BLR Airport: ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡ ಡಿಂಡಿಮ!
BLR Airport: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಕನ್ನಡಿಗರಿಗೆ ಇನ್ನಷ್ಟು ಆತ್ಮೀಯವಾಗಿದೆ. ಜನ ಸ್ನೇಹಿ ಹಾಗೂ ವಿಶ್ವ ಮನ್ನಣೆಯಿಂದಾಗಿ ಈಗಾಗಲೇ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಇದೀಗ ಈ ನಿಲ್ದಾಣದಲ್ಲಿ ತೆಗೆದುಕೊಂಡಿರುವ ಈ ಸುಧಾರಣೆಯಿಂದ ಕನ್ನಡಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಮಾನ ನಿಲ್ದಾಣ ಹಾಗೂ ಮಾಲ್‌ಗಳಲ್ಲಿ ತಪ್ಪು ಕನ್ನಡ ಹಾಗೂ ಕನ್ನಡವನ್ನು ತಪ್ಪಾಗಿ ಅನುವಾದ ಮಾಡುವುದರಿಂದಲೇ ಕನ್ನಡಿಗರ ಅಸಮಾಧಾನಕ್ಕೆ ಆಡಳಿತ ಮಂಡಳಿಗಳು ಗುರಿಯಾಗುತ್ತಿದ್ದವು. ಇದೀಗ ಆ ತಪ್ಪುಗಳನ್ನು ಸರಿಪಡಿಸಿಕೊಂಡು ಈ ಆಡಳಿತ ಮಂಡಳಿಗಳು ಕನ್ನಡಿಗರಿಗೆ ಆತ್ಮೀಯ ಸ್ವಾಗತವನ್ನು ನೀಡುತ್ತಿವೆ.
ಇನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ಸಹ ವಿಶೇಷ ಮನ್ನಣೆಗೆ ಪಾತ್ರವಾಗಿತ್ತು. ಈ ಟರ್ಮಿನಲ್‌ಗೆ ಯುನೆಸ್ಕೋದ ವಿಶೇಷ ವಿಶ್ವ ಮನ್ನಣೆ ಸಹ ಸಿಕ್ಕಿದೆ. ವಿಶ್ವದ ಅತ್ಯಂತ ಸುಂದರ ವಿಮಾನ ನಿಲ್ದಾಣಗಳಲ್ಲಿ ಇದು ಸಹ ಒಂದು ಎಂದು ಗುರುತಿಸಲಾಗಿತ್ತು. ಈ ನಿಲ್ದಾಣವು ಪ್ರಯಾಣಿಕ ಸ್ನೇಹಿ ಹಾಗೂ ಸರಳ ಸೌಲಭ್ಯಗಳಿಂದ ಈಗಾಗಲೇ ಲಕ್ಷಾಂತ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಇದೀಗ ಕನ್ನಡ ಭಾಷೆಯ ಮೂಲಕ ಇಲ್ಲಿನ ಆಡಳಿತ ಮಂಡಳಿ ಜನ ಮನ್ನಣೆಗೆ ಪಾತ್ರವಾಗಿದೆ.

ರಾರಾಜಿಸುತ್ತಿದೆ ಕನ್ನಡ !
ಬೆಂಗಳೂರಿನ ದೇವನಹಳ್ಳಿಯ ವಿಮಾನ ನಿಲ್ದಾಣದಲ್ಲಿ ಕನ್ನಡ ರಾರಾಜಿಸುತ್ತಿದೆ. ವಿಮಾನ ನಿಲ್ದಾಣದ ವಿಮಾನ ಪ್ರಕಟಣೆಗಳು ( Dispatcher) ಕನ್ನಡದಲ್ಲಿ ಬರೆಯಲಾಗಿದ್ದು. ಕನ್ನಡಿಗರು ಈ ಪ್ರಕಟಣೆಯನ್ನು ನೋಡಿ ಫಿಧಾ ಆಗಿದ್ದಾರೆ. ಈ ಪ್ರಕಟಣೆಯಲ್ಲಿ ಹೊಸ ಗೇಟ್, ವಿಮಾನ ವಿಳಂಬಗೊಂಡಿದೆ, ಪ್ರವೇಶದ್ವಾರ ಮುಚ್ಚಿದೆ, ಅಂತಿಮ ಕರೆ, ಸರಿಯಾದ ಸಮಯ ಹಾಗೂ ಭದ್ರತೆ ಎನ್ನುವ ಅಂಶಗಳನ್ನು ಕನ್ನಡದಲ್ಲೇ ಪ್ರದರ್ಶಿಸಲಾಗಿದೆ (ಇಂಗ್ಲಿಷ್ ಪ್ರಕಟಣೆಯೂ ಇದೆ). ಅಲ್ಲದೇ ಯಾವ ನಗರಗಳಿಗೆ ಯಾವ ವಿಮಾನ ಹೋಗಲಿದೆ ಎನ್ನುವ ವಿವರಗಳೊಂದಿಗೆ ಎಲ್ಲಾ ನಗರಗಳ ಹೆಸರುಗಳನ್ನೂ ಸಹ ಕನ್ನಡದಲ್ಲೇ ಪ್ರದರ್ಶಿಸಲಾಗಿದೆ.
ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್‌ನ ವಿನ್ಯಾಸ ಹಾಗೂ ಸರಳ ಬೋರ್ಡಿಂಗ್ ಪದ್ಧತಿಯಿಂದಲೂ ಮೆಚ್ಚುಗೆಗೆ ಪಾತ್ರವಾಗಿದೆ. ಪ್ರಕಟಣೆಯಲ್ಲಿ ಕನ್ನಡ ಭಾಷೆಯನ್ನು ಅಳವಡಿಸಿಕೊಂಡು ಸುಧಾರಣಾ ಮಾರ್ಗಗಳನ್ನು ಅನುಸರಿಸುವ ಮೂಲಕ ಕನ್ನಡಿಗರ ಮನಸ್ಸು ಗೆಲ್ಲುತ್ತಿದೆ.

ಲಾಂಛನವೂ ಕನ್ನಡಮಯ ಗೊತ್ತಾ ?
ಈ ವಿಮಾನ ನಿಲ್ದಾಣದಲ್ಲಿ ಈಚೆಗಷ್ಟೇ ನಿಲ್ದಾಣದ ಲಾಂಛನದಲ್ಲಿ ಕನ್ನಡವನ್ನು ಅಳವಡಿಸಿಕೊಳ್ಳಲಾಗಿತ್ತು. ಕೆಲವು ದಿನಗಳ ಹಿಂದೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಸಂಪೂರ್ಣ ಇಂಗ್ಲಿಷ್ ಮಯವಾಗಿತ್ತು. ಇದಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಈ ಕ್ರಮವನ್ನು ಬದಲಾಯಿಸುವಂತೆ ಸೂಚಿಸಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೂಚನೆ ನೀಡಿದ್ದರು. ವಿಮಾನ ನಿಲ್ದಾಣದ ಲಾಂಛನದಲ್ಲಿ ಕನ್ನಡ ಅಳವಡಿಸಿಕೊಳ್ಳಲು ಸೂಚಿಸಲಾಗಿತ್ತು. ಆದರೆ, ಇದೀಗ ವಿಮಾನ ನಿಲ್ದಾಣದ ಹಲವು ಭಾಗದಲ್ಲಿ ಕನ್ನಡ ಡಿಂಡಿಮದೇ ಸದ್ದು.












Click it and Unblock the Notifications