ಚಿತ್ರಸಂತೆ 2025: ಕಲಾಪ್ರಿಯರಿಗೆ BMTC ಬಸ್ ವ್ಯವಸ್ಥೆ: ದಿನಾಂಕ, ನಿಲ್ದಾಣ ವೇಳಾಪಟ್ಟಿ
ಬೆಂಗಳೂರು, ಡಿಸೆಂಬರ್ 27: ಬೆಂಗಳೂರಲ್ಲಿ ಹೊಸ ವರ್ಷದ ಸಂಭ್ರಮಕ್ಕೆ ಸಿದ್ಧವಾಗಿರುವ ನಾಗರಿಕರಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಸಿಹಿ ಸುದ್ದಿಯೊಂದನ್ನು ನೀಡಿದೆ. ಜನವರಿ ಮೊದಲ ಭಾನುವಾರ (ಜನವರಿ 5) ಕರ್ನಾಟಕ ಚಿತ್ರಕಲಾ ಪರಿಷತ್ತು (CKP) 'ಚಿತ್ರಸಂತೆ 2025' ಆಯೋಜನೆ ಮಾಡಿದೆ. ಇದಕ್ಕೆ ಬೆಂಗಳೂರಿನ ವಿವಿಧ ಭಾಗಗಳಿಂದ ಬಿಎಂಟಿಸಿ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.
ಹೌದು, ಹೊಸ ವರ್ಷದ ಮೊದಲ ಕಲಾಸಂತೆಗೆ ಬೆಂಗಳೂರಿನ ಜನರು ಸಾಕ್ಷಿಯಾಗಲಿದ್ದಾರೆ. ಭಾನುವಾರ ಬೆಳಗ್ಗೆ ಸಿಎಂ ಸಿದ್ದರಾಮಯ್ಯ ಅವರು ಚಿತ್ರಸಂತೆ ಉದ್ಘಾಟಿಸಲಿದ್ದಾರೆ. ಇಡೀ ದಿನ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆ ಪಕ್ಕದ, ಶಿವಾನಂದ ವೃತ್ತದಿಂದ ಹಾದು ಹೋಗುವ ಕುಮಾರಕೃಪಾ ರಸ್ತೆಯಲ್ಲಿ ಈ ಚಿತ್ರಸಂತೆ ನಡೆಯಲಿದೆ.

ಚಿತ್ರಸಂತೆಗೆ ಬರುವವರಿಗೆ ಅನುಕೂಲವಾಲೆಂದು ಪ್ರತಿ 10 ನಿಮಿಷಕ್ಕೆ ಒಂದರಂತೆ ಬಿಎಂಟಿಸಿ ಬಸ್‌ಗಳು ಸಂಚರಿಸಲು ವ್ಯವಸ್ಥೆ ಮಾಡಲಾಗಿದೆ. ಮೆಜೆಸ್ಟಿಕ್ ಮೆಟ್ರೋ ನಿಲ್ದಾಣ ಹಾಗೂ ಮಲ್ಲೆಶ್ವರಂ ಸಂಪಿಗೆ ರಸ್ತೆಯ ಮೆಟ್ರೋ ನಿಲ್ದಾಣದಿಂದ ಆನಂದರಾವ್ ವೃತ್ತ ಮಾರ್ಗವಾಗಿ ವಿಧಾನಸೌಧಕ್ಕೆ ಸಂಚರಿಸುವಂತೆ ಫೀಡರ್ ಬಸ್ ಸೇವೆ ಒದಗಿಸಲಾಗಿದೆ ಎಂದು ಬಿಎಂಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಚಿತ್ರಸಂತೆ ನಡೆಯುವ ದಿನ ಜನವರಿ 5ರಂದು ಬೆಳಗ್ಗೆ 5 ಗಂಟೆಯಿಂದ ರಾತ್ರಿ 09 ಗಂಟೆವರೆಗೆ ಪ್ರತಿ 10 ನಿಮಿಷಕ್ಕೆ ಒಂದರಂತೆ ಬಸ್‌ಗಳು ಓಡಾಡಲಿವೆ. ಈ ವಿಶೇಷ ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಪ್ರಯಾಣ ದರ 15 ರೂಪಾಯಿ ನಿಗದಿಪಡಿಸಲಾಗಿದೆ.
ಮೆಟ್ರೋ ನಿಲ್ದಾಣಗಳಿಗೆ ಫೀಡರ್ ಬಸ್
ಬೆಂಗಳೂರು ಮೆಟ್ರೋ ನಿಲ್ದಾಣಗಳಿಗೆ ನಮ್ಮ ಮೆಟ್ರೋ ಫಿಡರ್ ಬಸ್ ಸೇವೆ ಈಗಾಗಲೇ ಆರಂಭಿಸಲಾಗಿದೆ. ಅಗತ್ಯಕ್ಕೆ ತಕ್ಕಂತೆ ಹಾಗೂ ಬಿಎಂಆರ್‌ಸಿಎಲ್ ಮನವಿ ಮೇರೆಗೆ ಈ ಬಸ್‌ಗಳ ಸಂಖ್ಯೆಯನ್ನು ನಿಗಮವು ಹೆಚ್ಚಿಸುತ್ತಿದೆ. ಅಲ್ಲದೇ ಹೊಸ ಹೊಸ ಮಾರ್ಗಗಳಲ್ಲಿ ಬಿಎಂಟಿಸಿ ಬಸ್‌ಗಳು ಸಂಚಾರ ನಡೆಸುತ್ತಿವೆ.
ಬನಶಂಕರಿ ನಿಲ್ದಾಣದಿಂದ ಇಲ್ಲಿಗೆ ಬಸ್ ಪರಿಚಯ
ಬೆಂಗಳೂರಿಗರ ಜೀವನಾಡಿಯಾಗಿರುವ ಬಿಎಂಟಿಸಿ ಬಸ್ ಪ್ರಯಾಣಿಕರ ಅನುಕೂಲ ಒದಗಿಸುವ ಉದ್ದೇಶದಿಂದ ಬನಶಂಕರಿ ಬಸ್ ನಿಲ್ದಾಣದಿಂದ ಹಾರೋಹಳ್ಳಿ ಇದೇ ಡಿಸೆಂಬರ್ 26ರಿಂದ ಹೊಸದಾಗಿ ಬಸ್ ಸೇವೆ ಆರಂಭಿಸಿದೆ. ಈ ನಿಗದಿತ ಮಾರ್ಗದ ಬಸ್‌ಗಳು ಬನಶಂಕರಿ ಬಸ್‌ನಿಲ್ದಾಣದಿಂದ ಪ್ರಯಾಣ ಆರಂಭಿಸಿ ದಯಾನಂದ ಸಾಗರ ಕಾಲೇಜು, ಕೋಣಕುಂಟೆ, ಕಗ್ಗಲಿಪುರ ಮಾರ್ಗದ ಮೂಲಕ ಸಾಗಿ ಹಾರೋಹಳ್ಳಿಗೆ ಬರುತ್ತದೆ. ನಿತ್ಯ ಎರಡು ಬಸ್ ಒಟ್ಟು ಹದಿನಾಲ್ಕು ಬಾರಿ ಸಂಚರಿಸಲಿವೆ. ಈ ಬಸ್‌ಗಳು ಸಂಚಾರದಿಂದಾಗಿ ಈ ಭಾಗದ ಜನರಿಗೆ ಸಾರಿಗೆ ಅನುಕೂಲ ಸಿಕ್ಕಂತಾಗಿದೆ.












Click it and Unblock the Notifications