BMTC: BWSSB ಕಛೇರಿ ಮುಂದೆ ಹೊತ್ತಿ ಉರಿದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್
ಬೆಂಗಳೂರು, ಆಗಸ್ಟ್ 06: ಬೆಂಗಳೂರು ನಗರದಲ್ಲಿ ಸೋಮವಾರ ಸಂಜೆ ಧಾರಾಕಾರ ಮಳೆಯಾಗಿದೆ. ಗುಡುಗು, ಸಿಡಿಲು ಸಹಿತ ಸುರಿದ ಮಳೆಗೆ ಹಲವಾರು ರಸ್ತೆಗಳು ಜಲಾವೃತಗೊಂಡು ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಇಂತಹ ಮಳೆಯ ನಡುವೆಯೇ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಎಲೆಕ್ಟ್ರಿಕ್ ಬಸ್ ಒಂದು ಜಲಮಂಡಳಿ ಕಛೇರಿಯ ಮುಂಭಾಗದಲ್ಲಿಯೇ ಬೆಂಕಿಗೆ ಆಹುತಿಯಾಗಿದೆ.
ನಗರದ ಸಂಚಾರಿ ಪೊಲೀಸರು ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಜಲಮಂಡಳಿ ಕಚೇರಿ ಎದುರು ಬಿಎಂಟಿಸಿ ಎಲೆಕ್ಟ್ರಿಕ್ ಬಸ್‌ಗೆ ಬೆಂಕಿ ಬಿದ್ದಿರುವ ಫೋಟೋವನ್ನು ಶೇರ್ ಮಾಡಿದ್ದರು, ನೀರು ತುಂಬಿದ ರಸ್ತೆಯಲ್ಲಿ ಬಸ್ ಬೆಂಕಿಗೆ ಆಹುತಿಯಾದ ಕಾರಣ ಹೆಬ್ಬಾಳ ವೃತ್ತದ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ, ದಯವಿಟ್ಟು ಸಹಕರಿಸಿ ಎಂದು ಮನವಿ ಮಾಡಿದ್ದರು.

ಬಸ್‌ನ ವಿವರಗಳು: ಕೆಎ 41 ಡಿ 2679 ಸಂಖ್ಯೆ ಬಿಎಂಟಿಸಿ ನಾನ್ ಎಸಿ ಎಲೆಕ್ಟ್ರಿಕ್ ಬಸ್ ಟಿನ್ ಫ್ಯಾಕ್ಟರಿಯಿಂದ ಗೊರಗುಂಟೆಪಾಳ್ಯಕ್ಕೆ ಸಂಚಾರ ನಡೆಸುತ್ತಿತ್ತು. ಸೋಮವಾರ ರಾತ್ರಿ 10.50ರ ಸುಮಾರಿಗೆ ಶಾರ್ಟ್ ಸರ್ಕಿಟ್ ಕಾರಣದಿಂದ ನೀರು ತುಂಬಿದ ರಸ್ತೆಯಲ್ಲಿಯೇ ಹೊತ್ತಿ ಉರಿದಿದೆ.
ಬಸ್‌ಗೆ ಬೆಂಕಿ ಹಬ್ಬುವ ಮೊದಲೇ ಎಲ್ಲಾ ಪ್ರಯಾಣಿಕರು ಕೆಳಗಿಳಿದ ಕಾರಣ ಯಾವುದೇ ಪ್ರಾಣಹಾನಿಯಾಗಿಲ್ಲ. ಆದರೆ ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಪ್ರಾಥಮಿಕ ಮಾಹಿತಿಯಂತೆ ಮಳೆಯಿಂದಾಗಿ ನೀರು ನುಗ್ಗಿ ಶಾರ್ಟ್ ಸರ್ಕಿಟ್ ಆದ ಕಾರಣ ಬಸ್‌ಗೆ ಬೆಂಕಿ ಹೊತ್ತಿಕೊಂಡಿದೆ.
