Vinay Somaiah: ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ: ಸರ್ಕಾರದ ಮೇಲೆ ವಿಜಯೇಂದ್ರ ಗಂಭೀರ ಆರೋಪ
ಬೆಂಗಳೂರು, ಏಪ್ರಿಲ್ 04: ಕೊಡಗಿನ ಮೂಲಕ ನಿವಾಸಿ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಎಂಬುವವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ನಾಗವಾರದಲ್ಲಿ ನಡೆದಿದೆ. ಮೃತರು 39 ನೇ ವಯಸ್ಸಿನಲ್ಲಿ ಜೀವ ಕಳೆದುಕೊಂಡಿದ್ದು, ನೋವಿನ ಸಂಗತಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ಜೊತೆಗೆ ರಾಜ್ಯ ಸರ್ಕಾರದ ವಿರುದ್ಧ ಅನುಮಾನ ವ್ಯಕ್ತಪಡಿಸಿದ್ದಾರೆ. ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಕೊಡಗಿನ ಸೋಮವಾರಪೇಟೆಯ ಗೋಣಿಮರೂರು ನಿವಾಸಿ ವಿನಯ್ ಸೋಮಯ್ಯ ಅವರು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಶುಕ್ರವಾರ ಬೆಳಗ್ಗೆ 4.30ಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ವರದಿ ಆಗಿದೆ. ಮೃತರು ಮಗು, ಪತ್ನಿ ಅಗಲಿದ್ದಾರೆ. ಇವರ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬಿ.ವೈ. ವಿಜಯೇಂದ್ರ ಅವರು ಪೋಸ್ಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

ವಿನಯ್ ಸೋಮಯ್ಯ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಅತ್ಯಂತ ನೋವಿನ ಸಂಗತಿ. ಆತ್ಮಹತ್ಯೆ ಹಿನ್ನೆಲೆಯಲ್ಲಿ ಕೂಲಂಕುಶವಾಗಿ ಪಾರದರ್ಶಕ ತನಿಖೆ ನಡೆದು ಸತ್ಯ ಹೊರಬರಬೇಕಿದೆ. ರಾಜಕೀಯ ಕಾರಣಗಳು ಹಾಗೂ ಒತ್ತಡಗಳ ಹಿನ್ನೆಲೆಯಲ್ಲಿ ರಾಜಕೀಯ ಪ್ರೇರಿತ ಎಫ್ಐಆರ್ ನಿಂದಾಗಿ ವಿನಯ್ ಆತ್ಮಹತ್ಯೆಗೆ ಶರಣಾಗಿರಬಹುದಾದ ಸಾಧ್ಯತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ವಿಜಯೇಂದ್ರ ಅನುಮಾನವೇನು?
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಕಾರ್ಯಕರ್ತರ ವಿರುದ್ಧ ಅನಗತ್ಯ ಕಿರುಕುಳ, ಒತ್ತಡ, ದೌರ್ಜನ್ಯಗಳು ನಡೆಯುತ್ತಿದೆ. ಈ ನಿಟ್ಟಿನಲ್ಲಿ ವಿನಯ್ ಸೋಮಯ್ಯ ಅವರ ಆತ್ಮಹತ್ಯೆಯ ಪ್ರಕರಣದ ತನಿಖೆಯು ಅತ್ಯಂತ ಪಾರದರ್ಶಕವಾಗಿ ನಡೆಯಬೇಕೆಂದು ರಾಜ್ಯ ಬಿಜೆಪಿ ಆಗ್ರಹಿಸುತ್ತದೆ ಎಂದರು. ಈ ಮೂಲಕ ಕಾಂಗ್ರೆಸ್ ಸರ್ಕಾರದ ಕಿರುಕುಳದಿಂದ ಮೃತಪಟ್ಟಿರುವ ಬಗ್ಗೆ ಅವರು ಅನುಮಾನ ಹೊರ ಹಾಕಿದ್ದಾರೆ. ಇದಕ್ಕೆ ಪ್ರಮುಖ ಕಾರಣವು ಇದೆ ಎಂದು ತಿಳಿದು ಬಂದಿದೆ.
ವಿನಯ್ ಸೋಮಯ್ಯ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಮಾನಸಿಕ ಒತ್ತಡ ಉಂಟಾಗಲು ಕಾರಣರಾದವರ ವಿರುದ್ಧ ರಾಜ್ಯ ಸರ್ಕಾರ ಈ ಕೂಡಲೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಮೃತ ಕಾರ್ಯಕರ್ತ ವಿನಯ್ ಅವರ ನಿಧನದ ನೋವಿನಲ್ಲಿರುವ ಕುಟುಂಬ ವರ್ಗದವರಿಗೆ ದುಃಖ ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ. ವಿನಯ್ ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದರು.
ಕೊಡಗಿನ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಅತ್ಯಂತ ನೋವಿನ ಸಂಗತಿ. ಆತ್ಮಹತ್ಯೆ ಹಿನ್ನೆಲೆಯಲ್ಲಿ ಕೂಲಂಕುಶವಾಗಿ ಪಾರದರ್ಶಕ ತನಿಖೆ ನಡೆದು ಸತ್ಯ ಹೊರಬರಬೇಕಿದೆ.
— Vijayendra Yediyurappa (@BYVijayendra) April 4, 2025
ರಾಜಕೀಯ ಕಾರಣಗಳು ಹಾಗೂ ಒತ್ತಡಗಳ ಹಿನ್ನೆಲೆಯಲ್ಲಿ ರಾಜಕೀಯ ಪ್ರೇರಿತ ಎಫ್ಐಆರ್ ನಿಂದಾಗಿ ವಿನಯ್ ಆತ್ಮಹತ್ಯೆಗೆ ಶರಣಾಗಿರಬಹುದಾದ ಸಾಧ್ಯತೆ… pic.twitter.com/YNDWn8Qi3R
ಎಫ್‌ಐಆರ್‌ನಿಂದ ಮನನೊಂದಿದ್ದರಾ ವಿನಯ್?
ವಿನಯ್ ಅವರು 'ಕೊಡಗಿನ ಸಮಸ್ಯೆಗಳು, ಸಲಹೆ ಸೂಚನೆಗಳು' ಹೆಸರಿನ ವಾಟ್ಸಾಪ್ ಗ್ರೂಪ್ ಅಡ್ಮಿನ್ ಆಗಿದ್ದರು. ಇದೇ ಗ್ರೂಪ್‌ನಲ್ಲಿ ಕೊಡಗು ಜಿಲ್ಲೆಯ ಕಾಂಗ್ರೆಸ್ ನಾಯಕರ ಆಕ್ಷೇಪಾರ್ಹ ಹೇಳಿಕೆ ಒಂದು ವೈರಲ್ ಆಗಿತ್ತು. ಈ ಸಂಬಂಧ ಮಡಿಕೇರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇತ್ತ ಸಾವಿಗೆ ಬೇರೆ ಏನಾದರೂ ಕಾರಣ ಇತ್ತಾ? ಯಾರಾದರೂ ಕಿರುಕುಳ ನೀಡಿದ್ದರಾ ಎಂಬುದು ಗೊತ್ತಾಗಬೇಕಿದೆ. ಈ ಕಾರಣದಿಂದ ಬಿ.ವೈ.ವಿಜಯೇಂದ್ರ ಅವರು ಸರ್ಕಾರದ ವಿರುದ್ಧ ಆಪಾದಿಸಿದ್ದಾರೆ.












Click it and Unblock the Notifications