ಡಿನೋಟಿಫೈ ಪ್ರಕರಣ: ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲು
ಬೆಂಗಳೂರು, ಅಕ್ಟೋಬರ್ 12: ಸರ್ಕಾರಿ ಸ್ವತ್ತನ್ನು ಡಿನೋಟಿಫಿಕೇಷನ್ ಮಾಡಿ ಪ್ರಭಾವಿ ಬಿಲ್ಡರ್‌ಗಳಿಗೆ ಅನುಕೂಲ ಮಾಡಿಕೊಡಲು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ.
ತಮ್ಮ ಅವಧಿಯಲ್ಲಿ ಸಿದ್ದರಾಮಯ್ಯ ಅವರು ಅಧಿಕಾರ ದುರಪಯೋಗ ಮಾಡಿಕೊಂಡಿದ್ದಾರೆ. ಅವರಿಗೆ ಅಂದು ಬಿಡಿಎ ಅಧ್ಯಕ್ಷರಾಗಿದ್ದ ಶ್ಯಾಂ ಭಟ್ ಅವರ ಸಹಕಾರವಿದೆ ಎಂದು ಆರೋಪಿಸಿ ಬುಧವಾರ ಬೆಂಗಳೂರು ದಕ್ಷಿಣ ವಿಭಾಗದ ಬಿಜೆಪಿ ಮುಖಂಡ ಎನ್.ಆರ್ ರಮೇಶ್ ಅವರು ಲೊಕಾಯುಕ್ತದಲ್ಲಿ ದೂರು ದಾಖಲಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ವಿವರಿಸಿದ ಎನ್.ಆರ್.ರಮೇಶ್ ಅವರು, ಸಿದ್ದರಾಮಯ್ಯ ಅವರು ತಾವು ಅಧಿಕಾರದಲ್ಲಿದ್ದಾಗ ಕಾನೂನನ್ನು ಉಲ್ಲಂಘಿಸಿದ್ದಾರೆ. 200 ಕೋಟಿ ರೂ. ಮೌಲ್ಯದ ಸರ್ಕಾರಿ ಸ್ವತ್ತನ್ನು ಡಿನೊಟಿಫೈ ಮಾಡುವ ಮೂಲಕ ಪ್ರಭಾವಿ ಬಿಲ್ಡರ್‌ಗಳಿಗೆ ನೆರವಾಗಿದ್ದಾರೆ ಎಂದು ಅವರು ಆಪಾದಿಸಿದರು.
ಬೆಂಗಳೂರು ದಕ್ಷಿಣ ತಾಲೂಕು ಲಾಲ್‌ಬಾಗ್ ಸಿದ್ಧಾಪುರ (ಜಯುನಗರ ಒಂದನೇ ಬ್ಲಾಕ್) ಗ್ರಾಮದ ಸರ್ವೇ ನಂಬರ್ 27/1, 28/4, 28/5 ಮತ್ತು 28/6ರ 2 ಎಕರೆ 39.5 ಗುಂಟೆ ಜಮೀನು ದುರುಪಯೋಗವಾಗಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಉದ್ಯಾನವನ ಹಾಗೂ ಇನ್ನಿತರ ಸಾರ್ವಜನಿಕ ಬಳಕೆಗೆ ಮೀಸಲಿಟ್ಟ ಜಾಗವನ್ನು ಡಿನೋಟಿಫಿಕೇಷನ್ ಮಾಡಲಾಗಿದೆ ಎಂದರು.

