ಯಡಿಯೂರಪ್ಪ ವಿಷಯ ನಮಗೆ ಬಿಡಿ : ರಾಜನಾಥ್ ಸಿಂಗ್
ಬೆಂಗಳೂರು, ಅ.9 : ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ವಾಪಸ್ ಕರೆತರುವ ವಿಷಯವನ್ನು ಬಿಟ್ಟು ಪಕ್ಷ ಸಂಘಟನೆ ಕಡೆ ಗಮನ ಕೊಡಿ. ಯಡಿಯೂರಪ್ಪ ವಿಚಾರದ ಬಗ್ಗೆ ನಾವು ನಿರ್ಣಯ ತೆಗೆದುಕೊಳ್ಳುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ರಾಜ್ಯ ನಾಯಕರಿಗೆ ನಿರ್ದೇಶನ ನೀಡಿದ್ದಾರೆ.
ಮಂಗಳವಾರ ಮುಂಬೈನಲ್ಲಿ ನಡೆದ ಐದು ರಾಜ್ಯಗಳ ಹಿರಿಯ ಮುಖಂಡರ ಸಭೆಯಲ್ಲಿ ಕರ್ನಾಟಕ ರಾಜ್ಯ ಘಟಕದ ಹಿರಿಯ ಮುಖಂಡರೊಂದಿಗೆ ಪ್ರತ್ಯೇಕವಾಗಿ ನಡೆಸಿದ ಸಭೆಯಲ್ಲಿ ರಾಜನಾಥ್ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.ಯಡಿಯೂರಪ್ಪ ಕುರಿತಂತೆ ಪಕ್ಷದ ನಾಯಕರು ಹೇಳಿಕೆ ನೀಡಬಾರದು ಎಂದು ಸೂಚಿಸಿದ್ದಾರೆ.
ರಾಜನಾಥ್ ಸಿಂಗ್ ಜೊತೆಗಿನ ಸಭೆಯಲ್ಲಿ ಭಾಗವಹಿಸಿದ್ದ ರಾಜ್ಯ ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ, ಅನಂತಕುಮಾರ್, ಮಾಜಿ ಸಿಎಂ ಡಿ.ವಿ.ಸದಾನಂದಗೌಡ, ಜಗದೀಶ್ ಶೆಟ್ಟರ್, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್ ಮುಂತಾದ ನಾಯಕರು ಯಡಿಯೂರಪ್ಪ ಅವರನ್ನು ವಾಪಸ್ ಕರೆತರಬೇಕು ಎಂಬ ಅಭಿಪ್ರಾಯವನ್ನು ಮಂಡಿಸಿದ್ದಾರೆ.
ಪಕ್ಷದ ನಾಯಕರು ಅಭಿಪ್ರಾಯ ಆಲಿಸಿದ ರಾಜನಾಥ್ ಸಿಂಗ್ ಹತ್ತು ದಿನದವೊಳಗೆ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ. ನೀವು ಯಡಿಯೂರಪ್ಪ ವಿಚಾರವನ್ನು ಬಿಟ್ಟು, ಲೋಕಸಭೆ ಚುನಾವಣೆಗೆಗಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಿ ಎಂದು ಹೇಳಿದ್ದಾರೆ. ಸಭೆಯ ಮುಖ್ಯಾಂಶಗಳು

10 ದಿನದಲ್ಲಿ ನಿರ್ಣಯ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಹತ್ತು ದಿನದಲ್ಲಿ ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಕರೆತರುವ ವಿಚಾರವಾಗಿ ಚರ್ಚಿಸುತ್ತೇವೆ. ಯಡಿಯೂರಪ್ಪ ಅವರನ್ನು ದೆಹಲಿಗೆ ಕರೆಸಿಕೊಂಡು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಯಡಿಯೂರಪ್ಪ ಪ್ರಭಾವಿ ನಾಯಕರು
ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಅವರು ಯಡಿಯೂರಪ್ಪ ಪ್ರಭಾವಿ ನಾಯಕರು ಎಂಬುದರಲ್ಲಿ ಅನುಮಾನವಿಲ್ಲ. ಅವರನ್ನು ವಾಪಸ್ ಕರೆತರುವ ಬಗ್ಗೆ ನಿರ್ಧಾರ ಕೈಗೊಳ್ಳುವುದನ್ನು ಹೆಚ್ಚು ವಿಳಂಬ ಮಾಡುವುದು ಬೇಡ. ಇದರಿಂದ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಹೆಚ್ಚಲಿದೆ ಎಂದು ಮನವಿ ಮಾಡಿದ್ದಾರೆ.

ಬಿಜೆಪಿ ಅವರನ್ನು ದೂರ ಮಾಡಿಲ್ಲ
ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ಯಡಿಯೂರಪ್ಪ ಅವರನ್ನು ಬಿಜೆಪಿ ದೂರ ಮಾಡಿಲ್ಲ. ಅವರೇ ಪಕ್ಷ ಬಿಟ್ಟು ಹೋಗಿದ್ದಾರೆ. ಅವರು ಪಕ್ಷಕ್ಕೆ ಮರಳಲು ನಮ್ಮ ಯಾವುದೇ ವಿರೋಧವಿಲ್ಲ ಎಂದು ರಾಷ್ಟ್ರೀಯ ನಾಯಕರಿಗೆ ಸ್ಪಷ್ಟಪಡಿಸಿದ್ದಾರೆ.

