ಬಿಜೆಪಿಯವರು ಯಾರು ಭಯೋತ್ಪಾದನೆಯಲ್ಲಿ ಪ್ರಾಣ ಕಳೆದುಕೊಂಡಿಲ್ಲ: ಸಿದ್ದರಾಮಯ್ಯ
ಬೆಂಗಳೂರು, ಮೇ 21: ಕಾಂಗ್ರೆಸ್‌ನವರು ಭಯೋತ್ಪಾದನೆಯನ್ನು ಬೆಂಬಲಿಸುತ್ತಾರೆ ಎಂದು ಮಾತನಾಡುವ ಬಿಜೆಪಿಯವರಲ್ಲಿ ಯಾರೂ ಭಯೋತ್ಪಾದನೆಯಲ್ಲಿ ಪ್ರಾಣ ಕಳೆದುಕೊಂಡಿಲ್ಲ. ಕಾಂಗ್ರೆಸ್ಸಿನವರು ದೇಶದಲ್ಲಿ ಭಯೋತ್ಪಾದನೆ ತೊಲಗಿಸಲು ಹೋರಾಡಿದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಮಾಜಿ ಪ್ರಧಾನಿ, ದಿವಂಗತ ರಾಜೀವ್ ಗಾಂಧಿಯವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾವಚಿತ್ರಕ್ಕೆ ರಾಜೀವ್ ಗಾಂಧಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಈ ವೇಳೆ ಬಿಜೆಪಿ ವಿರುದ್ಧ ಅವರು ಹರಿಹಾಯ್ದರು.

ಭಯೋತ್ಪಾದನೆಯಿಂದ ದೇಶಕ್ಕೆ ಅಪಾಯ. ಜನರ ನೆಮ್ಮದಿ, ಶಾಂತಿಯನ್ನು ಹಾಳು ಮಾಡುವ ಭಯೋತ್ದಾದನೆಯನ್ನು ತೊಡೆದುಹಾಕಲು ಕಾಂಗ್ರೆಸ್ ಮೊದಲಿನಿಂದಲೂ ಹೋರಾಟ ಮಾಡುತ್ತಿದೆ.
ಭಯೋತ್ದಾದನೆಗೆ ರಾಜೀವ್ ಗಾಂಧಿ ಹಾಗೂ ಇಂದಿರಾ ಗಾಂಧಿ ಬಲಿಯಾಗಿದ್ದಾರೆ. ದೇಶದ ಐಕ್ಯತೆ, ಸಾರ್ವಭೌಮತ್ವವನ್ನು ಎತ್ತಿಹಿಡಿಯುವಲ್ಲಿ ಕಾಂಗ್ರೆಸ್ ಮುಂಚೂಣಿಯಲ್ಲಿದೆ. ದೇಶಕ್ಕೆ ಸ್ವಾತಂತ್ರ್ಯ ತರಲು ಹೋರಾಡಿ, ಭಾರತೀಯರಿಗೆ ಅವರದ್ದೇ ಸರ್ಕಾರ ರೂಪಿಸಲು ಅವಕಾಶ ಮಾಡಿಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ಸ್ವಾತಂತ್ರ್ಯದ ಬೆಲೆ ಕಾಂಗ್ರೆಸ್ ಗೆ ತಿಳಿದಿದೆ ಎಂದು ಹೇಳಿದರು.
