ಮೈತ್ರಿ ಸರ್ಕಾರ ನುಗ್ಗೇಕಾಯಿ ಗಿಡ ಇದ್ದಂತೆ: ಆರ್ ಅಶೋಕ್ ಲೇವಡಿ
ಬೆಂಗಳೂರು, ಜೂನ್ 19: ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ನುಗ್ಗೇಕಾಯಿ ಗಿಡ ಇದ್ದಂತೆ ಎಂದು ಬಿಜೆಪಿ ಶಾಸಕ ಆರ್. ಅಶೋಕ್ ಲೇವಡಿ ಮಾಡಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಯಾವುದೇ ರೀತಿಯ ಆಪರೇಷನ್ ಕಮಲ ಮಾಡುತ್ತಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ವಿನಾಕಾರಣ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಹೀಗೆ ಬಿಜೆಪಿಯವರ ವಿರುದ್ಧ ಆರೋಪಿಸುವುದೇ ಅವರಿಗೆ ಚಟವಾಗಿಬಿಟ್ಟಿದೆ. ಈ ರೀತಿ ಸುಖಾಸುಮ್ಮನೆ ಆರೋಪ ಹೊರಿಸುವುದನ್ನು ಬಿಟ್ಟು ಬರಪರಿಹಾರದ ಬಗ್ಗೆ ಅವರು ಗಮನ ಹರಿಸಲಿ ಎಂದು ಆಗ್ರಹಿಸಿದರು.
ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಹೊಂದಾಣಿಕೆ ಇಲ್ಲದೆ ಇದ್ದರೆ ಅದಕ್ಕೆ ನಾವು ಹೊಣೆಗಾರರಲ್ಲ. ಮೈತ್ರಿ ಸರ್ಕಾರದಲ್ಲಿ ಹೊಸ ಸಚಿವರಿಗೆ ಖಾತೆ ನೀಡದೆ ಬರಿ ಕ್ಯಾತೆ ಮಾಡುತ್ತಿದ್ದಾರೆ. ಅಧಿವೇಶನದ ಕರೆದರೆ ಚರ್ಚಿಸಲು ಸಾಕಷ್ಟು ಗಂಭೀರ ಸಮಸ್ಯೆಗಳಿವೆ ಎಂದು ಹೇಳಿದರು.

ಜೆಡಿಎಸ್ ಸಹವಾಸ ಮಾಡಿರುವ ಕಾಂಗ್ರೆಸ್ ರಾಜ್ಯದಲ್ಲಿ ಧೂಳಿಪಟವಾಗಿದೆ. ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಆರಂಭವಾಗಿದ್ದು, ಪಕ್ಷ ಒಡೆದು ಮಣ್ಣುಪಾಲಾಗುವುದರಲ್ಲಿ ಅನುಮಾನವಿಲ್ಲ ಎಂದು ವ್ಯಂಗ್ಯವಾಡಿದರು.
ಸಿದ್ದರಾಮಯ್ಯ ಅವರು ಯಾವಾಗಲೂ ಪ್ರಧಾನಿ ನರೇಂದ್ರ ಮೋದಿ, ಯಡಿಯೂರಪ್ಪ ಅವರ ವಿರುದ್ಧ ಏಕವಚನದ ಪ್ರಯೋಗ ಮಾಡುತ್ತಿದ್ದರು. ಈಗ ಅವರದೇ ಪಕ್ಷದ ಶಾಸಕ ಅವರನ್ನು ಏಕವಚನದಲ್ಲಿ ಕರೆಯುವಂತಾಗಿದೆ. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಅವರ ಸ್ಥಿತಿಯೇ ಅತಂತ್ರವಾಗಿದೆ ಎಂದು ಟೀಕಿಸಿದರು.












Click it and Unblock the Notifications