ಸಂತೋಷ್ ಲಾಡ್ ವಿರುದ್ಧ ಅಖಾಡಕ್ಕಿಳಿದ ಬಿಜೆಪಿ
ಬೆಂಗಳೂರು, ಸೆ.20 : ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಸಿಲುಕಿರುವ ಸಚಿವ ಸಂತೋಷ್ ಎಸ್.ಲಾಡ್ ಅವರ ವಿರುದ್ಧ ಬಿಜೆಪಿ ಸಮರ ಸಾರಿದೆ. ಸಂತೋಷ್ ಲಾಡ್ ಅವರನ್ನು ರಾಜ್ಯಪಾಲರು ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಬಿಜೆಪಿ ನಿಯೋಗ ಅವರಿಗೆ ದೂರು ನೀಡಿದೆ.
ಶುಕ್ರವಾರ ಸಂಸದ ಅನಂತ್ ಕುಮಾರ್, ಮಾಜಿ ಸಚಿವ ಆರ್.ಅಶೋಕ್, ಸುರೇಶ್ ಕುಮಾರ್, ಗೋವಿಂದ ಕಾರಜೋಳ ಮುಂತಾದವರನ್ನು ಒಳಗೊಂಡ ನಿಯೋಗ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರನ್ನು ಭೇಟಿ ಮಾಡಿ ಸಂತೋಷ್ ಲಾಡ್ ವಿರುದ್ಧ ದೂರು ನೀಡಿತು.

ವಾರ್ತಾ ಮತ್ತು ಮೂಲಭೂತ ಸೌಕರ್ಯ ಸಚಿವ ಸಂತೋಷ್ ಲಾಡ್, ಅಕ್ರಮ ಗಣಿಗಾರಿಕೆ ನಡೆಸಿರುವುದಕ್ಕೆ ಸಾಕ್ಷ್ಯಾಧಾರ ಸಂಗ್ರಹಿಸಿರುವ ಕೇಂದ್ರೀಯ ಉನ್ನತಾಧಿಕಾರ ಸಮಿತಿ(ಸಿಇಸಿ) ಸಂತೋಷ್ ಲಾಡ್ ಪಾಲುದಾರರಾಗಿರುವ ವಿ.ಎಸ್.ಲಾಡ್ ಅಂಡ್ ಕಂಪನಿಯ ಹೆಸರನ್ನು ವರದಿಯಲ್ಲಿ ಉಲ್ಲೇಖಿಸಿದೆ.
ಆದರೂ, ಅವರು ಸಚಿವರಾಗಿ ಮುಂದುವರೆಯುತ್ತಿದ್ದಾರೆ. ನೈತಿಕ ಹೊಣೆ ಹೊತ್ತು ಲಾಡ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಅಥವ ರಾಜ್ಯಪಾಲರು ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಬಿಜೆಪಿ ನಿಯೋಗ ಮನವಿ ಮಾಡಿದೆ.
ಸಿದ್ದು ವಿರುದ್ಧ ಆಕ್ರೋಶ : ಬಳ್ಳಾರಿಗೆ ಪಾದಯಾತ್ರೆ ಮಾಡಿದ ವೇಳೆ ಹಗರಣದಲ್ಲಿ ಸಿಲುಕಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಂದು ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಒತ್ತಾಯಿಸಿದ್ದರು. ಈಗ ಮುಖ್ಯಮಂತ್ರಿಯಾಗಿರುವ ಅವರು, ಗಣಿ ಅಕ್ರಮ ನಡೆಸಿದವರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಸಿದ್ದರಾಮಯ್ಯ ಅವರು ನೈತಿಕ ಹೊಣೆ ಹೊತ್ತು ಸಂತೋಷ್ ಲಾಡ್ ಅವರನ್ನು ತಕ್ಷಣ ಸಂಪುಟದಿಂದ ವಜಾಗೊಳಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಸರ್ಕಾರದ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.
ಒಂದು ಕಡೆ ಸಂತೋಷ್ ಲಾಡ್ ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿರುವ ದಾಖಲೆ ಬಿಡುಗಡೆ ಮಾಡಿರುವ ಸಮಾಜ ಪರಿವರ್ತನಾ ಸಮಿತಿ ಅಧ್ಯಕ್ಷಎಸ್.ಆರ್.ಹಿರೇಮಠ್ ಲಾಡ್ ರಾಜೀನಾಮೆಗೆ ಒಂದು ವಾರದ ಗಡುವು ನೀಡಿದ್ದಾರೆ. ಇಲ್ಲದಿದ್ದರೆ ಕಾನೂನು ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. (ಸಂತೋಷ್ ಲಾಡ್ ರಾಜೀನಾಮೆಗೆ ಹಿರೇಮಠ್ ಆಗ್ರಹ)
ಇತ್ತ ಪ್ರತಿಪಕ್ಷ ಬಿಜೆಪಿ ಸಂತೋಷ್ ಲಾಡ್ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದೆ. ಇದರಿಂದ ಸಿಎಂ ಸಿದ್ದರಾಮಯ್ಯ ಮತ್ತು ಸಂತೋಷ್ ಲಾಡ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಲಾಡ್ ವಿಚಾರದಲ್ಲಿ ಸಿದ್ದರಾಮಯ್ಯ ದಿಟ್ಟ ನಿರ್ಧಾರವೇನು? ಎಂದು ಇನ್ನೂ ತಿಳಿದು ಬಂದಿಲ್ಲ.











Click it and Unblock the Notifications