ಎಲೆಕ್ಟ್ರಿಕ್ ವಾಹನ ಬಳಕೆದಾರರಿಗೆ ಬೆಸ್ಕಾಂನಿಂದ ಗುಡ್‌ನ್ಯೂಸ್
ಎಲೆಕ್ಟ್ರಿಕ್ ವಾಹನ (ಇವಿ) ಬಳಕೆದಾರರಿಗೆ ಬೆಸ್ಕಾಂ ಸಿಹಿಸುದ್ದಿ ನೀಡಿದೆ. ಬೆಸ್ಕಾಂ ಇವಿ ವಾಹನ ಬಳಸುವವರಿಗೆ ಈಗಾಗಲೇ ಚಾರ್ಜಿಂಗ್ ಕೇಂದ್ರಗಳ ಮಾಹಿತಿ, ಹಣ ಪಾವತಿ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಲು ʼಇವಿ ಮಿತ್ರʼ ಆ್ಯಪ್ ಪರಿಚಯಿಸಿತ್ತು. ಇದೀಗ ಇದೇ ಆ್ಯಪ್ ಹೊಸ ರೂಪದಲ್ಲಿ ಗ್ರಾಹಕರ ಸ್ನೇಹಿಯಾಗಿ ಬರುತ್ತಿದೆ.
ಆಂಡ್ರಾಯ್ಡ್ ಮತ್ತು ಐಒಎಸ್ ಎರಡೂ ಅಪ್ಲಿಕೇಶನ್‌ಗಳಲ್ಲಿ ಹೊಸ ʼಇವಿ ಮಿತ್ರʼ ಆ್ಯಪ್ ಲಭ್ಯವಿದ್ದು, ಬಳಕೆದಾರರ ಪ್ರೊಫೈಲ್ ನಿರ್ವಹಣೆ, ಚಾರ್ಜಿಂಗ್ ಸ್ಟೇಷನ್‌ಗಳ ಮಾಹಿತಿ, ಚಾರ್ಜಿಂಗ್ ಪ್ರಕ್ರಿಯೆ, ಬುಕ್ಕಿಂಗ್ ವಿವರ, ಚಾರ್ಜಿಂಗ್ ಸ್ಟೇಷನ್‌ಗಳಲ್ಲಿರುವ ಸೌಕರ್ಯಗಳು ಮತ್ತು ಚಾರ್ಜಿಂಗ್ ಕಾಯ್ದಿರಿಸುವ ಸೌಲಭ್ಯಗಳನ್ನು ನಿಮಗೆ ಒದಗಿಸಲಿದೆ.

ಗ್ರಾಹಕರು ಹಳೆಯ ʼಇವಿ ಮಿತ್ರʼ ಆ್ಯಪ್ ಡಿಲೀಟ್ ಮಾಡಿ ಪ್ಲೇಸ್ಟೋರ್ ಮೂಲಕ ಹೊಸ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ವ್ಯಾಲೆಟ್‌ನಲ್ಲಿ ಹಣ ಉಳಿದಿದ್ದರೂ ಚಿಂತಿಸಬೇಕಿಲ್ಲ. ಹೊಸ ಆ್ಯಪ್‌ಗೆ ಆ ಹಣ ವರ್ಗಾವಣೆಯಾಗುತ್ತದೆ ಎಂದು ಬೆಸ್ಕಾಂ ತಿಳಿಸಿದೆ.
ಕನ್ನಡ, ಇಂಗ್ಲಿಷ್, ಹಿಂದಿ ಹಾಗೂ ಪ್ರಾದೇಶಿಕ ಭಾಷೆಗಳು ಸೇರಿದಂತೆ ಒಟ್ಟು 11 ಭಾಷೆಗಳಲ್ಲಿ ಇವಿ ಚಾರ್ಜಿಂಗ್ ಮಾಹಿತಿ ಲಭ್ಯವಿದ್ದು, ಹಣ ಪಾವತಿಗೆ ಹಲವು ಆಯ್ಕೆಗಳೂ ಇವೆ. ರಿಟೇಲ್ ಬಳಕೆದಾರರ ಶುಲ್ಕದ ವಿವರ, ಬಿಲ್ಲಿಂಗ್, ಪ್ರೊಫೈಲ್ ಇರುತ್ತದೆ ಎಂದು ಹೇಳಿದೆ.
ಆ್ಯಪ್ ಬಳಸುವುದು ಹೇಗೆ?: ಮೊದಲು ಆ್ಯಪ್ ಡೌನ್ಲೋಡ್ ಮಾಡಿದ ನಂತರ ನಿಮ್ಮ ಫೋನ್ ನಂಬರ್ ನಮೂದಿಸಿ, ಲಾಗಿನ್ ಆಗಬೇಕು. ನಿಮ್ಮ ಮೊಬೈಲ್‌ಗೆ ಬರುವ ಒಟಿಪಿ ಸಂಖ್ಯೆ ದಾಖಲಿಸಿದ ನಂತರ, ಲಾಗಿನ್ ಖಚಿತವಾಗುತ್ತದೆ. ಖಾಸಗಿ ಹಾಗೂ ವಾಣಿಜ್ಯ ಬಳಕೆದಾರರು ಈ ಒಂದೇ ಆ್ಯಪ್ ಮೂಲಕ ಚಾರ್ಜಿಂಗ್ ಸೌಲಭ್ಯ ಪಡೆಯಬಹುದು. ಮ್ಯಾಪ್ ಮೂಲಕ ಚಾರ್ಜಿಂಗ್ ಕೇಂದ್ರಗಳ ಮಾಹಿತಿಯನ್ನೂ ತಿಳಿದುಕೊಳ್ಳಬಹುದು.

