಕ್ಕೆ ಸಾಗಿ ಬಸ್ ಹಿಡಿಯಬೇಕು. ಇಲ್ಲವಾದರೆ ಆಟೋ, ಕ್ಯಾಬ್‌ಗಳನ್ನು ಬಳಕೆ ಮಾಡಬೇಕು.

ಆದರೆ ಕ್ಯಾಬ್, ಆಟೋಗಳಿಗೆ ದುಬಾರಿ ದರ ನೀಡಬೇಕಿದೆ. ಇದರಿಂದಾಗಿ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳುತ್ತಿದೆ. ರೈಲು ನಿಲ್ದಾಣದಿಂದ ನಗರದ ವಿವಿಧ ಭಾಗಗಳಿಗೆ ಬಸ್ ಸಂಚಾರ ಆರಂಭಿಸಬೇಕಕು ಎಂಬುದು ಹಲವು ವರ್ಷಗಳ ಬೇಡಿಕೆಯಾಗಿತ್ತು.
ರೈಲ್ವೆ, ಬಿಎಂಟಿಸಿ ಯೋಜನೆ; ಮೆಜೆಸ್ಟಿಕ್ ರೈಲು ನಿಲ್ದಾಣದಿಂದ ನಗರದ ವಿವಿಧ ಪ್ರದೇಶಗಳಿಗೆ ಬಿಎಂಟಿಸಿ ಬಸ್ ಓಡಿಸಲು ಬಿಎಂಟಿಸಿ ಮತ್ತು ರೈಲ್ವೆ ಇಲಾಖೆ ಜಂಟಿಯಾಗಿ ಯೋಜನೆ ರೂಪಿಸಿವೆ. 2023ರ ಜನವರಿಯಲ್ಲಿ ಬಸ್ ಸಂಚಾರಕ್ಕೆ ಚಾಲನೆ ಸಿಗುವ ನಿರೀಕ್ಷೆ ಇದೆ.
ರೈಲು ನಿಲ್ದಾಣದ ಮುಂಭಾವೇ ಬಿಎಂಟಿಸಿ ಬಸ್ ನಿಲ್ದಾಣವಿದೆ. ಆದರೆ ಬಸ್‌ಗಳು ರೈಲು ನಿಲ್ದಾಣಕ್ಕೆ ಆಗಮಿಸಲು ಸಾಧ್ಯವಾಗುತ್ತಿಲ್ಲ. ಈಗ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದೊಳಕ್ಕೆ ಬಸ್ ಬಿಡಲು ರೈಲ್ವೆ ಇಲಾಖೆ ಸಹ ಮುಂದಾಗಿದೆ.

