ಬೆಂಗಳೂರು, ಕೊಪ್ಪಳ, ಗದಗ, ಧಾರವಾಡದಲ್ಲಿ ಭಗೀರಥ ಜಯಂತಿ
ನಿನ್ನೆ (ಮೇ 02) ಭಗೀರಥ ಜಯಂತಿಯನ್ನು ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು.
ಬೆಂಗಳೂರು, ಮೇ 03: ಛಲಬಿಡದ ಪ್ರಯತ್ನಕ್ಕೆ ಹೆಸರಾದ ಭಗೀರಥ, ತನ್ನ ಪೂರ್ವಜರ ಆತ್ಮಕ್ಕೆ ಶಾಂತಿ ದಯಪಾಲಿಸುವುದಕ್ಕಾಗಿ ದೇವಗಂಗೆಯನ್ನೇ ಭೂಮಿಗೆ ತರಿಸಿದವ. ಈ ಭಗೀರಥನ ಜಯಂತಿಯನ್ನು ನಿನ್ನೆ ರಾಜ್ಯದಾದ್ಯಂತ ಹಲವು ಜಿಲ್ಲೆಗಳಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ಈಗಾಗಲೇ ರಾಜ್ಯ ಬರದಿಂದ ತತ್ತರಿಸುತ್ತಿರುವಾಗ ಭಗೀರಥ ನೆನಪಾಗುತ್ತಾನೆ. ಗಂಗೆಯ ರಭಸದಿಂದ ಭೂಮಿಯನ್ನು ರಕ್ಷಿಸುವುದಕ್ಕಾಗಿ ಶಿವನನ್ನು ಪ್ರಾರ್ಥಿಸಿ, ಆತನನ್ನೂ ಒಲಿಸಿಕೊಂಡ ಭಗೀರಥನಿಂದಲೇ ಭೂಲೋಕದಲ್ಲಿಂದು ಪಾವನ ಗಂಗೆ ಹರಿಯುತ್ತಿದ್ದಾಳೆ, ಪಾಪ ನಾಶಿನಿಯಾಗಿ ಸಕಲ ಜೀವ ಜಂತುಗಳ ಕೊಳೆ ತೊಳೆದು ಪವಿತ್ರರನ್ನಾಗಿಸುತ್ತಿದ್ದಾಳೆ ಎಂಬ ನಂಬಿಕೆ ಭಾರತೀಯರಲ್ಲಿದೆ.[ಸಾಂಸ್ಕೃತಿಕ ನಗರಿಯಲ್ಲಿ ಅದ್ಧೂರಿ ಭಗೀರಥ ಜಯಂತಿ ಆಚರಣೆ]
ಇವೆಲ್ಲ ಪುರಾಣ ಕತೆಗಳೇ ಆಗಿದ್ದರೂ, ಛಲ ಬಿಡದ ಪ್ರಯತ್ನಕ್ಕೆ ಅನ್ವರ್ಥವಾಗಿ ಭಗೀರಥನ ನೆನಪು ಸದಾ ಹಸಿರಾಗಿರುತ್ತದೆ, ಸ್ಫೂರ್ತಿಯಾಗಿರುತ್ತದೆ. ಈ ಕಾರಣದಿಂದಲೇ ನಿನ್ನೆ (ಮೇ 02) ಭಗೀರಥ ಜಯಂತಿಯನ್ನು ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಲ್ಲಿ ಆಚರಿಸಲಾಯಿತು. ಜೀವಜಲವನ್ನು ಉಳಿಸುವ, ಸಂರಕ್ಷಿಸುವ ನಿಟ್ಟಿನಲ್ಲಿ ನಮ್ಮದೂ ಭಗೀರಥ ಪ್ರಯತ್ನವಾಗಿರಲಿ ಎಂಬ ಆಶಯದೊಂದಿಗೆ ಎಲ್ಲೆಡೆ ಭಗೀರಥ ಜಯಂತಿ ಅದ್ಧೂರಿಯಿಂದ ಆಚರಣೆಗೊಂಡಿದೆ.
|
ಅವಿಶ್ರಾಂತ ಪರಿಶ್ರಮ ಆದರ್ಶವಾಗಲಿ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಭಗೀರಥ ಜಯಂತಿ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಭಗೀರಥನ ಅವಿಶ್ರಾಂತ ಪರಿಶ್ರಮ ನಮ್ಮೆಲ್ಲರಿಗೂ ಆದರ್ಶವಾಗಲಿ ಎಂದು ಸಿದ್ದರಾಮಯ್ಯ ಈ ಸಂದರ್ಭದಲ್ಲಿ ಆಶಿಸಿದರು.
|
ಉಪ್ಪಾರ ಸಮಾಜದ ಅಭ್ಯರ್ಥಿಗೆ ಸಚಿವ ಸ್ಥಾನ
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಭಗೀರಥ ಜಯಂತಿಯನ್ನು ಉದ್ಘಾಟಿಸಿದ ಸಿದ್ದರಾಮಯ್ಯ, ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಉಪ್ಪಾರ ಸಮುದಾಯದ ಅಭ್ಯರ್ಥಿಯೊಬ್ಬರನ್ನು ಸಚಿವರನ್ನಾಗಿ ಮಾಡುವುದಾಗಿ ಭರವಸೆ ನೀಡಿದರು. ಅಲ್ಲದೆ, ಕರ್ನಾಟಕ ಲೋಕ ಸೇವಾ ಆಯೋಗಕ್ಕೂ ಉಪ್ಪಾರ ಸಮುದಾಯದ ಒಬ್ಬರನ್ನು ಸದಸ್ಯರನ್ನಾಗಿ ನೇಮಿಸಲಾಗುವುದು ಎಂದು ಸಹ ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಭರವಸೆ ನೀಡಿದರು.

