Namma Metro: ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಹೆಚ್ಚುವರಿ ಸೌಲಭ್ಯ ಪ್ರಯಾಣಿಕರಿಗೆ ಮುಕ್ತ: BMRCL
ಬೆಂಗಳೂರು, ಜುಲೈ 29: ಬೆಂಗಳೂರು ನಮ್ಮ ಮೆಟ್ರೋ ರೈಲು ನಿಗಮಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಲೇ ಇದೆ. ಇಂಟರ್‌ಚೇಂಜ್ ನಿಲ್ದಾಣ ಮಾರ್ಗವಾಗಿ ನಿತ್ಯ ಲಕ್ಷಾಂತರ ಪ್ರಯಾಣಿಕರು ಸಂಚರಿಸುತ್ತಾರೆ. ಇಲ್ಲಿ ಹೆಚ್ಚಿನ ದಟ್ಟಣೆ ಕಂಡು ಬರುತ್ತಿದೆ. ಹಾಗಾಗಿ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ತಡೆರಹಿತ ವ್ಯವಸ್ಥೆಯೊಂದನ್ನು ಸೇವೆ ಮುಕ್ತಗೊಳಿಸಲಾಗಿದೆ ಎಂದು BMRCL ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹೌದು, ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ದೈನಂದಿನ ಪ್ರಯಾಣಿಕರ ನಿರಂತರ ಬೇಡಿಕೆಗೆ ಅನುಗುಣವಾಗಿ ಜುಲೈ 28ರಂದು ಸೋಮವಾಋ ಇಂದು ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಪ್ರವೇಶ-D ಯಲ್ಲಿ ಪ್ರವೇಶ/ನಿರ್ಗಮನ ದ್ವಾರವನ್ನು ತೆರೆಯಲಾಗಿದೆ. ಇದರಿಂದ ಪ್ರಯಾಣಿಕರ ದಟ್ಟಣೆ ವೇಳೆ ಜನರು ಓಡಾಟಕ್ಕೆ ಹೆಚ್ಚುವರಿ ಸೌಲಭ್ಯ ಒದಗಿಸಲಾಗಿದೆ.

ಮೆಟ್ರೋ ನಿಲ್ದಾಣದಲ್ಲಿ ತೆರೆಯಲಾದ ಪ್ರವೇಶ ದ್ವಾರವು ಇದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಟರ್ಮಿನಲ್-2 ಮತ್ತು ಟರ್ಮಿನಲ್-2A ಗೆ ನೇರ ಪ್ರವೇಶವನ್ನು ಕಲ್ಪಿಸುತ್ತದೆ. ಈ ಉಪಕ್ರಮವು ಕೊನೆಯ ಮೈಲಿ ಸಂಪರ್ಕವನ್ನು ಸುಧಾರಿಸಲು ಮತ್ತು ಬೆಂಗಳೂರಿನ ಸಾರಿಗೆ ಪರಿಸರ ವ್ಯವಸ್ಥೆಯಾದ್ಯಂತ ತಡೆರಹಿತ ಬಹು-ಮಾದರಿ ಏಕೀಕರಣವನ್ನು ಸುಗಮಗೊಳಿಸಲು BMRCL ನ ನಿರಂತರ ಪ್ರಯತ್ನಗಳ ಭಾಗವಾಗಿದೆ ಎಂದು ಅಧಿಕಾರಿಗಳು ಅಧಿಕೃತ ಮಾಹಿತಿ ನೀಡಿದ್ದಾರೆ.
