ಬೆಂಗಳೂರು-ಮೈಸೂರು ಸೂಪರ್ ಫಾಸ್ಟ್ ರೈಲುಗಳ ದರ ಇಳಿಕೆ
ಬೆಂಗಳೂರು, ಆಗಸ್ಟ್ 31 : ಬೆಂಗಳೂರು ಮತ್ತು ಮೈಸೂರು ನಡುವೆ ಪ್ರತಿದಿನ ಸಂಚಾರ ನಡೆಸುವ ಜನರಿಗೆ ಸಿಹಿ ಸುದ್ದಿ. ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲುಗಳ ಟಿಕೆಟ್ ದರವನ್ನು ನೈಋತ್ಯ ರೈಲ್ವೆ ಕಡಿತಗೊಳಿಸಿದೆ.
ಶುಕ್ರವಾರದಿಂದ ಜಾರಿಗೆ ಬರುವಂತೆ ಸೂಪರ್ ಫಾಸ್ಟ್ ರೈಲುಗಳ ಪ್ರಯಾಣ ದರ ಕಡಿತಗೊಳಿಸಲಾಗಿದೆ. ಇದರಿಂದಾಗಿ ಸೀಜನ್ ಟಿಕೆಟ್ ಪಡೆದು ಪ್ರತಿನಿತ್ಯ ಸಂಚಾರ ನಡೆಸುವ ಜನರಿಗೆ 15 ರೂ. ಹೆಚ್ಚುವರಿ ಪಾವತಿ ಮಾಡುವುದು ತಪ್ಪಲಿದೆ.
ಆಗಸ್ಟ್ 15ರಿಂದ ಅನ್ವಯವಾಗುವಂತೆ ನೈಋತ್ಯ ರೈಲ್ವೆ 8 ರೈಲುಗಳನ್ನು ಸೂಪರ್ ಫಾಸ್ಟ್ ರೈಲುಗಳಾಗಿ ಪರಿವರ್ತನೆ ಮಾಡಿತ್ತು. ಇದರಿಂದಾಗಿ 60 ರೂ. ಇದ್ದ ದರ 75 ರೂ. ಆಗಿತ್ತು. ಸೀಜನ್ ಟಿಕೆಟ್ ಪಡೆದವರು ಹೆಚ್ಚುವರಿಯಾಗಿ 15 ರೂ. ಪಾವತಿ ಮಾಡಬೇಕಿತ್ತು.

ಇದರಿಂದಾಗಿ ರೈಲ್ವೆ ವಿರುದ್ಧ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಆದ್ದರಿಂದ, ನೈಋತ್ಯ ರೈಲ್ವೆ ದರವನ್ನು ಕಡಿತಗೊಳಿಸಿದೆ. ಸೀಜನ್ ಟಿಕೆಟ್ ಪಡೆದು ಪ್ರತಿದಿನ ಸುಮಾರು 15 ಸಾವಿರ ಜನರು ಮೈಸೂರು, ರಾಮನಗರ, ಚನ್ನಪಟ್ಟಣದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸುತ್ತಾರೆ.
ಮೈಲದುತ್ತರೈ-ಮೈಸೂರು, ಮೈಸೂರು-ಯಶವಂತಪುರ, ಬೆಂಗಳೂರು-ಕಣ್ಣೂರು-ಕಾರವಾರ, ಮೈಸೂರು-ಸಾಯಿನಗರ ಶಿರಡಿ ರೈಲುಗಳನ್ನು ಸೂಪರ್ ಫಾಸ್ಟ್ ರೈಲುಗಳಾಗಿ ಪರಿವರ್ತನೆ ಮಾಡಲಾಗಿತ್ತು. ಆದ್ದರಿಂದ, ದರ ಹೆಚ್ಚಾಗಿತ್ತು.
ಬೆಂಗಳೂರು-ಮೈಸೂರು ನಡುವೆ ಸಂಚಾರ ನಡೆಸುವ ಜನರ ಬಹುದಿನದ ಬೇಡಿಕೆಯಂತೆ ರೈಲುಗಳನ್ನು ಸೂಪರ್ ಫಾಸ್ಟ್‌ಗಳಾಗಿ ಬದಲಾವಣೆ ಮಾಡಲಾಗಿತ್ತು.












Click it and Unblock the Notifications