ಕೊಪ್ಪಳದಲ್ಲೂ ಆಚರಣೆ
ಕೊಪ್ಪಳದ ಶಾದಿ ಮಹಲ್ ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಭಗೀರಥ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಕೊಪ್ಪಳ ನಗರದ ಸಿರಸಪ್ಪಯ್ಯ ಮಠದ ಆವರಣದಲ್ಲಿ ಭಗೀರಥನ ಭಾವಚಿತ್ರ ಮೆರವಣಿಗೆಯೂ ನಡೆಯಿತು. ಜಿಲ್ಲಾ ಪಂಚಾಯತ್ ಸದಸ್ಯ ರಾಜಶೇಖರ ಹಿಟ್ನಾಳ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಗದಗದಲ್ಲೂ ಭಗೀರಥನ ನೆನಪು
ಗದಗದ ಜಿಲ್ಲಾಡಳಿತ ಭವನದ ಆಡಿಟೋರಿಯಂ ನಲ್ಲಿ ನಡೆದ ಭಗೀರಥ ಜಯಂತಿಯನ್ನು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ್ ಉದ್ಘಾಟಿಸಿದರು. ಭಗೀರಥ ಪಣತೊಟ್ಟು ತಂದ ನೀರನ್ನು ಉಳಿಸಿಕೊಳ್ಳುವುದೇ ನಾವು ಭಗೀರಥನಿಗೆ ನೀಡಬಹುದಾದ ಕಾಣಿಕೆ ಎಂದು ಈ ಸಂದರ್ಭದಲ್ಲಿ ಎಚ್.ಕೆ.ಪಾಟೀಲ್ ಹೇಳಿದರು.

ಧಾರವಾಡದಲ್ಲಿ ಭಗೀರಥ ಜಯಂತಿ
ಧಾರವಾಡ ನಗರದ ಲೈನ್ ಬಜಾರ್ ನ ಮಾರುತಿ ದೇವಾಲಯದಿಂದ ಆರಂಭವಾದ ಭಗೀರಥ ಜಯಂತಿ ಮೆರವಣಿಗೆಗೆ ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ ಚಾಲನೆ ನೀಡಿದರು. ಉಪ್ಪಾರ ಸಮಾಜದ ಗಣ್ಯರು ಸೇರಿದಂತೆ ಅನೇಕ ಜನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.












Click it and Unblock the Notifications