HAL Airport: ಅತ್ತ 2ನೇ ಏರ್‌ಪೋರ್ಟ್‌ಗೆ 3 ಜಾಗ ಫೈನಲ್, ಇತ್ತ ಎಚ್‌ಎಎಲ್ ರೀಓಪನ್‌ಗೆ ತೇಜಸ್ವಿ ಮನವಿ
ಬೆಂಗಳೂರಿಗೆ ಎರಡನೇ ಏರ್‌ಪೋರ್ಟ್ (Bengaluru 2nd airport) ನಿರ್ಮಾಣ ಮಾಡುವ ಸಂಬಂಧ ಕರ್ನಾಟಕ ಕಾಂಗ್ರೆಸ್ ಸರ್ಕಾರವು ಈಗಾಗಲೇ ಮೂರು ಸ್ಥಳಗಳನ್ನು ಅಂತಿಮಗೊಳಿಸಿ, ಕೇಂದ್ರ ಸರ್ಕಾರದ ಅನುಮೋದನೆಗೆ ಕಳಿಸಿದೆ. ಮತ್ತೊಂದೆಡೆ ಬೆಂಗಳೂರಿನಲ್ಲೇ ಇರುವ ಎಚ್‌ಎಎಲ್ (HAL) ಏರ್‌ಪೋರ್ಟ್ ಅನ್ನು ಮತ್ತೆ ಆರಂಭಿಸಲು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಪಣ ತೊಟ್ಟಿದ್ದಾರೆ. ಎಚ್‌ಎಎಲ್ ವಿಮಾನ ನಿಲ್ದಾಣದ ಪುನರಾರಂಭಕ್ಕೆ ಸಂಬಂಧಿಸಿದಂತೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ.ರಾಮಮೋಹನ್ ನಾಯ್ಡು ಅವರನ್ನು ಭೇಟಿಯಾಗಿ ಮನವಿ ಪತ್ರ ನೀಡಿದ್ದಾರೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಸಂಸದ ತೇಜಸ್ವಿ ಸೂರ್ಯ, ಎಚ್‌ಎಎಲ್ ವಿಮಾನ ನಿಲ್ದಾಣದ ಪುನರಾರಂಭಕ್ಕೆ ಬೇಕಾದ ಎಲ್ಲ ಪ್ರಕ್ರಿಯೆ ಸಂಬಂಧ ಸಂಬಂಧಪಟ್ಟವರೊಂದಿಗೆ ಚರ್ಚಿಸಲು ಶೀಘ್ರವೇ ಸಭೆ ನಡೆಸುವಂತೆ ನಾನು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ.ರಾಮಮೋಹನ್ ನಾಯ್ಡು ಅವರನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಿ ವಿನಂತಿಸಿದ್ದೇನೆ. ಬೆಂಗಳೂರಿಗಾಗಿ ಎಚ್‌ಎಎಲ್ ಅನ್ನು ಮತ್ತೆ ಪುನರಾರಂಭಿಸಲು ಸಚಿವರು ಉತ್ಸುಕರಾಗಿದ್ದಾರೆ ಎಂದು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತೇಜಸ್ವಿ ಹೇಳಿದ್ದಾರೆ.

ಈ ಹಿಂದೆಯೂ ಎಚ್‌ಎಲ್‌ಎಲ್ ರೀಓಪನ್ ಬಗ್ಗೆ ಕಳಕಳಿ ವ್ಯಕ್ತಪಡಿಸಿದ್ದ ತೇಜಸ್ವಿ ಸೂರ್ಯ, ಈ ಏರ್‌ಪೋರ್ಟ್ ಪುನರಾರಂಭಿಸುವ ಕುರಿತು ಶೀಘ್ರದಲ್ಲೇ ಸಭೆ ನಡೆಸಲಾಗುವುದು. ದೆಹಲಿಯಲ್ಲಿ ನಾಗರಿಕ ವಿಮಾನಯಾನ ಸಚಿವರ ನೇತೃತ್ವದಲ್ಲಿ ನಡೆಯಲಿರುವ ಈ ಸಭೆಯಲ್ಲಿ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ), ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (ಬಿಐಎಎಲ್) ಮತ್ತು ಎಚ್‌ಎಎಲ್‌ನ ಅಧಿಕಾರಿಗಳು ಕೂಡ ಭಾಗವಹಿಸಲಿದ್ದಾರೆ ಎಂದು ಹೇಳಿದ್ದರು.
ಹೊಸ ಏರ್‌ಪೋರ್ಟ್ ಬದಲಿಗೆ ಬೆಂಗಳೂರಿನಲ್ಲೇ ಹಿಂದಿನಿಂದಲೂ ಕಾರ್ಯಾಚರಣೆ ಮಾಡಿದ್ದ ಎಚ್‌ಎಎಲ್ ಏರ್‌ಪೋರ್ಟ್ ಅನ್ನೇ ಮತ್ತೆ ಆರಂಭಿಸುವುದರಿಂದ ನಗರಕ್ಕೆ ಭಾರಿ ಅನುಕೂಲವಾಗಲಿದೆ. ಎಚ್‌ಎಎಲ್ ಏರ್‌ಪೋರ್ಟ್ ನಗರದ ಕೇಂದ್ರ ಭಾಗದಲ್ಲಿರುವುದರಿಂದ ವಾಣಿಜ್ಯ ವಿಮಾನ ನಿಲ್ದಾಣದ ಎಲ್ಲ ಸೌಲಭ್ಯಗಳಿಗೆ ಸೂಕ್ತ ಜಾಗ. ಇದರಿಂದ ಈಗಿರುವ ಬೆಂಗಳೂರು ಏರ್‌ಪೋರ್ಟ್ ಲಿಮಿಟೆಡ್‌ಗೆ ಮಾತ್ರವಲ್ಲದೆ ಎಚ್‌ಎಎಲ್‌ಗೂ ಆದಾಯ ಹರಿದು ಬರಲಿದೆ ಎಂದು ತೇಜಸ್ವಿ ಸೂರ್ಯ ವಿವರಿಸಿದ್ದರು.
