ಕಾಂಗ್ರೆಸ್ ಸರ್ಕಾರದ ವಿರುದ್ಧ ಬೀದಿಗಿಳಿದ ಬಿಜೆಪಿ
ಬೆಂಗಳೂರು, ಜು.22: ರಾಜ್ಯದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣ ಸೇರಿದಂತೆ, ಎಸ್ಸಿ, ಎಸ್ಟಿ, ಹಿಂದುಳಿದ ವರ್ಗ, ಸ್ಲಂ ವರ್ಗದ ಸಮಸ್ಯೆಗಳನ್ನು ನಿವಾರಿಸದ ಸರ್ಕಾರದ ಕ್ರಮವನ್ನು ಖಂಡಿಸಿ ಇಂದು ಬಿಜೆಪಿ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿತು.
ಪ್ರತಿಭಟನಾ ಮೆರವಣಿಗೆ ಆರಂಭಕ್ಕೂ ಮುನ್ನಾ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಬಿಜೆಪಿ ಕಾರ್ಯಕರ್ತರು ಸ್ವಾತಂತ್ರ್ಯ ಉದ್ಯಾನವನದಲ್ಲಿ ಸಮಾವೇಶಗೊಂಡಿದ್ದರು.
ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ, ಮಾಜಿ ಸಿಎಂಗಳಾದ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವರಾದ ಸಿ.ಟಿ.ರವಿ, ಆರ್. ಅಶೋಕ್, ಗೋವಿಂದ ಕಾರಜೋಳ, ಸ್ಲಂ ಮೋರ್ಚಾದ ನಾಗೇಂದ್ರ, ಎಸ್ಟಿ ಮೋರ್ಚಾದ ಎ.ನಾರಾಯಣಸ್ವಾಮಿ, ಎಸ್ಸಿ ಮೋರ್ಚಾದ ಸೋಮಲಿಂಗಪ್ಪ, ಹಿಂದುಳಿದ ವರ್ಗ ಮೋರ್ಚಾದ ಶ್ರೀನಿವಾಸ್ ಪೂಜಾರಿ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.[ಕೆಜೆ ಜಾರ್ಜ್ ಚಾರ್ಚ್ ತಗೊಳ್ಳಿ, ಇಲ್ಲ ರಾಜೀನಾಮೆ ಕೊಡಿ]
ಫ್ರೀಡಂಪಾರ್ಕ್‌ನಿಂದ ಶೇಷಾದ್ರಿ ರಸ್ತೆಯ ಮಹಾತ್ಮಗಾಂಧಿ ಪ್ರತಿಮೆವರೆಗೂ ಬಿಜೆಪಿ ಕಾರ್ಯಕರ್ತರು ಪಾದಯಾತ್ರೆ ಮೂಲಕ ಮೆರವಣಿಗೆ ನಡೆಸಿದರು. ಬಿಜೆಪಿ ನಾಯಕರು ತೆರೆದ ವಾಹನಗಳಲ್ಲಿ ಮೆರವಣಿಗೆ ತೆರಳಿದರು. ವಿಧಾನಸಭೆ ಮುತ್ತಿಗೆಗೆ ಅವಕಾಶ ನೀಡದ ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ಜೆಡಿಎಸ್ ಕಚೇರಿ ಮುಂಭಾಗದಲ್ಲಿ ತಡೆದು ಬಂಧಿಸಿದರು.
ಪ್ರತಿಭಟನೆಯ ಮತ್ತಷ್ಟು ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಗ್ಯಾಲರಿ

ರಾಜ್ಯ ಸರ್ಕಾರ ನಿದ್ದೆಯಲ್ಲಿದೆ:
ರಾಜ್ಯ ಸರ್ಕಾರ ಕುಂಭಕರ್ಣನಂತೆ ನಿದ್ದೆ ಮಾಡುತ್ತಿದೆ. ರೈತರು, ಪರಿಶಿಷ್ಟ ಜಾತಿ ಹಾಗೂ ಪಂಗಡ, ಹಿಂದುಳಿದ ವರ್ಗಗಳು ಹಾಗೂ ಕೊಳಗೇರಿ ನಿವಾಸಿಗಳ ಪಾಲಿಗೆ ಸರ್ಕಾರ ಬದುಕಿದ್ದೂ ಸತ್ತಂತಿದೆ. ಸ್ವಾತಂತ್ರ್ಯ ಬಂದ ನಂತರ ರಾಜ್ಯದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಅತ್ಯಾಚಾರ ನಡೆದಿರಲಿಲ್ಲ, ಈ ಹಿನ್ನಲೆಯಲ್ಲಿ ಇಂದು ಬಿಜೆಪಿ ರಾಜ್ಯವಾಪಿ ಪ್ರತಿಭಟನೆ ನಡೆಸುತ್ತಿದೆ"
ಬಿಎಸ್ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

ಒಳಗೂ ಹೊರಗೂ ಪ್ರತಿಭಟನೆ:
"ಅತ್ಯಾಚಾರ ನಿಯಂತ್ರಿಸುವಲ್ಲಿ ವಿಫಲವಾದ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಸದನದ ಒಳಗೂ ಪ್ರತಿಭಟನೆ ಮಾಡುತ್ತಿದೆ. ಆದರೂ ಸರ್ಕಾರ ಇನ್ನು ಎಚ್ಚರಗೊಂಡಿಲ್ಲ. ಹೀಗಾಗಿ ಹೊರಗಡೆ ಜನರನ್ನು ಸೇರಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲರಾದ ಗೃಹಮಂತ್ರಿ ಕೆ.ಜೆ. ಜಾರ್ಜ್ ಕೂಡಲೇ ರಾಜೀನಾಮೆ ನೀಡಬೇಕು"
ಆರ್.ಅಶೋಕ್, ಮಾಜಿ ಉಪಮುಖ್ಯಮಂತ್ರಿ.

ಸಾವಿರಕ್ಕೂ ಅಧಿಕ ಕಾರ್ಯಕರ್ತರು ಭಾಗಿ:
ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ್ದ ಸಾವಿರಕ್ಕೂ ಅಧಿಕ ಸಂಖ್ಯೆಯ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಸಂಚಾರ ಅಸ್ತವ್ಯಸ್ತ:
ಸಂಚಾರಿ ಪೊಲೀಸರು ಪ್ರತಿಭಟನೆ ಹಿನ್ನಲೆಯಲ್ಲಿ ಮೊದಲೇ ಬದಲಿ ವ್ಯವಸ್ಥೆ ಮಾಡಿದ್ದರಿಂದ ಸಂಚಾರದಲ್ಲಿ ಹೆಚ್ಚಿನ ಸಮಸ್ಯೆ ಆಗಿರಲಿಲ್ಲ. ಆದರೂ ಫ್ರೀಡಂಪಾರ್ಕ್‌ನಿಂದ ಗಾಂಧಿ ಪ್ರತಿಮೆವರೆಗೆ ಬಿಜೆಪಿ ರ್‍ಯಾಲಿ ನಡೆಸಿದ್ದರಿಂದ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಫ್ರೀಡಂಪಾರ್ಕ್, ಶೇಷಾದ್ರಿ ರಸ್ತೆ, ರೇಸ್‌ಕೋರ್ಸ್ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಪೊಲೀಸ್ ಭದ್ರತೆ:
ಪ್ರತಿಭಟನಾ ಮೆರವಣಿಗೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ತಡೆಯಲು ಐನೂರಕ್ಕೂ ಹೆಚ್ಚು ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿತ್ತು.












Click it and Unblock the Notifications