BMTC: ಬಿಎಂಟಿಸಿ ನೈಸ್ ರಸ್ತೆ ಬಸ್ ಮಾಸಿಕ ಪಾಸು, ದರ ಪಟ್ಟಿ
ಬೆಂಗಳೂರು, ಜೂನ್ 11; ಬೆಂಗಳೂರು ಮಹಾನಗರ ಪಾಲಿಗೆ ಸಂಸ್ಥೆ (ಬಿಎಂಟಿಸಿ) ನೈಸ್ ರಸ್ತೆಯ ಸಾಮಾನ್ಯ ಸೇವೆಗಳ ಮಾಸಿಕ ಬಸ್ ಪಾಸು ವಿತರಣೆ ಬಗ್ಗೆ ಸುತ್ತೋಲೆ ಹೊರಡಿಸಿದೆ. ಪಾಸುಗಳ ದರ, ಪಾಸುಗಳನ್ನು ಪಡೆಯಲು ಬೇಕಾದ ದಾಖಲೆಗಳ ಕುರಿತು ಮಾಹಿತಿ ನೀಡಿದೆ.
ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು ಈ ಕುರಿತು ಸುತ್ತೋಲೆಯನ್ನು ಹೊರಡಿಸಿದ್ದಾರೆ. ನೈಸ್ ರಸ್ತೆಯ ವಜ್ರ ಸೇವೆಗಳಲ್ಲಿ ಪ್ರಯಾಣಿಸುವವರು ವಜ್ರ, ವಾಯು ವಜ್ರ ಸೇವೆಗಳ ಮಾಸಿಕ ಪಾಸು ಹೊಂದಿದ್ದರೆ ಪಾಸಿನ ಜೊತೆ ಟೋಲ್ ಶುಲ್ಕ 30 ರೂ. ಪಾವತಿಸಿ ಪ್ರಯಾಣಿಸಬೇಕು ಎಂದು ಸ್ಪಷ್ಟಪಡಿಸಲಾಗಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನಗರದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಎಲೆಕ್ಟ್ರಾನಿಕ್ ಸಿಟಿಯ ಐಟಿ-ಬಿಟಿ ಕಂಪನಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರ ಹಾಗೂ ಸದರಿ ವಲಯದಲ್ಲಿ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರಿನ ವಿವಿಧ ಸ್ಥಳಗಳಿಂದ ನೈಸ್ ರಸ್ತೆಯ ಮೂಲಕ ಬಸ್‌ಗಳನ್ನು ಓಡಿಸುತ್ತಿದೆ.
ನೈಸ್ ರಸ್ತೆಯ ಬಸ್‌ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಪಾಸು ವ್ಯವಸ್ಥೆಯನ್ನು ಜಾರಿಗೂಸಲಾಗಿತ್ತು. ಆದರೆ ಕೋವಿಡ್ ಸಾಂಕ್ರಾಮಿಕದ ಕಾರಣ ಸದರಿ ಪಾಸು ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಲಾಗಿತ್ತು. ಪ್ರಸ್ತುತ ಸದರಿ ಸೇವೆಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಸಂಸ್ಥೆಯ ಮಾಸಿಕ ಪಾಸನ್ನು ಹೊಂದಿ ಪ್ರಯಾಣಿಸಿದ್ದಲ್ಲಿ ಟೋಲ್ ಚೀಟಿಯನ್ನು ಪಡೆಯಬೇಕಾಗಿದ್ದು, ಸದರಿ ಪ್ರಯಾಣಿಕರ ಅನುಕೂಲಕ್ಕಾಗಿ ಟೋಲ್ ಶುಲ್ಕ ಒಳಗೊಂಡಂತೆ ನೈಸ್ ರಸ್ತೆಯ ಮಾಸಿಕ ಪಾಸನ್ನು ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.
ಮಾಸಿಕ ಪಾಸು ದರಪಟ್ಟಿ
* ನೈಸ್ ರಸ್ತೆಯ ಸಾಮಾನ್ಯ ಮಾಸಿಕ ಪಾಸಿನ ದರವನ್ನು ಟೋಲ್ ಶುಲ್ಕ ಒಳಗೊಂಡಂತೆ ರೂ. 2000 ನಿಗದಿಪಡಿಸಿದೆ. ನೈಸ್ ರಸ್ತೆಯ ಸಾಮಾನ್ಯ ಮಾಸಿಕ ಪಾಸುದಾರರು ಸಂಸ್ಥೆಯ ಇತರ ಎಲ್ಲಾ ಸಾಮಾನ್ಯ ಸೇವೆಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಸಲಾಗಿದೆ.
* ನೈಸ್ ರಸ್ತೆಯ ಸಾಮಾನ್ಯ ಮಾಸಿಕ ಪಾಸುದಾರರು ನೈಸ್ ರಸ್ತೆಯನ್ನು ಹೊರತುಪಡಿಸಿ, ಇತರೆ ಮಾರ್ಗಗಳಲ್ಲಿ ಪ್ರಯಾಣಿಸುವಾಗ ಅನ್ವಯಿಸುವ ಟೋಲ್ ಶುಲ್ಕ ಹಾಗೂ ಅನ್ವಯವಾಗುವ ಇತರ ಶುಲ್ಕಗಳನ್ನು ಪಾವಹಿಸುವುದು ಕಡ್ಡಾಯ.
* ನೈಸ್ ರಸ್ತೆಯ ಮಾಸಿಕ ಪಾಸುದಾರರು ಪಾಸು ಪಡೆಯುವಾಗ ಹಾಗೂ ಬಸ್ಸುಗಳಲ್ಲಿ ಪ್ರಯಾಣಿಸುವಾಗ ಗುರುತಿನ ಚೀಟಿಗಳಲ್ಲಿ ಯಾವುದಾದರೂ ಒಂದು ಗುರುತಿನ ಚೀಟಿಯನ್ನು ಹೊಂದಿರುವುದು (ಸಾಪ್ಟ್ ಕಾಪಿ ಅಥವಾ ಹಾರ್ಡ್ ಕಾಪಿ) ಕಡ್ಡಾಯವಾಗಿರುತ್ತದೆ. ಚಾಲನಾ ಪರವಾನಗಿ, ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್, ಬೆಂ.ಮ.ಸಾ.ಸಂಸ್ಥೆಯ ಗುರುತಿನ ಚೀಟಿ (ಮಾನ್ಯತಾ ಅವಧಿ ಹೊಂದಿರುವವರೆಗೆ).
* ನೈಸ್ ರಸ್ತೆಯ ಸಾಮಾನ್ಯ ಮಾಸಿಕ ಪಾಸುಗಳನ್ನು ದಿನಾಂಕವಾರು, ಡಿಜಿಟಲ್ ಮಾದರಿಯಲ್ಲಿ ಮಾತ್ರ ವಿತರಣೆ ಮಾಡಲಾಗುತ್ತದೆ. ನೈಸ್ ರಸ್ತೆಯ ಸಾಮಾನ್ಯ ಮಾಸಿಕ ಪಾಸನ್ನು ಡಿಜಿಟಲ್ ಮಾದರಿಯಲ್ಲಿ ವಿತರಣೆ ಮಾಡಲು ಅಗತ್ಯ ತಂತ್ರಾಂಶ ಅಭಿವೃದ್ಧಿಪಡಿಸಲು ಮುಖ್ಯ ಗಣಕ ವ್ಯವಸ್ಥಾಪಕರು ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ.
* ನೈಸ್ ರಸ್ತೆಯ ವಜ್ರ ಸೇವೆಗಳು ಪ್ರಯಾಣಿಸುವ ಪ್ರಯಾಣಿಕರು ಸಂಸ್ಥೆಯ ವಜ್ರ ಮತ್ತು ವಾಯುವಜ್ರ ಸೇವೆಗಳ ಮಾಸಿಕ ಪಾಸುಗಳನ್ನು ಹೊಂದಿದ್ದು, ಸದರಿ ಪಾಸಿನೊಂದಿಗೆ ಟೋಲ್ ಶುಲ್ಕ ರೂ. 30 (ಟೋಲ್ ದರ ರೂ. 28.57 + ಜಿ.ಎಸ್.ಟಿ ದರ ರೂ.1.43 = ರೂ. 30) ಪಾವತಿಸಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.
ನೈಸ್ ರಸ್ತೆಯ ಸಾಮಾನ್ಯ ಮಾಸಿಕ ಪಾಸು ವ್ಯವಸ್ಥೆಯನ್ನು ಜಾರಿಗೆ ಎಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿಗಳು, ವಿಭಾಗೀಯ ಸಂಚಾರ ಅಧಿಕಾರಿಗಳು ಹಾಗೂ ಹಿರಿಯ ಘಟಕ ವ್ಯವಸ್ಥಾಪಕರುಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕು. ಈ ಕುರಿತು ಸಾಮಾನ್ಯ ಸ್ಥಾಯಿ ಆದೇಶದ ಎಲ್ಲಾ ಮಾಹಿತಿಗಳ ಬಗ್ಗೆ ಮೇಲ್ವಿಚಾರಕ ಸಿಬ್ಬಂದಿಗಳು, ನಿರ್ವಾಹಕರುಗಳು, ಚಾಲಕ-ಕಂ-ನಿರ್ವಾಹಕರುಗಳು ಮತ್ತು ಚಾಲಕರುಗಳ ಗಮನಕ್ಕೆ ತರುವುದು. ಈ ಆದೇಶ ದಿನಾಂಕ 1/7/2024ರಿಂದ ಜಾರಿಗೆ ಬರುತ್ತದೆ ಎಂದು ತಿಳಿಸಲಾಗಿದೆ.












Click it and Unblock the Notifications