Namma Metro: ಹಳದಿ ಮಾರ್ಗದ ನಿಲ್ದಾಣಗಳ ಬಳಿ BMTC ಬಸ್‌ಸ್ಟ್ಯಾಂಡ್‌ಗಳು ಶಿಫ್ಟ್
ಬೆಂಗಳೂರು, ಡಿಸೆಂಬರ್ 17: ಬೆಂಗಳೂರು ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದೆ. ಈ ಪ್ರಯಾಣಿಕರು ಮೆಟ್ರೋ ನಿಲ್ದಾಣಗಳಿಗೆ ಬರಲು, ಇಲ್ಲಿಂದ ತೆರಳಲು ಅನುಕೂಲವಾಗುವಂತೆ ಹಳದಿ ಮಾರ್ಗದ ಸಮೀಪಕ್ಕೆ ಬಿಎಂಟಿಸಿ ಬಸ್ ನಿಲ್ದಾಣಗಳನ್ನು ಸ್ಥಳಾಂತರಿಸಲಾಗಿದೆ. ಕೆಲವೆಡೆ ಹೊಸದಾಗಿ ಬಸ್‌ಸ್ಟಾಪ್ ಸ್ಥಾಪಿಸಲಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮದ (BMRCL) ಅಧಿಕಾರಿಗಳು ಬುಧವಾರ ಮಾಹಿತಿ ನೀಡಿದ್ದಾರೆ.
ಬಿಎಂಆರ್‌ಸಿಎಲ್ ವತಿಯಿಂದ ಹಳದಿ ಮಾರ್ಗದಲ್ಲಿನ ಮೆಟ್ರೋ ನಿಲ್ದಾಣಗಳ ಸಮೀಪ ಬಿಎಂಟಿಸಿ ಬಸ್ ನಿಲ್ದಾಣಗಳ ವ್ಯವಸ್ಥೆ ಮಾಡಲಾಗಿದೆ. ರಾಷ್ಟ್ರೀಯ ವಿದ್ಯಾಲಯ ರಸ್ತೆ -ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರ ಹಳದಿ ಮಾರ್ಗದಲ್ಲಿ 2025 ಆಗಸ್ಟ್ 11ರಂದು ರೈಲು ಸೇವೆ ಆರಂಭವಾಗಿದೆ. ಮೆಟ್ರೋ ರೈಲುಗಳು ಹಾಗೂ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಬಿಎಂಆರ್‌ಸಿಎಲ್ ಮತ್ತು ಬಿಎಂಟಿಸಿ ಅಧಿಕಾರಿಗಳು ಸಂಯುಕ್ತವಾಗಿ ಮಾರ್ಗ ಪರಿಶೀಲನೆ ನಡೆಸಿದ್ದೇವೆ ಎಂದರು.

ಹಳದಿ ಮಾರ್ಗದ ಮೆಟ್ರೋ ನಿಲ್ದಾಣಗಳ ಸಮೀಪ ಹೊಸದಾಗಿ ಬಿಎಂಟಿಸಿ ಬಸ್ ನಿಲ್ದಾಣಗಳನ್ನು ಸ್ಥಾಪಿಸಲಾಗಿದೆ. ಮೆಟ್ರೋ ನಿಲ್ದಾಣಗಳಿಂದ ದೂರವಿದ್ದ ಬಸ್‌ಸ್ಟಾಪ್‌ಗಳನ್ನು ನಿಲ್ದಾಣಗಳ ಹತ್ತಿರಕ್ಕೆ ಸ್ಥಳಾಂತರಿಸಲಾಗಿದೆ. ಈ ಮೂಲಕ ಸಾರಿಗೆ ಸಂಪರ್ಕ ಸುಧಾರಿಸಲಾಗಿದೆ. ಇದರಿಂದ ಮೆಟ್ರೋದಿಂದ ಇಳಿದು ಬಸ್ ಹಿಡಿಯಲು ಹಾಗೂ ಬಸ್‌ಗಳ ಮೂಲಕ ಬಂದು ಮೆಟ್ರೋ ಏರುವ ಪ್ರಯಾಣಿಕರಿಗೆ ಸಾಕಷ್ಟು ಪ್ರಯೋಜನವಾಗಲಿದೆ.