ಮೋದಿ-ನೆಹರು ಹೋಲಿಕೆ ಸಾಧ್ಯವೇ ಇಲ್ಲ
ರಾಜೀವ್ ಗಾಂಧಿಯವರು ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ತಮ್ಮದೇ ಕೊಡುಗೆ ನೀಡಿದ್ದಾರೆ. ನೆಹರು ಅವರು ಪ್ರಜಾಪ್ರಭುತ್ವದ ಬುನಾದಿ ಹಾಕಿದವರು. ಭಾರತದಂತಹ ದೊಡ್ಡ ದೇಶದಲ್ಲಿ ಪ್ರಜಾಪ್ರಭುತ್ವ ಯಶಸ್ವಿಯಾಗಲು ಜವಾಹರ್ ಲಾಲ್ ನೆಹರು ಅವರು ಹಾಕಿದ ಬುನಾದಿಯೇ ಕಾರಣ. ವಿರೋಧ ಪಕ್ಷಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕೆಂದು ಬೆಂಬಲ ಸಹಕಾರ ನೀಡಿದರು. ಈಗಿನ ಪ್ರಧಾನಿಗಳಿಗೂ ನೆಹರು ಅವರಿಗೂ ಹೋಲಿಕೆ ಮಾಡಲು ಸಾಧ್ಯವೇ ಇಲ್ಲ. ರಾಜೀವ್ ಗಾಂಧಿಯವರು ಪ್ರಜಾಪ್ರಭುತ್ವದಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು ಬಯಸಿದ್ದರು. ರಾಹುಲ್ ಗಾಂಧಿಯವರು ಅದನ್ನು ಮುಂದುವರೆಸುವ ಕೆಲಸ ಮಾಡುತ್ತಿದ್ದಾರೆ.

ಬಿಜೆಪಿ ಇದ್ದಲ್ಲಿ ಶಾಂತಿ ನೆಮ್ಮದಿ ಇಲ್ಲ
ದ್ವೇಷದ ರಾಜಕಾರಣವನ್ನು ಕೊನೆಗಾಣಿಸುವುದೇ ನಾವು ರಾಜೀವ್ ಗಾಂಧಿಯವರಿಗೆ ಸಲ್ಲಿಸುವ ನಿಜವಾದ ಗೌರವ.
ಬಿಜೆಪಿ ಇರುವವರೆಗೂ ಸಮಾಜದಲ್ಲಿ ಶಾಂತಿ, ನೆಮ್ಮದಿ ಸಾಮರಸ್ಯ ಇರುವುದಿಲ್ಲ. ಬಡವರು, ದಲಿತರು, ಹಿಂದುಳಿದವರು ದೇಶದ ಅನೇಕ ಭಾಗಗಳಲ್ಲಿ ಆತಂಕದಲ್ಲಿ ಬದುಕುತ್ತಿದ್ದಾರೆ. ಜಗತ್ತು ಮತ್ತು ದೇಶದಲ್ಲಿ ಶಾಂತಿ ನೆಲೆಸಿದ್ದರೆ ಮಾತ್ರ ಮನುಕುಲ ಉದ್ಧಾರವಾಗುತ್ತದೆ ಎಂದು ಅವರು ಗುಡುಗಿದರು.
ರಾಜ್ಯದಲ್ಲಿ ಸರ್ವ ಜನಾಂಗದ ಶಾಂತಿಯ ತೋಟವನ್ನು ನಿರ್ಮಿಸಬೇಕಿದೆ. ಇದನ್ನು ಸ್ಥಾಪಿಸಲು ಮಾಜಿ ಪ್ರಧಾನಿಗಳಾದ ಇಂದಿರಾಗಾಂಧಿ ಹಾಗೂ ರಾಜೀವ್ ಗಾಂಧಿ ಮತ್ತಿತರರು ಪ್ರಯತ್ನಿಸಿದ್ದರು. ರಾಜೀವ್ ಗಾಂಧಿಯಂತಹ ಮಹಾನ್ ನಾಯಕನೊಬ್ಬನನ್ನು ಭಯೋತ್ಪಾದನೆ ಬಲಿ ತೆಗೆದುಕೊಂಡಿದೆ. ರಾಜೀವ್ ಗಾಂಧಿಯವರು ಒಬ್ಬ ಕ್ರಿಯಾಶೀಲ ನಾಯಕರು. ಅವರು ಹಾಕಿಕೊಟ್ಟ ದಾರಿಯಲ್ಲಿ ಎಲ್ಲರೂ ನಡೆಯುವ ಪ್ರಯತ್ನ ಮಾಡೋಣ ಎಂದು ಕರೆ ನೀಡಿದರು.