ಸಾರ್ವಜನಿಕ ಬಳಕೆಗೆ ಜಾಗ ಮೀಸಲು
ಸರ್ಕಾರಿ ನಿಯಮಗಳ ಪ್ರಕಾರ ಈ ಜಾಗದಲ್ಲಿ ಯಾವುದೇ ನಿರ್ಮಾಣದ ಕೆಲಸಗಳು ಆಗಬಾರದು ಎಂಬುದಿದೆ. ನಿರ್ಮಿಸಿದರೆ ಅದು ಕಾನೂನಿಗೆ ವಿರುದ್ಧವಾಗುತ್ತದೆ. ಈ ಸರ್ವೇ ನಂಬರ್ ಜಾಗದ ಪಕ್ಕದ ನಿಗದಿತ ಜಾಗದಲ್ಲಿ ಹಲವು ನರ್ಸರಿಗಳು ಕಾರ್ಯ ನಿರ್ವಹಿಸುತ್ತಿವೆ. ಸದರಿ ಸರ್ಕಾರಿ ಸ್ವತ್ತುಗಳನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿದ್ದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಈ ಜಾಗದ ಅಕ್ಕಪಕ್ಕದ ಜಾಗವನ್ನು ಸ್ವಾಧೀನಪಡಿಸಿಕೊಂಡು ಉದ್ಯಾನ-ಸಾರ್ವಜನಿಕ ಬಳಕೆಗೆಂದು ಮೀಸಲಿಟ್ಟಿತ್ತು ಎಂದು ಅವರು ವಿವರಿಸಿದರು.

ಮೀಸಲು ಜಾಗದಲ್ಲಿ ವಸತಿ ಸಂಕೀರ್ಣ
ಹಗರಣದಲ್ಲಿ ಪ್ರಸ್ತಾಪಿಸಿದ ಜಾಗ ಹಾಗೂ ಅಕ್ಕಪಕ್ಕ ನರ್ಸರಿಗಳನ್ನು ಖಾಸಗಿ ಬಿಲ್ಡರ್ ಅಶೋಕ್ ಧಾರಿವಾಲ್ ಅವರು ಕ್ರಯಕ್ಕೆ ಪಡೆದಿದ್ದಾರೆ. ಈ ಪ್ರದೇಶದಲ್ಲಿ ವಸತಿ ಸಂಕೀರ್ಣ ನಿರ್ಮಿಸುವ ಮೂಲಕ ಬಳಕೆಗೆ ಪರಿವರ್ತಿಸಿಕೊಳ್ಳುವ ಉದ್ದೇಶದಿಂದ ಅಶೋಕ್ ಅವರು ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು 2013 ಕ್ಕೂ ಮೊದಲು ಎರಡು ಬಾರಿ ರಾಜ್ಯ ಸರ್ಕಾರ ತಿರಸ್ಕಾರ ಮಾಡಿತ್ತು.
ಪುನಃ ಅಶೋಕ್ ಧಾರಿವಾಲ್ ಅವರು 2014 ರಲ್ಲಿಅರ್ಜಿ ಸಲ್ಲಿಸುತ್ತಿದ್ದಂತೆ ಆಗಿದ್ದ ಕಾಂಗ್ರೆಸ್ ಸರ್ಕಾರ ಅನುಮೋದನೆ ಕೊಟ್ಟಿದೆ. ಈ ಮೂಲಕ ಬಿಡಿಎ ಉದ್ಯಾನ, ಸಾರ್ವಜನಿಕ ಬಳಕೆಗೆ ಮೀಸಲಿಟ್ಟ ಜಾಗವನ್ನು ಅಭಿವೃದ್ಧಿ ಮಾಡುವಂತಿಲ್ಲ ಹಾಗೂ ಚೇಂಜ್ ಆಫ್ ಲ್ಯಾಂಡ್ ಯೂಸ್ ಗೆ ಅವಕಾಶ ನೀಡಬಾರದು ಎಂದು ಹೈಕೋರ್ಟ್ ಆದೇಶ ಸಹ ನೀಡಿದೆ. ಈ ಆದೇಶದ ಉಲ್ಲಂಘನೆಯು ಆಗಿದೆ ಎಂದು ಹೇಳಿದರು.

