ರಾಹುಲ್ ಗಾಂಧಿ ಪರವಾಗಿ ಸುಪ್ರೀಂ ತೀರ್ಪು: ಮಹಾತ್ಮ ಗಾಂಧಿ ತತ್ವ ಸಿದ್ಧಾಂತಕ್ಕೆ ಸಿಕ್ಕ ಜಯ ಎಂದ ಹರಿಪ್ರಸಾದ್
ಮೋದಿ ಉಪನಾಮದ ಬಗ್ಗೆ ರಾಹುಲ್ ಗಾಂಧಿ ಹೇಳಿಕೆ ಕುರಿತ ಪ್ರಕರಣದಲ್ಲಿ ಸೂರತ್ ನ್ಯಾಯಾಲಯ ವಿಧಿಸಿರುವ ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದ್ದು, ಇದಕ್ಕೆ ಸಂತಸ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಇದು ಮಹಾತ್ಮ ಗಾಂಧೀಜಿಯವರ ತತ್ವ ಸಿದ್ಧಾಂತಕ್ಕೆ ಸಂದ ಜಯ ಎಂದಿದ್ದಾರೆ.
ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕೋಲಾರದಲ್ಲಿ ಮಾಡಿದ ಭಾಷಣದ ಆಧಾರದ ಮೇಲೆ ಗುಜರಾತ್ ಕೋರ್ಟ್ ತೀರ್ಪು ಕೊಟ್ಟಿತ್ತು. ರಾಹುಲ್ ಗಾಂಧಿ ಅವರನ್ನು ತರಾತುರಿಯಲ್ಲಿ ಸಂಸದ ಸ್ಥಾನದಿಂದಲೂ ಕೈ ಬಿಡಲಾಗಿತ್ತು. ಎರಡು ವರ್ಷ ಜೈಲು ಶಿಕ್ಷೆ ನೀಡಿರುವುದರ ಹಿಂದೆ ದ್ವೇಷ ರಾಜಕಾರಣವಿತ್ತು. ಇದರ ವಿರುದ್ಧ ಇಂದು ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿ ತೀರ್ಪು ನೀಡಿರುವುದು ಸತ್ಯಕ್ಕೆ ಸಂದ ಜಯ ಎಂದು ಹೇಳಿದರು.

ಬಿಜೆಪಿಯವರ ಸುಳ್ಳು ಮತ್ತು ಅಸತ್ಯದ ಸಿದ್ದಾಂತಕ್ಕೆ ಸೋಲಾಗಿದೆ. ರಾಹುಲ್ ಗಾಂಧಿ ಅವರು ನಡೆಸಿದ ಭಾರತ್ ಜೋಡೋ ಯಾತ್ರೆಯ ಸಿದ್ದಾಂತ ಮತ್ತು ಸತ್ಯಕ್ಕೆ ಜಯ ಸಿಕ್ಕಿದೆ. ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿರುವುದು ಸುಳ್ಳು ತುಂಬಾ ದಿನ ಇರಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಬಿಲ್ಕಿಸ್ ಭಾನು ಪ್ರಕರಣ ಗುಜರಾತ್ ಮಾದರಿಯದ್ದು, ರಾಹುಲ್ ಗಾಂಧಿ ಅವರನ್ನ ಅನರ್ಹ ಮಾಡಿದ್ದು ಕೂಡ ಗುಜರಾತ್ ಮಾದರಿ ರಾಜಕೀಯದ ಉದಾಹರಣೆಗಳು ಎಂದು ಆರೋಪಿಸಿದರು.
ಸಂಸತ್ ಸದಸ್ಯತ್ವಕ್ಕೆ ಆಗ್ರಹ
ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ರಾಹುಲ್ ಗಾಂಧಿ ಅವರ ಸಂಸತ್ ಸದಸ್ಯತ್ವಕ್ಕಾಗಿ ಆಗ್ರಹ ಮಾಡುತ್ತೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ಪೀಕರ್ ಒಳ್ಳೆಯ ಕ್ರಮ ವಹಿಸಲಿದ್ದಾರೆ ಎಂದು ಭಾವಿಸಿದ್ದೇವೆ. ಲೋಕಸಭೆ ಸ್ಪೀಕರ್ ಯಾವ ರೀತಿ ಕ್ರಮ ತೆಗೆದುಕೊಳ್ಳಲಿದ್ದಾರೆ ಕಾದು ನೋಡುತ್ತೇವೆ ಎಂದು ಹೇಳಿದರು.
