BMTC: ನೈಸ್ ರಸ್ತೆ ಮಾರ್ಗಗಳ ಟೋಲ್ ಶುಲ್ಕದ ಕುರಿತು ಬಿಎಂಟಿಸಿ ಮಹತ್ವದ ಮಾಹಿತಿ
BMTC: ಬಿಎಂಟಿಸಿಯು ರಾಜ್ಯ ರಾಜಧಾನಿ ಜೀವನಾಡಿ ಸಾರಿಗೆಗಳಲ್ಲಿ ಒಂದಾಗಿದೆ. ಇದೀಗ ನೈಸ್ ರಸ್ತೆ ಮಾರ್ಗಗಳಲ್ಲಿ ಸಂಚರಿಸುವ ಈ ಬಸ್‌ಗಳ ಟೋಲ್ ಶುಲ್ಕ ಹಾಗೂ ವಿದ್ಯಾರ್ಥಿ ಪಾಸ್‌ಗಳ ಕುರಿತು ಕೆಲ ಆನ್‌ಲೈನ್ ಮಾಧ್ಯಮಗಳಲ್ಲಿ ಪ್ರಕಟಿಸಲಾಗಿದ್ದ ತಪ್ಪು ಮಾಹಿತಿಗಳಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸ್ಪಷ್ಟನೆ ನೀಡಿ ಗೊಂದಲಗಳಿಗೆ ತೆರೆ ಎಳೆದಿದೆ.
ಸಾರ್ವಜನಿಕರ ಅನುಕೂಲಕ್ಕಾಗಿ ಬಿಎಂಟಿಸಿಯು ನೈಸ್ ರಸ್ತೆಯ ಮೂಲಕ ವಿವಿಧ ಸಾರಿಗೆ ಸೇವೆಗಳನ್ನು ಕಾರ್ಯಾಚರಣೆ ಮಾಡುತ್ತಿದೆ. ನೈಸ್ ರಸ್ತೆಯು ಟೋಲ್ ಸಂಗ್ರಹಣಾ ರಸ್ತೆ ಆಗಿರುವುದರಿಂದ, ಸಂಸ್ಥೆಯು ಆ ಮಾರ್ಗದಲ್ಲಿ ಚಲಿಸುವ ಬಸ್‌ಗಳಿಗೆ ಟೋಲ್ ಮೊತ್ತವನ್ನು ಪಾವತಿಸುತ್ತಿದೆ.

ಟೋಲ್ ಶುಲ್ಕದ ಬಗ್ಗೆ ಬಿಎಂಟಿಸಿ ಸ್ಪಷ್ಟನೆ ಏನು?
ಈ ವೆಚ್ಚವನ್ನು ಭರಿಸಲು ಆ ಮಾರ್ಗದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಂದ ಕೇವಲ ಟೋಲ್ ಬಳಕೆದಾರರ ಶುಲ್ಕವನ್ನು ಮಾತ್ರ ತೆಗೆದುಕೊಳ್ಳಲಾಗುತ್ತಿದೆ. ಇದು ಸಂಸ್ಥೆಯು ಹೆಚ್ಚುವರಿಯಾಗಿ ವಿಧಿಸುತ್ತಿರುವ ಯಾವುದೇ ಸಾಮಾನ್ಯ ಪ್ರಯಾಣ ದರವಲ್ಲ, ಬದಲಾಗಿ ಟೋಲ್ ಬಳಕೆಗೆ ಅನ್ವಯ ಆಗುವ ನಿಗದಿತ ಶುಲ್ಕವಾಗಿದೆ ಎಂದು ಬಿಎಂಟಿಸಿ ತಿಳಿಸಿದೆ.
ವಿದ್ಯಾರ್ಥಿಗಳಿಗೆ ಯಾವೆಲ್ಲಾ ಮಾರ್ಗಗಳಲ್ಲಿ ಉಚಿತ ಪ್ರಯಾಣ?