ನಿಲ್ದಾಣದಲ್ಲಿನ ಪ್ರವೇಶದ್ವಾರವು ಪಾದಚಾರಿ ದಟ್ಟಣೆಯನ್ನು ಕಡಿಮೆ ಮಾಡುತ್ತದೆ. ವರ್ಗಾವಣೆ ಸಮಯವನ್ನು ಕಡಿಮೆ ಮಾಡುತ್ತದೆ ಮತ್ತು ಸ್ಮಾರ್ಟ್, ಪ್ರಯಾಣಿಕ-ಕೇಂದ್ರಿತ ಮೂಲಸೌಕರ್ಯದತ್ತ ನಗರದವನ್ನು ಬೆಂಬಲಿಸುತ್ತದೆ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಪ್ರಯಾಣಿಕರ ಸಂಖ್ಯೆ ಹೆಚ್ಚಳ, ನೂಕು ನುಗ್ಗಲು
ನಮ್ಮ ಮೆಟ್ರೋದಲ್ಲಿ ದೈನಂದಿನ ಪ್ರಯಾಣಿಕರ ಸಂಖ್ಯೆ ಒಂದೇ ದಿನಕ್ಕೆ 9.20 ಲಕ್ಷವರೆಗೆ ತಲುಪಿತ್ತು. ನಂತರ ಪ್ರಯಾಣ ದರ ಏರಿಕೆ ಕಾರಣಕ್ಕೆ ಲಕ್ಷಾಂತರ ಜನರು ವಿಮುಖರಾದರು. ಬದಲಿ ಸಾರಿಗೆ ಸೌಲಭ್ಯದತ್ತ ಮುಖ ಮಾಡಿದರು. ಕೆಲವು ಬಾರಿ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ನೂಕು ನುಗ್ಗಲು ಕಂಡು ಬಂದಿತ್ತು. ಹೀಗಾಗಿ ಪ್ಲಾಟ್‌ಫಾರ್ಮ್‌ನಿಂದ ಹೊರ ಹೋಗಲು ಸರಾಗವಾಗುವಂತೆ ಎರಡು ಹೆಚ್ಚುವರಿ ಪ್ರವೇಶ ದ್ವಾರಗಳನ್ನು ಈ ಹಿಂದೆಯು ತೆರೆಲಾಗಿತ್ತು. ಇದೀಗ ಟರ್ಮಿನಲ್ ಸಂಪರ್ಕಿಸುವ ಪ್ರವೇಶ-D ಯಲ್ಲಿ ಪ್ರವೇಶ/ನಿರ್ಗಮನ ದ್ವಾರ ತೆರೆಯಲಾಗಿದೆ.
ಇನ್ನೂ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಪ್ಲಾಟ್ ಫಾರ್ಮ್ ಸ್ಕ್ರೀನ್ ಡೋರ್ (ಪಿಎಸ್‌ಪಿ) ರೀತಿಯ ಶಾಸ್ವತ ವ್ಯವಸ್ಥೆಯನ್ನು ಮಾಡಲಾಗಿದೆ. ಪ್ಲಾಟ್ ಫಾರ್ಮ್ ನಿಂದ ಹಳಿಗೆ ಜಿಗಿಯುವ, ಹಳಿಗೆ ಇಳಿಯುವ ಪ್ರಕರಣ, ಆತ್ಮಹತ್ಯೆ ಪ್ರಕರಣ ವರದಿ ಆಗುತ್ತಿದ್ದಂತೆ ಪಿಎಸ್‌ಡಿ ವ್ಯವಸ್ಥೆ ಅಳವಡಿಕೆ ಬಗ್ಗೆ ಹೆಚ್ಚಿನ ಚರ್ಚೆ ಆಗಿದ್ದವು. ಬೇರೆ ಬೇರೆ ನಗರಗಳಲ್ಲಿರುವಂತೆ ಇಲ್ಲಿಯು ಮಾಡಬೇಕೆಂಬ ಒತ್ತಾಯ ಶುರುವಾಗಿತ್ತು. ಸದ್ಯ ಬ್ಯಾರಿಕೇಡ್ ರೀತಿಯಲ್ಲಿ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಪ್ಲಾಟ್ ಫಾರ್ಮ್ ಸ್ಕ್ರೀನ್ ಡೋರ್ ಹಾಕಲಾಗಿದೆ. ಹೊಸ ಮಾರ್ಗಗಳಲ್ಲಿ ಪಿಎಸ್‌ಡಿ ವ್ಯವಸ್ಥೆ ಅಳವಡಿಸಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ.












Click it and Unblock the Notifications