ಮಹಿಳೆಯರಿಗೆ ರಕ್ಷಣೆ ಕೊಡುವಲ್ಲಿ ಪ್ರಧಾನಿ ಮೋದಿ ವಿಫಲ ಆಗಿದ್ದಾರೆ. ಮಣಿಪುರ ಘಟನೆ ಸೇರಿದಂತೆ ಅನೇಕ ತೀರ್ಪುಗಳು ಕೇಂದ್ರದ ವಿರುದ್ಧವೇ ಬರುತ್ತಿವೆ. ನಿರ್ಭಯ ಪ್ರಕರಣದಿಂದ ಅವರು ಒಳಗೆ ಬಂದು, ಮಣಿಪುರ ಪ್ರಕರಣದಿಂದ ಎಗ್ಸಿಟ್ ಆಗಿದ್ದು ನಿಜಾ. ಇಡೀ ದೇಶದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಮಣಿಪುರವೇ ಹೊತ್ತಿ ಉರಿಯುತ್ತಿದೆ. ಪ್ರಧಾನಿಗಳು ಮಾತ್ರ ಮೌನವಾಗಿದ್ದಾರೆ. ಮನ್ ಕೀ ಬಾತ್ ಅಲ್ಲಿ ಮಾತಾಡುತ್ತಿದ್ದಾರೆ. ಇದೆಲ್ಲ ನೋಡಿದ್ರೆ ಮೌನಂ ಸಮ್ಮತಿ ಲಕ್ಷಣಂ ಅನ್ನುವಂತಿದೆ ಎಂದು ಪ್ರಧಾನಿ ಮೋದಿ ವಿರುದ್ಧ ಕಿಡಿ ಕಾರಿದರು.
ಮುಂಬರುವ ಲೋಕಸಭೆ ಚುನಾವಣಾ ಕುರಿತು ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ನೇತೃತ್ವದಲ್ಲಿ ರಾಜ್ಯ ಮುಖಂಡರ ಸಭೆ ನಡೆದಿದೆ. ಸಾಕಷ್ಟು ತಂತ್ರಗಳ ಬಗ್ಗೆ ಚರ್ಚೆ ನಡೆಸಿದ್ದೇವೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮಣಿಸುವುದೇ ನಮ್ಮಗುರಿ ಎಂದು ಹೇಳಿದರು.
ಅಸಮಾಧಾನ ಇಲ್ಲ
ಸಚಿವ ಸ್ಥಾನ ಕೊಡಲಿಲ್ಲ ಎಂದು ನನಗೆ ಅಸಮಾಧಾನ ಇಲ್ಲ. ನಾನು ಎಂದೂ ಸಚಿವ ಸ್ಥಾನ ಕೇಳಿಲ್ಲ. ನನಗೆ ಅಸಮಾಧಾನ ಇರುವುದು ವ್ಯವಸ್ಥೆ ವಿರುದ್ಧ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸ್ಥಾಪಿಸಿದ ಮೇಲ್ಮನೆಯನ್ನು ಸರಿಯಾಗಿ ನಿರ್ವಹಣೆ ಮಾಡ್ತಿಲ್ಲ. ತನ್ನದೇ ಆದ ಚರಿತ್ರೆ ಮೇಲ್ಮೈನೆ ಸಭೆಗಿದೆ ಅದು ಹಾಳಾಗಬಾರದು ಎಂದು ಕಳಕಳಿ ವ್ಯಕ್ತಪಡಿಸಿದರು.
ನಾನು ಕೆಪಿಸಿಸಿಯ ಯಾವುದೇ ಸ್ಥಾನಮಾನದ ಆಕಾಂಕ್ಷಿ ಅಲ್ಲ. ನಾನು ಅಖಿಲ ಭಾರತ ಕಾರ್ಯದರ್ಶಿಯಾಗಿ ಜವಾಬ್ದಾರಿ ನಿಭಾಯಿಸಿದಿನಿ. ಈಗ ಕೆಪಿಸಿಸಿ ಉಪಾಧ್ಯಕ್ಷ, ಕಾರ್ಯಾಧ್ಯಕ್ಷ ಸ್ಥಾನ ನನಗೆ ಬೇಡ. ಡಿ.ಕೆ ಶಿವಕುಮಾರ್ ಅಧ್ಯಕ್ಷರಾಗಿದ್ದಾರೆ. ಅವರೇ ಲೋಕಸಭೆಯವರೆಗೆ ಅಧ್ಯಕ್ಷರಾಗಿರುತ್ತಾರೆ ಎಂದು ಹೇಳಿದರು.












Click it and Unblock the Notifications