ಬ್ರೇಕಿಂಗ್ : ಬೆಂಗಳೂರಲ್ಲಿ ನಿಗೂಡ ಸ್ಫೋಟ; ವ್ಯಕ್ತಿಗೆ ಗಾಯ
ಬೆಂಗಳೂರು, ಮಾರ್ಚ್ 08 : ಬೆಂಗಳೂರು ನಗರದಲ್ಲಿ ನಿಗೂಢ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ವ್ಯಕ್ತಿಯ ಎಡಗಾಲಿಗೆ ಗಂಭೀರವಾದ ಗಾಯವಾಗಿದೆ. ಸ್ಥಳಕ್ಕೆ ಆಡುಗೋಡಿ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ.
ಭಾನುವಾರ ಮಧ್ಯಾಹ್ನ ಡೈರಿ ಸರ್ಕಲ್ ಬಳಿಯ ಗಣಪತಿ ದೇವಸ್ಥಾನದ ಬಳಿ ಈ ನಿಗೂಢ ಸ್ಫೋಟ ಸಂಭವಿಸಿದೆ. ಕಸವನ್ನು ಹಾಕಿದ್ದ ಜಾಗದಲ್ಲಿ ಸ್ಫೋಟ ನಡೆದಿದ್ದು, ಸ್ಫೋಟಕ್ಕೆ ಕಾರಣ ಏನೆಂಬುದು ನಿಗೂಢವಾಗಿದೆ.

ಕಸವನ್ನು ಆಯುತ್ತಿದ್ದ ಚಂದ್ರಪ್ಪ ಲೇಔಟ್ ನಿವಾಸಿ ನರಸಿಂಹಯ್ಯ ಎಂಬ 50 ವರ್ಷದ ವ್ಯಕ್ತಿಯ ಎಡಗಾಲಿಗೆ ತೀವ್ರವಾದ ಗಾಯವಾಗಿದೆ. ಆತನನ್ನು ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಡಿಸಿಪಿ ಶ್ರೀನಾಥ್ ಜೋಶಿ ಸ್ಫೋಟ ನಡೆದ ಸ್ಥಳಕ್ಕೆ ಭೇಟಿ ನೀಡಿ, ನಂತರ ಅವರು ಮಾತನಾಡಿದರು. ಗ್ರಾನೈಟ್ ಗೆ ಬಳಸುವ ವಿಷಪೂರಿತ ಕೆಮಿಕಲ್ ನಿಂದ ಸ್ಫೋಟ ಸಂಭವಿಸಿರಬಹುದು ಎಂದು ಶಂಕಿಸಲಾಗಿದ್ದು, ಐಪಿಸಿ ಸೆಕ್ಷನ್ 285,286,338 ಅಡಿಯಲ್ಲಿ ಆಡುಗೊಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಆಗ್ನೇಯ ವಿಭಾಗ ಡಿಸಿಪಿ ಶ್ರೀನಾಥ್ ಜೋಶಿ ತಿಳಿಸಿದರು.
ಇನ್ನು, ಸ್ಫೋಟದ ಸಂಬಂಧ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಇದೊಂದು ಸಣ್ಣ ಪ್ರಮಾಣದ ಸ್ಫೋಟ ಎಂದಿದ್ದಾರೆ. ನಿಷೇದಿತ ಕೆಮಿಕಲ್ ಲಿಕ್ವಿಡ್ ಸ್ಫೋಟಗೊಂಡಿದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.












Click it and Unblock the Notifications