ಬೆಂಗಳೂರು ತಾಯಿ-ಮಗು ಸಾವು ಕೇಸ್: 38,000 ಅಪಾಯಕಾರಿ ಸ್ಥಳ ಪತ್ತೆ ಮಾಡಿದ ಬೆಸ್ಕಾಂ
ಬೆಂಗಳೂರು, ಡಿಸೆಂಬರ್ 19: ಬೆಂಗಳೂರಿನ ಕಾಡುಗೋಡಿಯಲ್ಲಿ ವಿದ್ಯುತ್ ತಂತಿ ತುಳಿದು ತಾಯಿ ಮತ್ತು ಹಸುಗೂಸು ಮೃತಪಟ್ಟ ಪ್ರಕರಣವು ಭಾರಿ ಸುದ್ದಿಯಾಗಿತ್ತು. ಇದರ ಬೆನ್ನಲ್ಲೆ ಎಚ್ಚೆತ್ತುಕೊಂಡಿರುವ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ಅಭಿಯಾನ ನಡೆಸಿ ನಗರದಲ್ಲಿ 'ಅಪಾಯಕಾರಿ ಸ್ಥಳ'ಗಳನ್ನು ಗುರುತಿಸಿದೆ. ವಿಶೇಷತೆ ಎಂದರೆ ಸಾವಿರಾರು ಡೇಂಜರಸ್ ಸ್ಪಾಟ್‌ಗಳು ಇರುವುದು ಪತ್ತೆಯಾಗಿದೆ. ಇವುಗಳ ಅಂಕಿ-ಅಂಶಗಳು ಇಲ್ಲಿವೆ.
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ಕಳೆದ ಹದಿನೈದು ದಿನಗಳಿಂದ ಅಭಿಯಾನ ನಡೆಸಿತ್ತು. ಈ ವೇಳೆ ನಗರದಲ್ಲಿ 38000ಕ್ಕೂ ಅಧಿಕ ಡೇಂಜರಸ್ ಸ್ಪಾಟ್‌ಗಳನ್ನು ಬೆಸ್ಕಾಂ ಗುರುತಿಸಿದೆ. ಇದರಲ್ಲಿ ಒಂದಷ್ಟು ಅಪಾಯಕಾರಿ ಸ್ಥಳಗಳಲ್ಲಿನ ಲೋಪದೋಷ, ಸಂಭವನೀಯ ತೊಂದರೆ ಆಗುವುದನ್ನು ತಪ್ಪಿಸಿ ಸರಿ ಮಾಡಿದೆ.

ಹಸುಗೂಸು ಹೊತ್ತು ಕಾಡುಗೋಡಿ ರಸ್ತೆಯಲ್ಲಿ ನಡೆಯುತ್ತಿದ್ದ ತಾಯಿಯು ವಿದ್ಯುತ್ ತಂತಿ ತುಳಿದು ಸಾವಿಗೀಡಾಗಿದ್ದರು. ಅರಳಬೇಕಿದ್ದ ಕೂಸಿನ ಭವಿಷ್ಯ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ನಂದಿ ಹೋಯಿತು. ಇದಕ್ಕೆ ಬೆಸ್ಕಾಂ ನಿರ್ಲಕ್ಷ್ಯವನ್ನು ಹೊಣೆಯಾಗಿ ಮಾಡಲಾಯಿತು.
ಡೆಂಜರಸ್ ಸ್ಪಾಟ್ ಗುರುತಿಸಲು ಬೆಸ್ಕಾಂ ಅಭಿಯಾನ
ಈ ಕುರಿತು ವಿದ್ಯುತ್ ಪರಿವೀಕ್ಷಣಾಲಯ ಬೇಸ್ಕಾಂ ನಿರ್ಲಕ್ಷ್ಯ ಕಾರಣ ಎಂದು ಉಲ್ಲೇಖಿಸಿ ಇಂಧನ ಇಲಾಖೆಗೆ ವರದಿ ಸಲ್ಲಿಸಿದ್ದರು. ಇದಾಗುತ್ತಿದ್ದಂತೆ ಎಚ್ಚೆತ್ತ ಬೆಸ್ಕಾಂ ಬೆಂಗಳೂರಿನಲ್ಲಿ ಬ್ಲಾಕ್ ಸ್ಪಾಟ್‌ಗಳನ್ನು ಗುರುತಿಸಲು ಅಭಿಯಾನ ಹಮ್ಮಿಕೊಂಡಿತು. ಒಟ್ಟು ಹದಿನೈದು ದಿನಗಳ ಅಭಿಯಾನದಿಂದ 38000ಕ್ಕೂ ಹೆಚ್ಚು ಡೆಂಜರಸ್ ಸ್ಪಾಟ್ ಗುರುತಿಸಿದೆ.