ಭಾರೀ ಮಳೆ ಸುರಿದ ಕಾರಣ ರಸ್ತೆ ಜಲಾವೃತವಾಗಿತ್ತು. ಎಲೆಕ್ಟ್ರಿಕ್ ಬಸ್ ಚಾಸಿ ಭಾಗಕ್ಕೆ ನೀರು ನುಗ್ಗಿದೆ. ಆದ್ದರಿಂದ ಬಸ್ ಆಫ್ ಆಗಿದೆ. ಚಾಲಕ ಹಲವು ಬಾರಿ ಬಸ್ ಪುನಃ ಆನ್ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಅದು ಸಾಧ್ಯವಾಗಲಿಲ್ಲ. ಆಗ ಎಲ್ಲಾ ಪ್ರಯಾಣಿಕರನ್ನು ಇಳಿಯುವಂತೆ ಸೂಚಿಸಲಾಗಿದ್ದು, ಅವರಿಗೆ ಬೇರೆ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬಸ್ ಆಫ್ ಆದ 30-40 ನಿಮಿಷದಲ್ಲಿ ಹೊಗೆ ಕಾಣಿಸಿಕೊಂಡಿದೆ. ಆಗ ಚಾಲಕ, ನಿರ್ವಾಹಕ ಬಸ್‌ನಿಂದ ಹೊರಬಂದಿದ್ದಾರೆ. ಅಗ್ನಿಶಾಮಕ ದಳಕ್ಕೆ ಕರೆ ಮಾಡಲಾಗಿದೆ. ಅವರು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ ಎಂದು ಅಧಿಕಾರಿಗಳು ವಿವರಣೆ ನೀಡಿದ್ದಾರೆ.
ಈ ಘಟನೆ ಹೆಬ್ಬಾಳಕ್ಕೆ ಸಂಪರ್ಕ ಕಲ್ಪಿಸುವ ಹೊರ ವರ್ತುಲ ರಸ್ತೆಯ ಸಮೀಪ ನಡೆದಿದೆ. ಈ ಬಸ್ ಅನ್ನು ಜೆಬಿಎಂ ಕಂಪನಿ ನಿರ್ವಹಣೆ ಮಾಡುತ್ತದೆ. ಘಟನೆ ಕುರಿತು ಬಿಎಂಟಿಸಿ ಅಧಿಕಾರಿಗಳು ಕಂಪನಿಗೆ ಮಾಹಿತಿ ನೀಡಿದ್ದಾರೆ. ಬಸ್ ಅನ್ನು ಮುಂದಿನ ಪರಿಶೀಲನೆಗಾಗಿ ಕೆಂಗೇರಿ ಡಿಪೋಗೆ ಕಳಿಸಲಾಗಿದೆ.
ವಿವಿಧ ಕಂಪನಿಗಳ ಸುಮಾರು 723 ಎಲೆಕ್ಟ್ರಿಕ್ ಬಸ್‌ಗಳು ಬೆಂಗಳೂರು ನಗರದಲ್ಲಿ ಸಂಚಾರ ನಡೆಸುತ್ತಿವೆ. ಈ ಬಸ್‌ಗಳ ನಿರ್ವಹಣೆಯನ್ನು ಬಸ್ ಗುತ್ತಿಗೆ ನೀಡಿದ ಕಂಪನಿಯೇ ನೋಡಿಕೊಳ್ಳುತ್ತದೆ. ಬಿಎಂಟಿಸಿ ನಿರ್ವಾಹಕರನ್ನು ಮಾತ್ರ ನೀಡುತ್ತದೆ, ಕಂಪನಿಯೇ ಚಾಲಕರನ್ನು ನೇಮಕ ಮಾಡಿಕೊಳ್ಳುತ್ತದೆ. ಜೆಬಿಎಂ ಕಂಪನಿಯ 90 ನಾನ್ ಎಸಿ ಮಿಡಿ ಬಸ್‌ಗಳು ನಗರದಲ್ಲಿವೆ.












Click it and Unblock the Notifications