Tejasvi Surya: ಮದುವೆ ಮಂಟಪದಲ್ಲೇ ಕಣ್ಣೀರು ಹಾಕಿದ ತೇಜಸ್ವಿ ಸೂರ್ಯ ಪತ್ನಿ
ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಕೆಲವು ದಿನಗಳ ಹಿಂದೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಖ್ಯಾತ ಗಾಯಕಿ ಮತ್ತು ಚೆನ್ನೈನ ಭರತನಾಟ್ಯಂ ಕಲಾವಿದೆ ಶಿವಶ್ರೀ ಸ್ಕಂದಪ್ರಸಾದ್ ಅವರನ್ನು ವರಿಸಿದ್ದಾರೆ. ಬೆಂಗಳೂರಿನ ಖಾಸಗಿ ರೆಸಾರ್ಟ್‌ನಲ್ಲಿ ಈ ಮುದ್ದಾದ ಜೋಡಿಯ ಮದುವೆ ಶಾಸ್ತ್ರೋಕ್ತವಾಗಿ ನೆರವೇರಿತ್ತು. ಭಾನುವಾರವಷ್ಟೇ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ಆರತಕ್ಷತೆಯೂ ನಡೆಯಿತು. ಸೋಶಿಯಲ್ ಮೀಡಿಯಾದಲ್ಲಿ ಈ ಜೋಡಿಯ ಫೋಟೋಗಳು ಹರಿದಾಡುತ್ತಿದೆ. ಮತ್ತೊಂದೆಡೆ ತೇಜಸ್ವಿ ಪತ್ನಿ ಶಿವಶ್ರೀ ಅವರು ಕಣ್ಣೀರು ಕೂಡ ಹಾಕಿದ್ದಾರೆ ಈ ವಿಡಿಯೋ ಕೂಡ ವೈರಲ್ ಆಗಿದೆ.
ತೇಜಸ್ವಿ ಸೂರ್ಯ ಹಾಗೂ ಶಿವಶ್ರೀ ಜೋಡಿಗೆ ಅಭಿನಂದನೆಗಳ ಮಹಾಪೂರ ಹರಿದಿದೆ. ರಾಜಕಾರಣದಲ್ಲಿ ಗುರುತಿಸಿಕೊಂಡಿರುವ ತೇಜಸ್ವಿ ಅವರನ್ನು ಎಲ್ಲ ಪಕ್ಷದ ನಾಯಕರು ಬಂದು ಆಶೀರ್ವಾದವೂ ಮಾಡಿದ್ದಾರೆ. ಆದರೆ ಶಿವಶ್ರೀ ಅವರು ಕಣ್ಣೀರು ಹಾಕಿರುವ ವಿಡಿಯೋ ನೋಡಿ ಜನ ತುಸು ಭಾವುಕರಾಗಿದ್ದಾರೆ. ಇಷ್ಟಕ್ಕೂ ಅವರು ಕಣ್ಣೀರಾಕಿದ್ದೇಕೆ ಗೊತ್ತಾ? ಇತ್ತೀಚೆಗಷ್ಟೇ ಅವರು ಶಾಸ್ತ್ರೋಕ್ತವಾಗಿ ಮದುವೆಯಾದರು. ಎರಡೂ ಕುಟುಂಬಸ್ಥರ ಸಮ್ಮುಖದಲ್ಲಿ ಇವರ ವಿವಾಹ ನೆರವೇರಿತ್ತು. ಇದೇ ವೇಳೆ ಶಿವಶ್ರೀ ಅವರು ಗಳಗಳನೆ ಕಣ್ಣೀರು ಸುರಿಸಿದ್ದಾರೆ ಎನ್ನಲಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋ ಹೆಣ್ಣು ಒಪ್ಪಿಸೋ ಶಾಸ್ತ್ರದ್ದು ಎನ್ನಲಾಗಿದೆ. ಸಾಮಾನ್ಯವಾಗಿ ಹಿಂದೂ ಸಂಪ್ರದಾಯದಲ್ಲಿ ಮದುವೆಯಾದ ನಂತರ ವಧುವಿನ ಕುಟುಂಬಸ್ಥರು ಹೆಣ್ಣು ಒಪ್ಪಿಸೋ ಶಾಸ್ತ್ರ ಮಾಡುತ್ತಾರೆ. ಅಂದರೆ ಅಧಿಕೃತವಾಗಿ ತಮ್ಮ ಮನೆಯ ಹೆಣ್ಣುಮಗಳನ್ನು ವರನ ಮನೆಗೆ ಬೀಳ್ಕೊಡುತ್ತಾರೆ. ಈ ವೇಳೆ ಬಹುತೇಕ ಹೆಣ್ಣುಮಕ್ಕಳು ಭಾವುಕರಾಗುತ್ತಾರೆ. ಪೋಷಕರು ಕೂಡ ತಮ್ಮ ಮನೆ ಮಗಳನ್ನು ಬೇರೊಂದು ಮನೆಗೆ ಕಳಿಸಿಕೊಡುವಾಗ ಸಂಕಟ ಅನುಭವಿಸುತ್ತಾರೆ. ಇದೇ ಶಾಸ್ತ್ರವು ತೇಜಸ್ವಿ ಸೂರ್ಯ ಹಾಗೂ ಶಿವಶ್ರೀ ಅವರ ಮದುವೆಯಲ್ಲೂ ನಡೆದಿದೆ.