ಈಶ್ವರಪ್ಪ ಸಹ ಒಪ್ಪಿಗೆ
ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್ ಸಹ ಯಡಿಯೂರಪ್ಪ ಬಿಜೆಪಿಗೆ ಮರಳಲು ನಮ್ಮ ವಿರೋಧವಿಲ್ಲ. ರಾಷ್ಟ್ರೀಯ ನಾಯಕರು ಈ ಕುರಿತು ಶೀಘ್ರವೇ ಅಂತಿಮ ತೀರ್ಮಾನ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಹೇಳಿಕೆ ನೀಡುವಂತಿಲ್ಲ
ಬಿ.ಎಸ್.ಯಡಿಯೂರಪ್ಪ ಪಕ್ಷಕ್ಕೆ ಮರಳುವ ಕುರಿತು ಯಾವುದೇ ರಾಜ್ಯದ ನಾಯಕರು ಮಾಧ್ಯಮಗಳಿಗೆ ಹೇಳಿಕೆ ನೀಡಬಾರದು ಎಂದು ರಾಜನಾಥ್ ಸಿಂಗ್ ಸೂಚಿಸಿದ್ದಾರೆ. ಕೇಂದ್ರ ನಾಯಕರು ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. ಆದ್ದರಿಂದ ಮಾಧ್ಯಮಗಳಿಗೆ ಹೇಳಿಕೆ ನೀಡಬೇಡಿ ಎಂದು ಸೂಚಿಸಿದ್ದಾರೆ.

ಮೋದಿ ಸಮ್ಮುಖದಲ್ಲಿ ಸೇರ್ಪಡೆ
ನರೇಂದ್ರ ಮೋದಿ ನ.16ರಂದು ಕರ್ನಾಟಕಕ್ಕೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಅದರೊಳಗೆ ಈ ಕುರಿತು ಅಂತಿಮ ನಿರ್ಣಯ ತೆಗೆದುಕೊಂಡರೆ, ಮೋದಿ ಸಮ್ಮುಖದಲ್ಲಿ ಯಡಿಯೂರಪ್ಪ ಬಿಜೆಪಿಗೆ ಮರಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಹೈಕಮಾಂಡ್ ಬೆಂಗಳೂರಿಗೆ ಬರೋಲ್ಲ
ಯಡಿಯೂರಪ್ಪ ಪಕ್ಷಕ್ಕೆ ಮರಳುವ ಕುರಿತು ಸಂಸದೀಯ ಮಂಡಳಿ ಸಭೆಯಲ್ಲಿ ಚರ್ಚಿಸಲಾಗುವುದು. ನಂತರ ಅವರನ್ನು ದೆಹಲಿಗೆ ಕರೆಸಿಕೊಂಡು, ಪಕ್ಷ ಸೇರ್ಪಡೆ ಕುರಿತು ಚರ್ಚೆ ನಡೆಸಲಾಗುವುದು ಎಂದು ರಾಜನಾಥ್ ಸಿಂಗ್ ರಾಜ್ಯ ನಾಯಕರಿಗೆ ಹೇಳಿದ್ದಾರೆ. ಯಡಿಯೂರಪ್ಪ ಕುರಿತು ಚರ್ಚಿಸಲು ಯಾವುದೇ ಕೇಂದ್ರ ನಾಯಕರು ರಾಜ್ಯಕ್ಕೆ ಆಗಮಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕಾನೂನು ತಜ್ಞರ ಸಲಹೆ
ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮುನ್ನ ಕಾನೂನು ತಜ್ಞರ ಜೊತೆ ಯಡಿಯೂಪ್ಪ ಅವರ ಮೇಲಿರುವ ಪ್ರಕರಣಗಳ ಕುರಿತು ಚರ್ಚಿಸಲು ಬಿಜೆಪಿ ನಿರ್ಧರಿಸಿದೆ. ಎಲ್ಲವೂ ಅಂದುಕೊಂಡಂತೆ ಆದರೆ, ತಿಂಗಳ ಅಂತ್ಯದಲ್ಲಿ ಯಡಿಯೂರಪ್ಪ ಕುರಿತು ಬಿಜೆಪಿ ಸ್ಪಷ್ಟ ನಿಲುವು ಹೊರಹಾಕಲಿದೆ.

ಶ್ರೀರಾಮುಲು ಸಹ ಪಕ್ಷಕ್ಕೆ ಮರಳಲಿದ್ದಾರೆ
ಬಿಎಸ್ಸಾರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಬಿ.ಶ್ರೀರಾಮುಲು ಅವರನ್ನು ಬಿಜೆಪಿಗೆ ವಾಪಸ್ ಕರೆತರಲು ಒಮ್ಮತ ಮೂಡಿದೆ ಎಂದು ತಿಳಿದು ಬಂದಿದೆ. ಅವರು ಪಕ್ಷಕ್ಕೆ ಬಂದರೆ, ಬಳ್ಳಾರಿ, ರಾಯಚೂರು, ಕೊಪ್ಪಳ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿನ ಅಭ್ಯರ್ಥಿಗಳ ಆಯ್ಕೆ ಸೇರಿದಂತೆ ಲೋಕಸಭಾ ಚುನಾವಣೆಯ ಉಸ್ತುವಾರಿ ನೀಡುವ ಕುರಿತು ಚರ್ಚೆ ನಡೆಸಲಾಗಿದೆ.












Click it and Unblock the Notifications