Bengaluru Metro: ಉಪನಗರಗಳವರೆಗೂ 129 ಕಿಮೀ 'ನಮ್ಮ ಮೆಟ್ರೋ' ವಿಸ್ತರಣೆ, ಇಲ್ಲಿದೆ ಮಾಹಿತಿ
ಬೆಂಗಳೂರು, ಜನವರಿ 02: ಬೆಂಗಳೂರಿನಲ್ಲಿ ಸದ್ಯ 73 ಕಿಲೋ ಮೀಟರ್ ಜಾಲ ಹೊಂದಿರುವ 'ನಮ್ಮ ಮೆಟ್ರೋ' (Namma Metro) ಅನ್ನು ಉಪನಗರಗಳವರೆಗೆ ವಿಸ್ತರಣೆ ಮಾಡಬಹುದಾದ ಪ್ರಸ್ತಾವನೆಯೊಂದನ್ನು ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ರಾಜ್ಯ ಸರ್ಕಾರದ ಮುಂದಿಟ್ಟಿದೆ ಎಂದು ಪ್ರಜಾವಾಣಿ ವರದಿ ಮಾಡಿದೆ.
ಹೌದು, ನಮ್ಮ ಮೆಟ್ರೋ ವಿಸ್ತರಣೆ ಆಗುತ್ತಿದೆ, ಹೊಸ ಮಾರ್ಗಗಳು ನಿರ್ಮಾಣವಾಗುತ್ತಿವೆ. ಆದರೆ ಇವೆಲ್ಲವು ನಗರದ ಒಳಗೆ ಇರುವಂತಹ ಮೆಟ್ರೋ ಜಾಲವಾಗಿದೆ. ಆದರೆ ಇದೇ ಮೊದಲ ಬಾರಿಗೆ ಸರ್ಕಾರ ನೀಡಿದ ಅನುಮೋದಿತ ಸಮಗ್ರ ಚಲನಶೀಲ ಯೋಜನೆ ಷರತ್ತು ದಾಟಿ ಬಿಎಂಆರ್‌ಸಿಎಲ್ ಉಪನಗರಗಳಿಗೆ ಮೆಟ್ರೋ ಜಾಲ ವಿಸ್ತರಿಸಬಹುದೇ? ಎಂಬುದನ್ನು ಪ್ರಸ್ತಾಪಿಸಿದೆ.

ಸೂಕ್ತ ತಜ್ಞರು, ಸ್ಥಳೀಯ ಸಂಘ ಸಂಸ್ಥೆಗಳು, ಸಂಘಟನೆಗಳ ಸಲಹೆ ಮೇರೆಗೆ ಬಿಬಿಎಂಪಿ ವ್ಯಾಪ್ತಿಗೆ ಒಳಪಡದೇ ಪ್ರದೇಶಗಳವರೆಗೆ ಅಂದರೆ ಉಪನಗರಗಳ ವರೆಗೂ ನಮ್ಮ ಮೆಟ್ರೋ ವಿಸ್ತರಣೆಯ ಚಿಂತನೆ ಆರಂಭಿಸಿದೆ. ಈ ನಿಟ್ಟಿನಲ್ಲಿ ಕಾರ್ಯಸಾಧ್ಯತೆಗಳ ಕುರಿತು ಅಧ್ಯಯನ ನಡೆಸುವಂತೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ತಿಳಿಸಿದೆ.
ಇದು 129 ಕಿ.ಮೀ. ವಿಸ್ತರಣೆಯ ಪ್ರಸ್ತಾವನೆ
BMRCL ಪ್ರಕಾರ, ಒಟ್ಟು 129 ಕಿಲೋ ಮೀಟರ್ ಉದ್ದ ಸಂಪರ್ಕ ಜಾಲ ವಿಸ್ತರಣೆಗೆ ಚಿಂತನೆ ನಡೆದಿದೆ. ಅಂದರೆ ಇಷ್ಟು ಉದ್ದದ ಮೆಟ್ರೋ ಮಾರ್ಗದ ಪೈಕಿ ಕಾಳೇನ ಅಗ್ರಹಾರದಿಂದ-ಕಾಡುಗೋಡೆವರೆಗೆ (68) ಕಿಲೋ ಮೀಟರ್ ಇರಲಿದೆ. ಇಷ್ಟು ದೊಡ್ಡ ಮಾರ್ಗದಲ್ಲಿ ಆನೇಕಲ್, ವರ್ತೂರು, ಸರ್ಜಾಪುರ ಪ್ರದೇಶಗಳು ಒಳಗೊಳ್ಳಲಿವೆ.
ಅದರೊಂದಿಗೆ ಚಲ್ಲಘಟ್ಟದಿಂದ ಬಿಡದಿವರೆಗೆ 15 ಕಿಲೋ ಮೀಟರ್ ಮಾರ್ಗ, ರೇಷ್ಮೆ ಮಂಡಳಿಯಿಂದ ಹಾರೋಹಳ್ಳಿವರೆಗೆ 24ಕಿಲೋ ಮೀಟರ್, ಮಾದಾವರದಿಂದ ಕುಣಿಗಲ್ ಅಡ್ಡ ರಸ್ತೆವರೆಗೆ 11 ಕಿಲೋ ಮೀಟರ್ ಹಾಗೂ ಬೊಮ್ಮಸಂದ್ರದಿಂದ ಅತ್ತಿಬೆಲೆ ವರೆಗೆ 11 ಕಿಲೋ ಮೀಟರ್ ವರೆಗೆ ಜಾಲ ವಿಸ್ತರಣೆಗೆ ಪ್ರಸ್ತಾಪಿಸಿದೆ. ಈ ಉಪನಗರಗಳ ವರೆಗೆ ಮೆಟ್ರೋ ಮಾರ್ಗ ಅಭಿವೃದ್ಧಿಪಡಿಸಬಹುದೇ ಎಂಬುದನ್ನು ಅಧ್ಯಯನ ಮಾಡಬೇಕಿದ್ದು, ಅದಕ್ಕಾಗಿ ಸರ್ಕಾರದಿಂದ ಅನುದಾನ ಕೋರಿದೆ.

