Namma Metro: ಆತ್ಮಹತ್ಯೆಗಳಿಗೆ ಬ್ರೇಕ್ ಹಾಕುವ PSD ವ್ಯವಸ್ಥೆ ಅಳವಡಿಕೆಗೆ ಸಜ್ಜು, ಟೆಂಡರ್ ಪೂರ್ಣ
ಬೆಂಗಳೂರು, ಜೂನ್ 16: ಬೆಂಗಳೂರು ನಮ್ಮ ಮೆಟ್ರೋ ರೈಲು ನಿಲ್ದಾಣಗಳಲ್ಲಿ ಆತ್ಮಹತ್ಯೆ ಮತ್ತು ಯತ್ನ ಪ್ರಕರಣಗಳು ಜರುಗುತ್ತಿರುವ ಕಾರಣದಿಂದ ರೈಲು ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್ (PSD) ಅಳವಡಿಕೆಗೆ ಮಾಡಲು BMRCL ಮುಂದಾಗಿದೆ.
ಸದ್ಯದ ಮೆಟ್ರೋ ನಿಲ್ದಾಣಗಳಲ್ಲಿ PSD ಅಳವಡಿಕೆಗೆ ಸಮಯ ಬೇಕಿದೆ. ಹೀಗಾಗಿ ನಿತ್ಯ ಲಕ್ಷಾಂತರ ಜನರು ಬರುವ, ಇಂಟರ್‌ಚೇಂಜ್ ನಿಲ್ದಾಣವಾದ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ PSD ರೀತಿಯಲ್ಲಿ ಬ್ಯಾರಿಕೇಡ್ ಅವಳಡಿಸಲಾಗಿದೆ. ಇದೇ ಮೊದಲ ಬಾರಿ ಅಳವಡಿಕೆ ಆಗಿದೆ.

ಇದೀಗ ಹಾಲಿ ನಿಲ್ದಾಣಗಳಲ್ಲಿ ಮೆಟ್ರೋ ಹಳಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣಕ್ಕೆ ನಿರ್ಮಾಣವಾಗುತ್ತಿರುವ ಹೊಸ ಮೆಟ್ರೋ ಮಾರ್ಗದ ನಿಲ್ದಾಣಗಳಲ್ಲಿ PSD ಅಳವಡಿಕೆಗೆ BMRCL ಕರೆದಿದ್ದ ಟೆಂಡರ್ ಅನ್ನು ಗುತ್ತಿಗೆ ಪಡೆಯುವಲ್ಲಿ ಕಂಪನಿಯೊಂದು ಯಶಸ್ವಿಯಾಗಿದೆ.
ನೀಲಿ, ಗುಲಾಬಿ ಮೆಟ್ರೋ ಮಾರ್ಗದಲ್ಲಿ ಪಿಎಸ್‌ಡಿ ವ್ಯವಸ್ಥೆ
ಅಲ್‌ಸ್ಟಾಮ್ ಟ್ರಾನ್ಸ್‌ಪೋರ್ಟ್ ಇಂಡಿಯಾ ಸಂಸ್ಥೆ ಪಿಎಸ್‌ಡಿ ಅಳವಡಿಕೆಗೆ ಗುತ್ತಿಗೆ ಪಡೆದುಕೊಂಡಿದೆ. 21 ಕಿ.ಮೀ. ಉದ್ದ ಕಾಳೇನ ಅಗ್ರಹಾರ - ನಾಗವಾರ ಮಾರ್ಗದ (Namma metro pink line) ನಿಲ್ದಾಣಗಳಲ್ಲಿ ಮತ್ತು 56 ಕಿ.ಮೀ. ಉದ್ದ ಸೆಂಟ್ರಲ್ ಸಿಲ್ಕ್ ಬೋರ್ಡ್- ಕೆ.ಆರ್.ಪುರ ಮತ್ತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವರೆಗಿನ ಮಾರ್ಗದ (Namma Metro Blue Line) ನಿಲ್ದಾಣಗಳಲ್ಲಿ ಪಿಎಸ್‌ಡಿಗಳನ್ನು ಅಳವಡಿಸಲಾಗುತ್ತಿದೆ.
857 ಕೋಟಿ ರೂ. ವೆಚ್ಚದ ಯೋಜನೆ
ಈ ಕಂಪನಿಯು ಹೊಸ ಮೆಟ್ರೋ ಮಾರ್ಗದಲ್ಲಿ ಪಿಎಸ್‌ಡಿ ವ್ಯವಸ್ಥೆ ಅಳಡಿಕೆಗೆ 857 ಕೋಟಿ ರೂ. ವೆಚ್ಚ ಪಡೆಯಲಿದೆ. ಗುಲಾಬಿ ಮಾರ್ಗದಲ್ಲಿ ಪೂರ್ಣ ಎತ್ತರದ ಪ್ಲಾಟ್‌ಫಾರ್ಮ್ ಪರದೆಯ ಬಾಗಿಲುಗಳನ್ನು ಹಾಗೂ ನೀಲಿ ಮಾರ್ಗದಲ್ಲಿ ಅರ್ಧ ಎತ್ತರದ ಪ್ಲಾಟ್‌ಫಾರ್ಮ್ ಸ್ಕ್ರೀನ್ ಗೇಟ್‌ಗಳನ್ನು (ಪಿಎಸ್‌ಜಿ) ಅಳವಡಿಸಲು ನಿರ್ಧರಿಸಲಾಗಿದೆ.