ನೈಋತ್ಯ ರೈಲ್ವೆ ಕೆಲವು ದಿನಗಳ ಹಿಂದೆ ರೈಲು ನಿಲ್ದಾಣದ ಗೇಟ್ ನಂಬರ್ 3ರಿಂದ ವಿವಿಧ ಪ್ರದೇಶಗಳಿಗೆ ಬಸ್ ಸೇವೆ ಆರಂಭಿಸುವ ಕುರಿತು ಚರ್ಚೆ ನಡೆಸಿತ್ತು. ಬಿಎಂಟಿಸಿ ಅಧಿಕಾರಿಗಳ ತಂಡ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಈ ಕುರಿತು ಪರಿಶೀಲನೆ ನಡೆಸಿತ್ತು.
ರೈಲು ನಿಲ್ದಾಣದ ಪ್ರವೇಶ ದ್ವಾರ ಫ್ಲಾಟ್ ಫಾರಂ ನಂ 1ಕ್ಕೆ ನೇರವಾಗಿ ಸಂಪರ್ಕ ಕಲ್ಪಿಸಲಿದೆ. ಇಲ್ಲಿ ರೈಲ್ವೆಯ ಟಿಕೆಟ್ ಕೌಂಟರ್ ಸಹ ಇದೆ. ಆದ್ದರಿಂದ ಬಸ್ ಇಲ್ಲಿಗೆ ಆಗಮಿಸಿದರೆ ಸಾವಿರಾರು ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ಆಟೋ, ಕ್ಯಾಬ್, ಖಾಸಗಿ ವಾಹನಗಳ ಸಂಚಾರದಿಂದಾಗಿ ರೈಲು ನಿಲ್ದಾಣದ ಆವರಣದಲ್ಲಿ ಸಂಚಾರ ದಟ್ಟಣೆ ಉಂಟಾಗಬಹುದು ಎಂದು ಬಿಎಂಟಿಸಿ ಬಸ್ ಸಂಚಾರ ನಡೆಸಲು ಇಷ್ಟು ದಿನ ಅವಕಾಶ ನೀಡಿರಲಿಲ್ಲ. ಈಗ ಬೇರೆ ಬೇರೆ ಗೇಟ್ ಮಾಡಿರುವುದರಿಂದ ಸ್ಥಳಾವಕಾಶವಿದೆ. ಆದ್ದರಿಂದ ಬಸ್ ಸೇವೆ ಆರಂಭಿಸಲು ಯೋಜನೆ ರೂಪಿಸಲಾಗಿದೆ.
ಪ್ರಯಾಣಿಕರಿಗೆ ಅನುಕೂಲ; ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಪ್ರತಿದಿನ ಸಾವಿರಾರು ಪ್ರಯಾಣಿಕರು ಆಗಮಿಸುತ್ತಾರೆ. ಜನರು ತಮ್ಮ ಲಗೇಜ್ ಹೊತ್ತು, ನಿಲ್ದಾಣದ ಅಂಡರ್ ಪಾಸ್ ಮೂಲಕ ಸಾಗಿ ಬಿಎಂಟಿಸಿ ನಿಲ್ದಾಣ ತಲುಪಬೇಕಿತ್ತು.
ಹೀಗೆ ಸಾಗುವುದು ಮಹಿಳೆಯರಿಗೆ, ವೃದ್ಧರಿಗೆ, ಮಕ್ಕಳಿಗೆ ತೊಂದರೆ ಆಗುತ್ತಿತ್ತು. ಈಗ ರೈಲು ನಿಲ್ದಾಣದ ಬಾಗಿಲಲ್ಲೇ ಬಿಎಂಟಿಸಿ ಬಸ್ ಸಿಕ್ಕರೆ ನಿಲ್ದಾಣಕ್ಕೆ ಆಗಮಿಸುವ, ನಿರ್ಗರ್ಮಿಸುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ನಿಲ್ದಾಣಕ್ಕೆ 24 ಗಂಟೆಯೂ ಜನರು ಬರುವುದರಿಂದ ಬಿಎಂಟಿಸಿಗೂ ಆರ್ಥಿಕವಾಗಿ ಲಾಭವಾಗಲಿದೆ.
ಮೆಜೆಸ್ಟಿಕ್ ರೈಲು ನಿಲ್ದಾಣದ ಮೇಲಿನ ಒತ್ತಡ ಕಡಿಮೆ ಮಾಡಲು ಯಶವಂತಪುರ, ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೈಯಪ್ಪನಹಳ್ಳಿಗೆ ಹಲವು ರೈಲುಗಳನ್ನು ಸ್ಥಳಾಂತರ ಮಾಡಲಾಗಿದೆ. ಆ ನಿಲ್ದಾಣಗಳಿಗೆ ನೇರವಾಗಿ ಬಿಎಂಟಿಸಿ ಬಸ್ ಸೌಲಭ್ಯವಿದೆ. ಆದರೆ ಮೆಜೆಸ್ಟಿಕ್ ನಿಲ್ದಾಣಕ್ಕೆ ಮಾತ್ರ ಬಸ್ ಸಂಚಾರವಿಲ್ಲ.












Click it and Unblock the Notifications