ಬೆಸ್ಕಾಂ ನಿರ್ಧಾರಕ್ಕೆ ವಿರೋಧ: ಸದ್ಯ ಈ ಆ್ಯಪ್ ಅನ್ನು ಹನ್ನೊಂದು ಭಾಷೆಗಳಲ್ಲಿ ಬಿಡುಗಡೆ ಮಾಡುತ್ತಿರುವುದು ಕನ್ನಡಾಭಿಮಾನಿಗಳ ವಿರೋಧಕ್ಕೆ ಕಾರಣವಾಗಿದೆ. ಇದು ಬಹುಭಾಷಾ ಆಡಳಿತ. ಬೇರೆ ರಾಜ್ಯದಲ್ಲಿ ಈ ಅವಕಾಶ ಇರುವ ಸಾಧ್ಯತೆ ವಿರಳ. ಕ್ರಮೇಣ ಎಲ್ಲ ಇಲಾಖೆಗಳಲ್ಲೂ ಈ ಮಾದರಿಯಲ್ಲಿ ಎಲ್ಲ ಭಾಷೆಯಲ್ಲೂ ಸೇವೆ ಬೇಕೆಂದರೆ ಕನ್ನಡದ ಸ್ಥಾನಮಾನಕ್ಕೆ ಕುತ್ತು ಬರಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಕನ್ನಡದಲ್ಲಿ ಈ ಆ್ಯಪ್ ಬರುತ್ತಿರುವುದು ಒಳ್ಳೆಯ ಸಂಗತಿಯೇ. ಆದರೆ, ಬೆಂಗಳೂರಿನಲ್ಲಿ ಬೆಸ್ಕಾಂ ಗ್ರಾಹಕರು ಕನ್ನಡದಲ್ಲೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಿರುವಾಗ ಬೇರೆ ಭಾಷೆಗಳಿಗೂ ಇಲ್ಲಿ ಮಹತ್ವ ನೀಡಿರುವುದು ಸರಿಯಲ್ಲ. ಈಗಾಗಲೇ ಇಲ್ಲಿ ಅನ್ಯಭಾಷಿಕರ ದರ್ಪ ಮಿತಿ ಮೀರಿದೆ. ಹೀಗಿರುವಾದ ಅವರನ್ನು ಓಲೈಕೆ ಮಾಡುವಂತಹ ವಾತಾವರಣ ದಿನದಿಂದ ದಿನಕ್ಕೆ ನಿರ್ಮಾಣವಾಗುತ್ತಿದೆ ಎಂದು ಸೋಶಿಯಲ್ ಮೀಡಿಯಾಗಳಲ್ಲಿ ಜನ ಆಕ್ಷೇಪಿಸಿದ್ದಾರೆ.
ಕರ್ನಾಟಕದಲ್ಲಿ ಇವಿ ವಾಹನ ಬಳಕೆದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ವರದಿಯಾಗಿದೆ. ಅಲ್ಲದೇ ಇಡೀ ದೇಶದಲ್ಲೇ ಅತಿ ಹೆಚ್ಚು ಇವಿ ವಾಹನಗಳು ಇರುವುದೂ ಕರ್ನಾಟಕದಲ್ಲೇ ಎಂದು ಹೇಳಲಾಗಿದೆ. ಈ ಆ್ಯಪ್ ಸೇವೆಯಿಂದಾಗಿ ಇ.ವಿ.ವಾಹನಗಳ ಬಳಕೆಗೆ ಜನ ಇನ್ನಷ್ಟು ಹೆಚ್ಚಿನ ಆಸಕ್ತಿ ತೋರಿ, ಉದ್ಯಾನನಗರಿಯನ್ನು ಪರಿಸರಸ್ನೇಹಿಗೊಳಿಸುವಲ್ಲಿ ಹೆಜ್ಜೆ ಇಡಲಿದ್ದಾರೆ ಎಂದು ಹೇಳಲಾಗುತ್ತಿದೆ.












Click it and Unblock the Notifications