ಈ ಕಂಪನಿಯು ಒಟ್ಟು ಐದು ವರ್ಷಗಳ ಕಾಲ ಇವುಗಳ ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡಿದೆ. ಅಲ್ಲದೇ ಮೆಟ್ರೋ ಭದ್ರತಾ ಸಿಬ್ಬಂದಿಗೆ ಪಿಎಸ್‌ಡಿ ಬಗ್ಗೆ ತರಬೇತಿ ಸಹ ನೀಡಲಿದೆ. ಈ ಯೋಜನೆಗೆ ಜಪಾನ್ ಇಂಟರ್‌ನ್ಯಾಷನಲ್ ಕೋ-ಆಪರೇಷನ್ ಏಜೆನ್ಸಿ (ಜೆಐಸಿಎ) ಆರ್ಥಿಕ ಸಹಕಾರ ನೀಡುತ್ತಿದೆ.
ಸದ್ಯ ಹಾಲಿ ಹಸಿರು ಮಾರ್ಗ ಮತ್ತು ನೇರಳೆ ಮಾರ್ಗದಲ್ಲಿ ನಿರ್ಮಿಸಬೇಕು ಎಂಬ ಪ್ರಸ್ತಾವ ಇದೆ. ಆದರೆ ಇದು ಕಷ್ಟ ಸಾಧ್ಯ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ಯೋಚಿಸುತ್ತಿದ್ದಾರೆ.
ಆತ್ಮಹತ್ಯೆ ಮತ್ತು ಯತ್ನದ ಪ್ರಕರಣ
ಹಲವು ವಾರಗಳ ಹಿಂದೆ ನಮ್ಮ ಮೆಟ್ರೋ ಅತ್ತಿಗುಪ್ಪೆ ನಿಲ್ದಾಣದಲ್ಲಿ ಲಾ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದ. ಬರುವ ರೈಲು ನೋಡಿಕೊಂಡು ಹಳಿಗೆ ಹಾರಿ ಪ್ರಾಣ ಬಿಟ್ಟಿದ್ದ. ಇದರಿಂದ ಸಂಚಾರ ರೈಲು ಸೇವೆಗಳಲ್ಲಿ ವ್ಯತ್ಯಯ ಉಂಟಾಗಿತ್ತು. ವಿದ್ಯಾರ್ಥಿ ಶವ ತೆಗೆಯಲು ಪರದಾಡ ಬೇಕಿತ್ತು.
ಅದಾದ ಬಳಿಕ ಮಾಗಡಿ ರಸ್ತೆ ನಿಲ್ದಾಣದಲ್ಲೂ ವ್ಯಕ್ತಿಯೊಬ್ಬರು ಜೀವ ಬಿಡಲು ಟ್ರ್ಯಾಕ್‌ಗೆ ಹಾರಿದ್ದರು. ಆದರೆ ಸಿಬ್ಬಂದಿ ಕರ್ತವ್ಯ ಪ್ರಜ್ಞೆಯಿಂದ ಸಂಭವನೀಯ ಅನಾಹುತ ತಪ್ಪಿತ್ತು. ಈ ಹಿಂದೆ ಮೊಬೈಲ್ ಬೀಳಿಸಿಕೊಂಡು ಅದನ್ನು ತೆಗೆದುಕೊಳ್ಳಲು ಹಾಗೂ ಇನ್ನಿತರ ಕಾರಣಗಳಿಗೆ ಮೆಟ್ರೋ ಟ್ರ್ಯಾಕ್ ಗೆ ಜಿಗಿದ ಬಗ್ಗೆ ವರದಿ ಆಗಿವೆ. ಹೀಗಾಗಿ ಪಿಎಸ್‌ಡಿ ವ್ಯವ್ಯಸ್ಥೆ ಮುನ್ನೆಲೆ ಬಂದಿದೆ. ಭವಿಷ್ಯದಲ್ಲಿ ಸಾರ್ವಜನಿಕರಿಗೆ ಯಾವುದೇ ಅಪಾಯ ಆಗದಂತೆ ತಡೆಯಲು ಹೀಗೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ.












Click it and Unblock the Notifications