ಎಎನ್ಎಫ್ ಮೇಲಿನ ಎಫ್ಐಆರ್ ಹಿಂಪಡೆಯಿರಿ
ಬೆಂಗಳೂರು, ಏ. 25 : ಶೃಂಗೇರಿ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎನ್ಎಫ್ ಸಿಬ್ಬಂದಿ ವಿರುದ್ಧ ದಾಖಲಿಸಿರುವ ಎಫ್ಐಆರ್ ಅನ್ನು ಸರ್ಕಾರ ಹಿಂಪಡೆಯಬೇಕು ಎಂದು ಮಾಜಿ ಸಚಿವ ಸಿಟಿ ರವಿ ಆಗ್ರಹಿಸಿದ್ದಾರೆ. ಎಎನ್ಎಫ್ ಗುಂಡಿಗೆ ಬಲಿಯಾದ ಕಬೀರ್ ಅಮಾಯನಕಲ್ಲ ಎಂದು ರವಿ ಹೇಳಿದ್ದಾರೆ.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಿಟಿ ರವಿ, ಸರ್ಕಾರ ಸಚಿವರಾದ ರಮಾನಾಥ ರೈ, ಯುಟಿ ಖಾದರ್ ಮುಂತಾದವರ ಒತ್ತಡಕ್ಕೆ ಮಣಿದು ಎಎನ್ಎಫ್ [Anti-Naxal Force] ಪೇದೆ ನವೀನ್ ನಾಯಕ್ ಮೇಲೆ ಕೊಲೆ ಯತ್ನದ ಮೊಕದ್ದಮೆಯನ್ನು ದಾಖಲಿಸಿದೆ ಎಂದು ದೂರಿದರು. [ಎಎನ್ಎಫ್ ಸಿಬ್ಬಂದಿ ವಿರುದ್ಧ ಎಫ್ಐಆರ್]

ಶೂಟೌಟ್ ನಲ್ಲಿ ಮೃತಪಟ್ಟ ಕಬೀರ್ ಹಲವಾರು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದ. ಮೂಡಬಿದರೆ, ಸುರತ್ಕಲ್ ಮುಂತಾದ ಕಡೆ ಜಾನುವಾರುಗಳನ್ನು ಅಕ್ರಮವಾಗಿ ಕಳ್ಳಸಾಗಣೆ ಮಾಡಿದ ಆರೋಪವನ್ನು ಹೊತ್ತಿದ್ದ. ಅವರು ಸತ್ಯವಂತನಾದರೆ ಚೆಕ್ ಪೋಸ್ಟ್ ಬಳಿ ಹೆದರಿ ಓಡಿದ್ದು ಏಕೆ ಎಂದು ಸಿಟಿ ರವಿ ಪ್ರಶ್ನಿಸಿದರು.
BJP demands immediate withdrawal of cases filed against ANF cop by Congress led Government who shot a known criminal Kabir: @CTRavi_BJP
— BJP Karnataka (@bjpkarnataka) April 25, 2014 ಮುಳಬಾಗಿಲಿನಲ್ಲಿ ಕುರಾನ್ ಹರಿದ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಕಲ್ಲಿನಿಂದ ಹೊಡೆದು ಸಾಯಿಸಲಾಯಿತು. ಆಗ ಕರುಣೆ ತೋರದ ಬುದ್ಧಿಜೀವಿಗಳು ಚಿಕ್ಕಮಗಳೂರು ಪ್ರಕರಣದಲ್ಲಿ ಕರುಣೆ ತೋರಿಸುತ್ತಿರುವುದೇಕೆ, ಕೋಮು ಸೌರ್ಹದ ವೇದಿಕೆ ನಾಯಕರು ಶೂಟೌಟ್ ಬಗ್ಗೆ ಮಾತ್ರ ಏಕೆ ಮಾತನಾಡುತ್ತಿದ್ದಾರೆ ಎಂದರು.
ನಕ್ಸಲ್ ನಿಗ್ರಹ ಪಡೆಯ ಪೇದೆಯ ಮೇಲೆ ಎಫ್ಐಆರ್ ಹಾಕುವ ಮೂಲಕ ಅವರ ನೈತಿಕ ಸ್ಥೈರ್ಯವನ್ನು ಕುಗ್ಗಿಸುವ ಕೆಲಸವನ್ನು ಸರ್ಕಾರ ಮಾಡಿದೆ. ಇದರಿಂದ ಜಿಲ್ಲೆಯಲ್ಲಿ ನಕ್ಸಲ್ ಚಟುವಟಿಕೆ ಹೆಚ್ಚಾದರೆ, ಅದಕ್ಕೆ ಸರ್ಕಾರವೇ ಹೊಣೆ ಎಂದು ಸಿಟಿ ರವಿ ಹೇಳಿದರು.
ಕಳೆದ ಶನಿವಾರ ಶೃಂಗೇರಿಯ ತನಿಕೋಡು ಚೆಕ್ ಪೋಸ್ಟ್ ಬಳಿ ದನಗಳನ್ನು ತುಂಬಿಸಿಕೊಂಡು ಬರುತ್ತಿದ್ದ ಲಾರಿ ಚಾಲಕ ಕಬೀರ್ ಮೇಲೆ ನಕ್ಸಲ್ ನಿಗ್ರಹ ಪಡೆಯವರು ಗುಂಡಿನ ದಾಳಿ ನಡೆಸಿದ್ದರು, ಇದರಿಂದ ಕಬೀರ್ ಸ್ಥಳದಲ್ಲಿಯೇ ಮೃತಪಟ್ಟಿದ್ದ. ಪ್ರಕರಣವನ್ನು ಸರ್ಕಾರ ಸಿಐಡಿ ತನಿಖೆಗೆ ವಹಿಸಿದ್ದು, ಸದ್ಯ ಪೊಲೀಸರು ಎಎನ್ಎಫ್ ಪೇದೆ ನವೀನ್ ನಾಯಕ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.












Click it and Unblock the Notifications