ಕೆಎಎಸ್ ಅಭ್ಯರ್ಥಿಗಳ ಪರವಾಗಿ ಶಾಸಕ ಸುರೇಶ್ ಕುಮಾರ್ ಉಪವಾಸ ಸತ್ಯಾಗ್ರಹ
ಬೆಂಗಳೂರು, ಜುಲೈ 03: ಕೆಎಎಸ್ ಅಭ್ಯರ್ಥಿಗಳ ಪರವಾಗಿ ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಕೆಪಿಎಸ್‌ಸಿಯು ಕೆಎಎಸ್ ಅಭ್ಯರ್ಥಿಗಳ ಸಂದರ್ಶನ ದಿನಾಂಕವನ್ನು ಶೀಘ್ರವೇ ನಿಗದಿಗೊಳಿಸಬೇಕು ಎಂದು ಸುರೇಶ್ ಕುಮಾರ್ ಅವರು ಕೆಪಿಎಸ್‌ಸಿ ಕಚೇರಿ ಎದುರುಗಡೆಯೇ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಸುರೇಶ್ ಕುಮಾರ್ ಅವರು ಪ್ರತಿಭಟನೆ ಕೂತಿದ್ದ ಸ್ಥಳಕ್ಕೆ ಧಾವಿಸಿದ ಕೆಪಿಎಸ್‌ಸಿ ಅಧಿಕಾರಿಗಳು ಪ್ರತಿಭಟನೆ ಬಿಡುವಂತೆ ಸುರೇಶ್ ಕುಮಾರ್ ಅವರ ಬಳಿ ಮನವಿ ಮಾಡಿದ್ದಾರೆ. ಜುಲೈ 29 ರಿಂದ ಸಂದರ್ಶನ ನಡೆಸಲಾಗುವುದು ಎಂದು ಲಿಖಿತ ಭರವಸೆಯನ್ನು ಅವರಿಂದ ಪಡೆದ ಬಳಿಕ ಸುರೇಶ್ ಕುಮಾರ್ ಅವರು ಪ್ರತಿಭಟನೆ ಹಿಂಪಡೆದಿದ್ದಾರೆ.

ಅಧಿಕಾರಿಗಳು ನೀಡಿರುವ ಭರವಸೆಯಂತೆ 2015 ರ ಗೆಜೆಟೆಡ್ ಪ್ರೊಬೆಷನರ್ ಬ್ಯಾಚ್ ಅಭ್ಯರ್ಥಿಗಳಿಗೆ ಜುಲೈ 29 ರಿಂದ ಸಂದರ್ಶನ ನಡೆಸಲಾಗುತ್ತದೆ. ಈ ಪ್ರತಿಭಟನೆಯಲ್ಲಿ ಶಾಸಕ ಸುರೇಶ್ ಕುಮಾರ್ ಅವರ ಜೊತೆ ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಜಯೇಂದ್ರ ಅವರು ಸಹ ಇದ್ದರು.
2015 ರ ಬ್ಯಾಚ್ ನ KAS ಅಧಿಕಾರಿಗಳ ಆಯ್ಕೆಗಾಗಿ ಅಧಿಸೂಚನೆ ಹೊರಬಿದ್ದಿದ್ದು 12-05-2017 ರಂದು. ಅದರ ಪೂರ್ವಭಾವಿ ಪರೀಕ್ಷೆ( preliminary exam) ನಡೆದದ್ದು 20-08-2017 ರಂದು. ಮುಖ್ಯ ಪರೀಕ್ಷೆ ( Mains) ನಡೆದದ್ದು 2017 ರ ಡಿಸೆಂಬರ್ 16 ರಿಂದ 23 ರವರೆಗೆ. ಆದರೆ ಒಂದು ವರ್ಷ ಕಳೆದರೂ ಫಲಿತಾಂಶ ದೊರಕಿರಲಿಲ್ಲ.

ಈ ಬಗ್ಗೆ ಶಾಸಕ ಸುರೇಶ್ ಕುಮಾರ್ ಅವರು ಈ ಹಿಂದೆ ಕೆಪಿಎಸ್‌ಸಿ ಅಧ್ಯಕ್ಷರು, ಕಾರ್ಯಾಧ್ಯಕ್ಷರು ಎಲ್ಲರೊಡನೆ ಚರ್ಚಿಸಿದ್ದರು, ಕಳೆದ ವರ್ಷ ನವೆಂಬರ್ ನಲ್ಲಿ ಇದೇ ವಿಷಯದ ಬಗ್ಗೆ ರಾಜ್ಯ ಸಿಎಂ ಅವರಿಗೂ ಪತ್ರ ಬರೆದಿದ್ದರು, ಕಳೆದ ವರ್ಷ ಡಿಸೆಂಬರ್ ನಲ್ಲಿ ಪ್ರತಿಭಟನೆಯನ್ನೂ ನಡೆಸಿದ್ದರು, ಆದರೆ ಯಾವುದೂ ಫಲ ನೀಡಿರಲಿಲ್ಲ, ಈಗ ಕೆಪಿಎಸ್‌ಸಿಯು ಕಣ್ಣು ತೆರೆದಿದ್ದು ಸಂದರ್ಶನ ಮಾಡುವುದಾಗಿ ಹೇಳಿದ್ದಾರೆ.












Click it and Unblock the Notifications