ಬಿಎಂಪಿಸಿ ಒಪ್ಪಿಗೆ ಪಡೆಯದೇ ಡಿನೋಟಿಫೈ
ಡಿನೋಟಿಫೈ ಮಾಡುವಾಗ ಮೊದಲು ಬೆಂಗಳೂರು ಮಹಾನಗರ ಯೋಜನಾ ಸಮಿತಿ (ಬಿಎಂಪಿಸಿ) ಒಪ್ಪಿಗೆ ಅಗತ್ಯವಿರುತ್ತದೆ. ಆದರೆ 2014ರಲ್ಲಿ ಅಧಿಕಾರದಲ್ಲಿದ್ದ ಈಗಿನ ಕಾಂಗ್ರೆಸ್ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಅಂದು ಬಿಎಂಪಿಸಿ ಒಪ್ಪಿಗೆ ಪಡೆಯದೆ ಡಿನೊಟಿಫೈ ಮಾಡಿದ್ದಾರೆ ಎಂದು ಅವರು ಲೋಕಾಯುಕ್ತಕ್ಕೆ ಸಲ್ಲಿಸಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಮುಖ್ಯವಾಗಿ ಡಿ ನೋಟಿಫೈ ಎಂದು ಬಳಸುವ ಬದಲಾಗಿ ರಿಡೋ ಎಂಬ ಪದ ಬಳಸಿ ಈ ಕಾನೂನುಬಾಹಿರ ಕಾರ್ಯ ಮಾಡಿದ್ದಾರೆ ಎಂದು ಎನ್.ಆರ್.ರಮೇಶ್ ಆರೋಪಿಸಿದ್ದಾರೆ.

ಪ್ರಕರಣವನ್ನು ಸಿಐಡಿಗೆ ವಹಿಸಲು ಆಗ್ರಹ
ಈ ರೀತಿ ಕಾನೂನುಗಳನ್ನು ಉಲ್ಲಂಘನೆ ಮಾಡಿ ಕೋಟ್ಯಂತರ ರೂ. ಮೌಲ್ಯದ ಸರ್ಕಾರಿ ಸ್ವತ್ತನ್ನು ಡಿನೋಟಿಫಿಕೇಷನ್ ಮಾಡಲು ಸಹಕರಿಸಿದ್ದ ಅಂದಿನ ಬಿಡಿಎ ಆಯುಕ್ತ ಶ್ಯಾಂ ಭಟ್ ಹೆಸರನ್ನು ದೂರಿನಲ್ಲಿ ಉಲ್ಲೇಖಿಸಿ ಅವರ ವಿರುದ್ಧವೂ ದೂರು ನೀಡಲಾಗಿದೆ. ಈ ಪ್ರಕರಣವನ್ನು ಕೂಡಲೇ ಸಿಐಡಿ ತನಿಖೆಗೆ ವಹಿಸುವಂತೆ ರಮೇಶ್ ಅವರು ಒತ್ತಾಯಿಸಿದ್ದಾರೆ.
ಬೆಂಗಳೂರು ಮಹಾನಗರದಲ್ಲಿ ಅತ್ಯಂತ ವೈಜ್ಞಾನಿಕವಾಗಿ ನಿರ್ಮಿಸಲಾಗಿರುವ ಮೊದಲ ಬಡಾವಣೆ ಅಂತಲೇ ಕರೆಯುವ ಜಯನಗರ ಬಡಾವಣೆಯನ್ನು 1954ರಲ್ಲಿ ರಚಿಸಲಾಗಿದೆ. ಅಂದಿನಿಂದಲೇ ಈ ಜಾಗವನ್ನು ಉದ್ಯಾನವನ ಮತ್ತು ಸಾರ್ವಜನಿಕ ಬಳಕೆಗೆಂದು ಮೀಸಲಿಡಲಾಗಿದೆ. ಅಂದಿನಿಂದ 2014ರವರೆಗೂ ಹಾಗೆಯೆ ಇದ್ದ ಜಾಗವನ್ನು ನಿಯಮ ಉಲ್ಲಂಘಿಸಿ ಸಿದ್ದರಾಮಯ್ಯ ಅವರು ರಿಡೋ ಹೆಸರಿನಲ್ಲಿ ಸರ್ಕಾರಿ ಸ್ವತ್ತಿಗೆ ಚೇಂಜ್ ಆಫ್ ಲ್ಯಾಂಡ್ ಯೂಸ್ ಎಂಬ ಆದೇಶವನ್ನು ತಮ್ಮ ಸರ್ಕಾರದಿಂದಲೇ ದೊರಕಿಸಿಕೊಟ್ಟಿದ್ದಾರೆ ಎಂದು ಅವರು ಹೇಳಿದರು.












Click it and Unblock the Notifications