ಕೇಂದ್ರ ಸಚಿವರ ಬಳಿ ಅನುದಾನ ಕೋರಿದ್ದ ಡಿಕೆಶಿ
ಈ ಮೂಲಕ ನಮ್ಮ ಮೆಟ್ರೋ ನಾಲ್ಕು ದಿಕ್ಕುಗಳ ವಿಸ್ತರಣೆ ಮಾಡಲು ಚಿಂತನೆ ನಡೆಸಿದೆ. ಈ ಹಿಂದೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ರಾಮನಗರ ವರೆಗೆ ಮೆಟ್ರೋ ವಿಸ್ತರಣೆ ಕುರಿತು ಮಾತನಾಡಿದ್ದರು. ಅಲ್ಲದೇ ಅವರು ಮೆಟ್ರೋ ಅಭಿವೃದ್ಧಿ, ಮೂಲ ಸೌಕರ್ಯಗಳ, ಸುರಂಗ ಯೋಜನೆ ಕುರಿತು ಕೇಂದ್ರ ಸಚಿವ ನಿರ್ಮಲಾ ಸೀತಾರಾಮನ್ ಅವರ ಬಳಿ ಅನುದಾನ ಕೇಳಿದ್ದರು.
ಸದ್ಯ ರಾಜ್ಯ ಸರ್ಕಾರ ಅನುಮೋದಿತ 'ಸಮಗ್ರ ಚಲನಶೀಲ ಯೋಜನೆ' ಪ್ರಕಾರ ಮೆಟ್ರೋವನ್ನು ನಗರದಿಂದ ಉಪನಗರಗಳಿಗೆ ವಿಸ್ತರಣೆ ಮಾಡುವಂತಿಲ್ಲ. ಅದಾದ್ಯೂ ಈ ಪ್ರಸ್ತಾವನೆ ಜಾರಿ ಆಗಬೇಕಾದರೆ ಕೇಂದ್ರ ಸರ್ಕಾರದ ಮುಂದಿಡಬೇಕು. ಆಗ ಅಲ್ಲಿ ಈ ಯೋಜನೆಗೆ ಕೇಂದ್ರವು ನಿರಾಕರಿಸುವ ಸಾಧ್ಯತೆ ಇದೆ ಅಂತಲೂ ಹೇಳಲಾಗುತ್ತಿದೆ.
ಸದ್ಯ ಬೆಂಗಳೂರಿನಲ್ಲಿ ಹಾಲಿ ಮೆಟ್ರೋ ಮಾರ್ಗ ವಿಸ್ತರಣೆ, ಹೊಸ ಮಾರ್ಗ ನಿರ್ಮಾಣ ಸೇರಿದಂತೆ ಹೊರ ವಲಯಗಳನ್ನು ದಾಟಿ ಮೆಟ್ರೋ ವಿಸ್ತರಣೆಗೆ ಬಿಎಂಆರ್‌ಸಿಎಲ್ ಒಲವು ವ್ಯಕ್ತಪಡಿಸಿರುವುದು ಬಹಿರಂಗವಾಗಿದೆ.












Click it and Unblock the Notifications