ಸಾಮಾಜಿಕ ಹೊಣೆಗಾರಿಕೆಯಡಿ ವಿದ್ಯಾರ್ಥಿಗಳಿಗೆ ಉಚಿತ/ರಿಯಾಯಿತಿ ಬಸ್ ಪಾಸ್‌ಗಳನ್ನು ನೀಡಲಾಗುತ್ತಿದೆ. ವಿದ್ಯಾರ್ಥಿಗಳ ವಾಸಸ್ಥಳದಿಂದ ಶಾಲಾ-ಕಾಲೇಜುಗಳಿಗೆ ನೇರ ಬಸ್ ಇಲ್ಲದಿದ್ದರೆ, ಒಂದರಿಂದ ಎರಡು ಕಡೆ ಮಾರ್ಗ ಬದಲಾಯಿಸಲು ಅವಕಾಶ ನೀಡಲಾಗಿದೆ. ಇನ್ನು ಪರ್ಯಾಯ ರಸ್ತೆಗಳಿಲ್ಲದ ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ ಹಾಗೂ ಕನಕಪುರ ಮುಂತಾದ ಟೋಲ್ ಮಾರ್ಗಗಳಲ್ಲಿ ವಿದ್ಯಾರ್ಥಿ ಪಾಸ್ ಹೊಂದಿರುವವರಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದೆ.
ಯಾರೆಲ್ಲಾ ಶುಲ್ಕ ಪಾವತಿ ಮಾಡಬೇಕು?
ನೈಸ್ ರಸ್ತೆಗೆ ಪರ್ಯಾಯವಾಗಿ ಇತರ ಸಾಮಾನ್ಯ ರಸ್ತೆಗಳ ಲಭ್ಯತೆ ಇದೆ. ಆದ್ದರಿಂದ ವಿದ್ಯಾರ್ಥಿಗಳು ಆ ಪರ್ಯಾಯ ಮಾರ್ಗಗಳನ್ನು ಬಳಸಿ ಉಚಿತವಾಗಿ ಪ್ರಯಾಣಿಸಬಹುದು. ಒಂದು ವೇಳೆ ಪರ್ಯಾಯ ಮಾರ್ಗಗಳಿದ್ದರೂ ಸಹ ವಿದ್ಯಾರ್ಥಿಗಳು ನೈಸ್ ರಸ್ತೆಯ ಬಸ್‌ಗಳಲ್ಲೇ ಪ್ರಯಾಣಿಸಲು ಬಯಸಿದರೆ, ಅವರು ಆ ರಸ್ತೆಗೆ ಅನ್ವಯಿಸುವ ಟೋಲ್ ಬಳಕೆದಾರರ ಶುಲ್ಕವನ್ನು ಕಡ್ಡಾಯವಾಗಿ ಪಾವತಿಸಬೇಕಾಗುತ್ತದೆ ಎಂದು ತಿಳಿಸಿದೆ.
ಬಿಎಂಟಿಸಿಯಿಂದ ಮಹತ್ವದ ಮನವಿ
ವಿದ್ಯಾರ್ಥಿಗಳಿಗೆ ಬಸ್ ಪಾಸ್ ಸೌಲಭ್ಯ ನಿರಾಕರಿಸುವ ಅಥವಾ ಅವರಿಂದ ಹೆಚ್ಚುವರಿ ಸಾಮಾನ್ಯ ದರ ವಸೂಲಿ ಮಾಡುವ ಯಾವುದೇ ಉದ್ದೇಶ ಸಂಸ್ಥೆಗಿಲ್ಲ. ಟೋಲ್ ಶುಲ್ಕ ಮತ್ತು ವಿದ್ಯಾರ್ಥಿ ಪಾಸ್ ಸೌಲಭ್ಯಗಳೆರಡೂ ಪ್ರತ್ಯೇಕ ವಿಚಾರಗಳಾಗಿದ್ದು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಈ ವಾಸ್ತವಾಂಶಗಳನ್ನು ಸರಿಯಾದ ಹಿನ್ನೆಲೆಯಲ್ಲಿ ಅರ್ಥೈಸಿಕೊಳ್ಳಬೇಕು ಎಂದು ಮನವಿ ಮಾಡಿದೆ.


Click it and Unblock the Notifications