ಎರಡನೇ ಏರ್‌ಪೋರ್ಟ್‌ಗೆ ಬ್ರೇಕ್ ಹಾಕುತ್ತಾ ಎಚ್‌ಎಎಲ್?
ಬೆಂಗಳೂರು ಸಮೀಪ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಲು ರಾಜ್ಯ ಸರ್ಕಾರವು ಈಗಾಗಲೇ ಮೂರು ಸ್ಥಳಗಳನ್ನು ಅಂತಿಮಗೊಳಿಸಿದೆ. ನೆಲಮಂಗಲ-ಕುಣಿಗಲ್ ರಸ್ತೆ ಬಳಿ ಒಂದು ಜಾಗ ಹಾಗೂ ಕನಕಪುರ ರಸ್ತೆಯಲ್ಲಿ ಎರಡು ಸ್ಥಳಗಳನ್ನು ಗುರುತಿಸಿ, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಅನುಮೋದನೆಗೆ ಕಳುಹಿಸಿಕೊಟ್ಟಿದೆ. ನೆಲಮಂಗಲ-ಹಾಸನ ಹೆದ್ದಾರಿ ಜಂಕ್ಷನ್‌ನಿಂದ 10 ಕಿ.ಮೀ ದೂರದಲ್ಲಿ ಒಂದು ಸ್ಥಳ ಗುರುತಿಸಿದ್ದರೆ, ಕನಕಪುರ ರಸ್ತೆ-ನೈಸ್ ರಸ್ತೆ ಜಂಕ್ಷನ್‌ನಿಂದ 10 ಕಿ.ಮೀ ದೂರದಲ್ಲಿ ಇನ್ನೆರಡು ಸ್ಥಳಗಳನ್ನು ಗುರುತಿಸಲಾಗಿದೆ. ಈ ಎರಡೂ ರಸ್ತೆಗಳು ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳ ಸಮೀಪದಲ್ಲೇ ಇವೆ. ಸದ್ಯ ಈಗಿರುವ ಮೆಟ್ರೊ ಕೊನೆಯ ನಿಲ್ದಾಣಗಳಿಗೂ ಹತ್ತಿರದಲ್ಲೇ ಇವೆ ಎಂದು ಹೇಳಿಕೊಂಡಿದೆ.
ಇದೀಗ ಬೆಂಗಳೂರಿನ ಮೊದಲ ಏರ್‌ಪೋರ್ಟ್ ಆಗಿದ್ದ ಎಚ್‌ಎಎಲ್ ಅನ್ನೇ ಮತ್ತೆ ಪುನರಾರಂಭಿಸಲು ಕೂಡ ತಯಾರಿ ನಡೆದಿದೆ. ದಟ್ಟಣೆ ಕಾರಣದಿಂದ ಎಚ್‌ಎಎಲ್ ಏರ್‌ಪೋರ್ಟ್ ಬದಲಿಗೆ ಈಗಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ದೇವನಹಳ್ಳಿ ಬಳಿ ನಿರ್ಮಿಸಲಾಗಿತ್ತು. ಈಗ ಅಲ್ಲಿನ ದಟ್ಟಣೆ ಕಡಿಮೆ ಮಾಡಲು ಬೆಂಗಳೂರಿಗೆ ಎರಡನೇ ಏರ್‌ಪೋರ್ಟ್ ನಿರ್ಮಿಸಲು ಉದ್ದೇಶಿಸಲಾಗಿದೆ. ಮತ್ತೊಂದೆಡೆ ಹೊಸ ಏರ್‌ಪೋರ್ಟ್ ಬದಲಿಗೆ ಎಚ್‌ಎಎಲ್ ಅನ್ನೇ ಬಳಸಿಕೊಳ್ಳುವುದು ಸೂಕ್ತ ಎಂಬ ಸಲಹೆ ಕೂಡ ಬಂದಿದೆ. ಈ ಎಲ್ಲವೂ ಸದ್ಯ ಕೇಂದ್ರ ಸರ್ಕಾರದ ಅಂಗಳ ತಲುಪಿದ್ದು, ಗ್ರೀನ್ ಸಿಗ್ನಲ್ ಸಿಗೋದು ಎರಡನೇ ಏರ್‌ಪೋರ್ಟ್‌ಗಾ ಅಥವಾ ಎಚ್‌ಎಎಲ್ ಏರ್‌ಪೋರ್ಟ್‌ಗಾ ಅನ್ನೋದು ಸದ್ಯದಲ್ಲೇ ಗೊತ್ತಾಗಲಿದೆ.












Click it and Unblock the Notifications