ಜನರು ಸಭದ್ರ ಸರ್ಕಾರ ಬಯಸಿದ್ದರು: ನುಡಿದಂತೆ ನಡೆಯುತ್ತೇವೆ
ಚುನಾವಣೆಯ ಗೆಲುವು ಕಾಂಗ್ರೆಸ್ ಪಕ್ಷದ್ದಲ್ಲ ಇದು ಏಳು ಕೋಟಿ ಕನ್ನಡಿಗರ ಗೆಲುವು. ಜನ ಸುಭದ್ರ ಸರ್ಕಾರವನ್ನು ಬಯಸಿದ್ದಾರೆ. ಜನರ ನಿರೀಕ್ಷೆಗೆ ತಕ್ಕಂತೆ ಆಡಳಿತ ನಡೆಸುವುದೇ ನಮ್ಮ ಮುಂದಿರುವ ಸವಾಲು. ಮುಂದಿನ ಅಧಿವೇಶನದಲ್ಲಿ ನಮ್ಮ ಐದೂ ಗ್ಯಾರಂಟಿಗಳನ್ನು ಮತ್ತೊಮ್ಮೆ ಸ್ಥಿರೀಕರಿಸಿ ಆದೇಶ ಹೊರಡಿಸಿ ಅಂದಿನಿಂದಲೇ ಜಾರಿಗೆ ತರುತ್ತೇವೆ.
ಮಾಹಿತಿ ಸಂಗ್ರಹಣೆ ಮುಗಿದ ಕೂಡಲೇ ಅನುಮೋದನೆ ನೀಡಿ, ಆದೇಶ ಹೊರಡಿಸಲಾಗುವುದು. ನಮ್ಮ ಪ್ರಣಾಳಿಕೆಯಲ್ಲಿ ಹೇಳಿರುವ ಅನೇಕ ವಿಚಾರಗಳನ್ನೂ ಜಾರಿಗೆ ತರಲಾಗುವುದು. ಭರವಸೆಗಳನ್ನು ಚಾಚೂ ತಪ್ಪದೆ ಈಡೇರಿಸಿ, ನುಡಿದಂತೆ ನಡೆಯುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಕಾಂಗ್ರೆಸ್ ಪಕ್ಷ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿ, ದಲಿತರಿಗೆ, ಹಿಂದುಳಿದವರಿಗೆ ಮೀಸಲಾತಿ ಕಲ್ಪಿಸಿದೆ. ಜನತಂತ್ರದ ವಿಕೇಂದ್ರೀಕರಣ ಜಾರಿಗೆ ತಂದಿದ್ದು ರಾಜೀವ್ ಗಾಂಧಿಯವರು. ಸಂಸತ್ತಿನಲ್ಲಿ ಮಹಿಳೆಯರಿಗೆ ಶೇಕಡಾ 33 ರಷ್ಟು ಮೀಸಲಾತಿ ನೀಡುವ ಮಸೂದೆ ಇದೆ. ಶೇಕಡಾ 50ಕ್ಕೆ ಏರಿಸಿದರೆ ನಮ್ಮ ತಕರಾರಿಲ್ಲ. ನಿಜವಾದ ಅರ್ಥದಲ್ಲಿ ಸಮಪಾಲು - ಸಮಬಾಳು ದೊರೆಯಬೇಕು. ದೇಶದಲ್ಲಿ ಜ್ಯಾತ್ಯಾತೀತ ವ್ಯವಸ್ಥೆ ಉಳಿದು ಬೆಳೆಯಲು ಕಾಂಗ್ರೆಸ್ ಪಕ್ಷ ಕಾರಣ. ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ರಾಜೀವ್ ಗಾಂಧೀಯವರು ಕೊಡುಗೆ ಅಪಾರ ಎಂದು ತಿಳಿಸಿದರು.












Click it and Unblock the Notifications