ಬೆಸ್ಕಾಂ ಒಟ್ಟು ಅಪಾಯಕಾರಿ ಸ್ಥಳಗಳ ಪೈಕಿ ಈವರೆಗೆ 13,542 ಸ್ಥಳಗಳಲ್ಲಿ ಯಾವುದೇ ಅಪಾಯ ಎದುರಾಗದಂತೆ ಸರಿಮಾಡಲಾಗಿದೆ. ಸ್ಥಳದಲ್ಲಿನ ಲೋಪ ದೋಷಗಳನ್ನು ಬೆಸ್ಕಾಂ ಅಧಿಕಾರಿಗಳು ಸರಿಪಡಿಸಿದ್ದಾರೆ. ಉಳಿದ ಸ್ಥಳಗಳನ್ನು ಸರಿ ಮಾಡುವ ಕಾರ್ಯ ಮುಂದುವರಿದಿದೆ. ಹಾಗಾದರೆ ಇಷ್ಟು ಅಪಾಯಕಾರಿ ಸ್ಥಳಗಳು ನಗರದಲ್ಲಿ ಎಲ್ಲೆಲ್ಲಿವೆ ಎಂಬ ಮಾಹಿತಿ ಇಲ್ಲಿ ತಿಳಿಯೋಣ.
ವಲಯವಾರು ಅಪಾಯಕಾರಿ ಸ್ಥಳದ ವಿವರಣೆ
ಬೆಂಗಳೂರಿನ ದಕ್ಷಿಣ ವಲಯದಲ್ಲಿ 16,469, ಪಶ್ಚಿಮ ವಲಯದಲ್ಲಿ 12,794, ಪೂರ್ವ ವಲಯದಲ್ಲಿ 4,187 ಮತ್ತು ಪೂರ್ವ ವಲಯದಲ್ಲಿ 5,472 ಅಪಾಯಕಾರಿ ಸ್ಥಳಗಳನ್ನು ಗುರುತಿಸಿದ್ದಾರೆ. ಈ ಮೂಲಕ ಒಟ್ಟು 38000 ಕ್ಕೂ ಹೆಚ್ಚು ಸ್ಪಾಟ್ ಗುರುತಿಸಿದಂತಾಗಿದೆ. ಇದರಲ್ಲಿ ಈ ವರೆಗೆ ಸರಿಮಾಡಲಾದ ಡೇಂಜರಸ್ ಸ್ಪಾಟ್ ಬಿಟ್ಟರೆ, ಸುಮಾರು 25000 ಅಪಾಯಕಾರಿ ಸ್ಥಳ ಸರಿಮಾಡುವ ಕೆಲಸ ಬಾಕಿ ಇದೆ. ಸಂಭವನೀಯ ಅವಘಡಗಳು ತಪ್ಪಿಸಲು ಬೆಸ್ಕಾಂ ತ್ವರಿತಗತಿಯಲ್ಲಿ ಇವುಗಳನ್ನು ಸರಿಮಾಡಬೇಕು ಎಂಬ ಆಗ್ರಹ ಕೇಳಿ ಬಂದಿದೆ.
ಆಗಾಗ ವಿದ್ಯುತ್ ಸಂಪರ್ಕ ಪರಿಶೀಲಿಸಿಕೊಳ್ಳಿ: ಬೆಸ್ಕಾಂ
ಗ್ರಾಹಕರು ವಿದ್ಯುತ್ ಅವಘಡಗಳನ್ನು ತಡೆಯಲು ಯಾವಾಗಲೂ ವಿದ್ಯುತ್ ಸಂಪರ್ಕ ಸರಿಯಾಗಿದೆಯೇ ಎಂದು ಆಗಾಗ ಖಚಿತಪಡಿಸಿಕೊಳ್ಳಬೇಕು ಎಂದು ಬೆಂಗಳೂರ ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಸಲಹೆ ನೀಡಿದೆ. ಈ ಸಲಹೆಯನ್ನು ಸಾರ್ವಜನಿಕರು ಗಂಭೀರವಾಗಿ ಪರಿಗಣಿಸಬೇಕು. ಕಾಲ ಕಾಲಕ್ಕೆ ವಿದ್ಯುತ್ ಸಂಪರ್ಕ, ವೈರ್ ಅಳವಡಿಕೆ, ಮೀಟರ್ ಸೇರಿದಂತೆ ಒಟ್ಟಾರೆ ವಿದ್ಯುತ್ ಸಂಪರ್ಕವನ್ನು ಗಮನಿಸಬೇಕು.
ಏಕೆಂದರೆ ಎನ್‌ಸಿಆರ್‌ಬಿ ಅಂಕಿಅಂಶಗಳ ಪ್ರಕಾರ, ಕಳೆದ ಹತ್ತು ವರ್ಷಗಳಲ್ಲಿ ಅಂದರೆ 2011ರಿಂದ 2020ವರೆಗೆ ವಿದ್ಯುತ್ ಅವಘಡಗಳಿಂದ ದಿನಕ್ಕೆ ಸರಾಸರಿ 30-34 ಸಾವುಗಳು ಸಂಭವಿಸಿವೆ. ಇದರಲ್ಲಿ ವಿದ್ಯುತ್ ಶಾಕ್, ಕಂಬ ಮುರಿದು ಬಿದ್ದ ಪ್ರಕರಣ ಸೇರಿದಂತೆ ಅನೇಕ ಸಂಗತಿಗಳು ಒಳಗೊಂಡಿವೆ ಎಂದು ಸಾಮಾಜಿಕ ಜಾಲತಾಣ ಟ್ವೀಟ್ ಮೂಲಕ ಬೆಸ್ಕಾಂ ಮಾಹಿತಿ ನೀಡಿದೆ.












Click it and Unblock the Notifications