ವಿಡಿಯೋದಲ್ಲಿ ಪೋಷಕರು ಶಾಸ್ತ್ರೋಕ್ತವಾಗಿ ಶಿವಶ್ರೀ ಅವರನ್ನು ತೇಜಸ್ವಿ ಅವರಿಗೆ ಒಪ್ಪಿಸಿದ್ದಾರೆ. ಈ ವೇಳೆ ಶಿವಶ್ರೀ ಅವರು ಭಾವುಕರಾಗಿ ಕಣ್ಣೀರು ಸುರಿಸಿದ್ದಾರೆ. ಈ ವೇಳೆ ತೇಜಸ್ವಿ ಸೂರ್ಯ ಅವರು ತಮ್ಮ ಮುದ್ದಿನ ಮಡದಿಯನ್ನು ತೊಡೆಯ ಮೇಲೆ ಕೂರಿಸಿಕೊಂಡು ಸಮಾಧಾನ ಪಡಿಸಿದ್ದಾರೆ. ಶಿವಶ್ರೀ ಅವರ ಕಣ್ಣೀರು ಒರೆಸುತ್ತಾ, ಅವರ ಕೆನ್ನೆಗೆ ಮುತ್ತು ಕೊಟ್ಟಿದ್ದಾರೆ. ಬಳಿಕ ಶಿವಶ್ರೀ ಅವರು ಅಳು ನಿಲ್ಲಿಸಿ ನಕ್ಕಿದ್ದಾರೆ. ಅಲ್ಲಿದ್ದವರು ಈ ವಿಡಿಯೋ ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಜೋಡಿ ಎಷ್ಟು ಮುದ್ದಾಗಿದೆ? ಯಾರ ದೃಷ್ಟಿಯೂ ತಾಗದಿರಲಿ ಎಂದು ಜನ ಕಾಮೆಂಟ್ ಮಾಡಿದ್ದಾರೆ.

ಬಿ.ಟೆಕ್ ಪದವೀಧರೆಯಾಗಿರುವ ಶಿವಶ್ರೀ ಸ್ಕಂದಪ್ರಸಾದ್ ಅವರು ಚೆನ್ನೈ ಮೂಲದ ಖ್ಯಾತ ಗಾಯಕಿ ಹಾಗೂ ಭರತನಾಟ್ಯ ಕಲಾವಿದೆ. ಇವರು ಅಯೋಧ್ಯೆ ರಾಮಮಂದಿರ ಲೋಕಾರ್ಪಣೆ ಸಂದರ್ಭದಲ್ಲಿ ತಮ್ಮ ಗಾಯನದ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಂದ ಮೆಚ್ಚುಗೆ ಪಡೆದಿದ್ದರು. ಭರತನಾಟ್ಯ ಹಾಗೂ ಸಂಸ್ಕೃತದಲ್ಲಿ ಎಂ.ಎ ಪದವಿ ಪಡೆದಿರುವ ಅವರುಯ ತಮಿಳಿನಿ ಪೊನ್ನಿಸ್ ಸೆಲ್ವನ್-ಭಾಗ 2ರ ಕನ್ನಡ ಆವೃತ್ತಿಯ ಹಾಡನ್ನು ಹಾಡಿದ್ದರು. 2021ರಲ್ಲಿ ಚೆನ್ನೈನಲ್ಲಿ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ತೇಜಸ್ವಿ ಸೂರ್ಯ ಅವರು ಶಿವಶ್ರೀ ಅವರನ್ನು ಭೇಟಿಯಾಗಿದ್ದರು. ಬಳಿಕ ಎರಡೂ ಕುಟುಂಬಗಳು ಒಪ್ಪಿ ಈ ಮದುವೆ ನೆರವೇರಿತ್ತು.












Click it and Unblock the Notifications