ಹೊಸದಾಗಿ ನಿರ್ಮಿಸಲಾದ ಬಸ್‌ಸ್ಟಾಪ್‌ಗಳು
ಮೆಟ್ರೋ ನಿಲ್ದಾಣಗಳಾದ ಬಯೋಕಾನ್ ಹೆಬ್ಬಗೋಡಿ, ಬೆರೆಟೇನ ಅಗ್ರಹಾರ, ಸಿಂಗಸಂದ್ರ, ಹೊಂಗಸಂದ್ರ, ಸೆಂಟ್ರಲ್ ಸಿಲ್ಕ್ ಬೋರ್ಡ್ ಮತ್ತು ಆರ್.ವಿ. ರಸ್ತೆ ನಿಲ್ದಾಣಗಳ ಸಮೀಪ ಹೊಸ ಬಿಎಂಟಿಸಿ ಬಸ್‌ಸ್ಟಾಪ್ ನಿರ್ಮಿಸಲಾಗಿದೆ. ಅದೇ ರೀತಿ ಎಲೆಕ್ಟ್ರಾನಿಕ್ ಸಿಟಿ, ಹೊಸ ರಸ್ತೆ ಮತ್ತು ರಾಗಿಗುಡ್ಡ ನಿಲ್ದಾಣಗಳ ಬಳಿ ಮೂರು ಬಿಎಂಟಿಸಿ ಬಸ್‌ಸ್ಟಾಪ್‌ಗಳನ್ನು ಸ್ಥಳಾಂತರಿಸುವ ಮೂಲಕ ಜನರಿಗೆ ಸಾರಿಗೆ ಸಂಪರ್ಕ ಕೈಗೆಟುಕುವಂತೆ ಮಾಡಲಾಗಿದೆ.
ಜಯದೇವ, ಬಿಟಿಎಂ ಲೇಔಟ್, ಬೊಮ್ಮನಹಳ್ಳಿ, ಕುಡ್ಡು ಗೇಟ್ ಹಾಗೂ ಇನ್ಫೋಸಿಸ್ ಫೌಂಡೇಶನ್ ಕೊನ್ನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣಗಳಲ್ಲಿ ಬಸ್ ನಿಲ್ದಾಣಗಳು ಈಗಾಗಲೇ 100 ಮೀಟರ್ ಒಳಗೆ ಲಭ್ಯವಿವೆ. ಇಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಇನ್ನೂ ಹನ್ನೂರು ರಸ್ತೆ ಮತ್ತು ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರ ಮೆಟ್ರೋ ನಿಲ್ದಾಣಗಳಲ್ಲಿ ಸ್ಥಳದ ಕೊರತೆಯಿಂದಾಗಿ ಬಸ್ ನಿಲ್ದಾಣಗಳನ್ನು ಸ್ಥಳಾಂತರಿಸಲು ಸಾಧ್ಯವಾಗಿಲ್ಲ. ಮೆಟ್ರೋ ಪ್ರಯಾಣಿಕರು ಈ ಸುಧಾರಿತ ಬಸ್ ಸಂಪರ್ಕವನ್ನು ಸದುಪಯೋಗ ಮಾಡಿಕೊಳ್ಳುವಂತೆ ಬಿಎಂಆರ್‌ಸಿಎಲ್ ಪ್ರಕಟಣೆಯಲ್ಲಿ ಕೋರಿದೆ.
ತಿಂಗಳಾಂತ್ಯಕ್ಕೆ ಹೊಸ ರೈಲು ನಿಯೋಜನೆ ಸಾಧ್ಯತೆ
ಸುಮಾರು 19.5 ಕಿಲೋ ಮೀಟರ್ ಉದ್ದದ್ಧ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಐದು ರೈಲುಗಳು ಈಗಾಗಲೇ ಸಂಚಾರ ಸೇವೆ ನೀಡುತ್ತಿವೆ. ಆರನೇ ರೈಲು ಬೋಗಿಗಳು ಕೊಲ್ಕತ್ತಾದ ಮೆಟ್ರೋ ತಯಾರಿಕಾ ಘಟಕ ಟಿಟಾಗರ್‌ನಿಂದ ಬೆಂಗಳೂರಿನ ಹೆಬ್ಬಗೋಡಿ ಡಿಪೋಗೆ ಬಂದಿವೆ. ವಿವಿಧ ತಪಾಸಣೆ, ಪರೀಕ್ಷೆಗಳು ನಡೆಯುತ್ತಿವೆ. ಡಿಸೆಂಬರ್ ನಾಲ್ಕನೇ ವಾರ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ತಿಂಗಳಾಂತ್ಯಕ್ಕೆ ಇಲ್ಲವೇ ಜನವರಿ ಮೊದಲ ವಾರ ಆರನೇ ರೈಲು ಸಹ ಸೇವೆಗೆ ನಿಯೋಜನೆಗೊಳ್ಳಲಿದೆ. ಆಗ ರೈಲುಗಳ ಆವರ್ತನ ಸಮಯ ಹಾಲಿ 16 ನಿಮಿಷಗಳಿಂದ 12 ನಿಮಿಷಕ್ಕೆ ಇಳಿಯಲಿದೆ.












Click it and Unblock the Notifications