ಬೆಂಗಳೂರಿನ ಹೆಬ್ಬಾಳ ಮೇಲ್ಸೇತುವೆ ಬಳಿ ಒಂದು ಉಪನಗರ ರೈಲು, 3 ಮೆಟ್ರೋ ನಿಲ್ದಾಣ- ಮೆಗಾ ಯೋಜನೆಗೆ ಸಿದ್ದತೆ
ಬೆಂಗಳೂರು, ಆಗಸ್ಟ್ 14: ನಗರದ ಹೆಬ್ಬಾಳ ಮೇಲ್ಸೇತುವೆಯನ್ನು ಬಹುಮಾದರಿ ಸಾರಿಗೆ ಕೇಂದ್ರವನ್ನಾಗಿ ಮಾಡಲು ಯೋಜನೆ ರೆಡಿಯಾಗಿದೆ. ಬೆಂಗಳೂರಿನ ವಾಹನ ದಟ್ಟಣೆಯನ್ನು ಕಡಿಮೆ ಮಾಡಲು ಈ ಯೋಜನೆ ಸಹಾಯ ಮಾಡಲಿದೆ ಎಂದು ಹೇಳಲಾಗುತ್ತಿದೆ. ಮಲ್ಟಿ-ಮಾಡೆಲ್ ಇಂಟಿಗ್ರೇಷನ್ (ಎಂಎಂಐ) ಎಂದು ಕರೆಯಲ್ಪಡುವ ಯೋಜನೆಯು ಒಂದು ಉಪನಗರ ರೈಲು ಮತ್ತು ಮೂರು ಮೆಟ್ರೋ ನಿಲ್ದಾಣಗಳನ್ನು ಒಳಗೊಂಡಿದೆ.
ಒಂದು ಮೆಟ್ರೋ ಮತ್ತು ಉಪನಗರ ರೈಲು ನಿಲ್ದಾಣಗಳ ಕಾಮಗಾರಿ ಪ್ರಗತಿಯಲ್ಲಿದೆ. ಒಂದು ಮೆಟ್ರೋ ನಿಲ್ದಾಣಕ್ಕೆ ಕೇಂದ್ರದ ಅನುಮೋದನೆಗೆ ಸಿಗಬೇಕಿದೆ. ನಾಲ್ಕನೆಯದು ಇನ್ನೂ ಡ್ರಾಯಿಂಗ್ ಬೋರ್ಡ್‌ನಲ್ಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೆಟ್ರೋದ ನೀಲಿ ಮಾರ್ಗದ ಅಡಿಯಲ್ಲಿ, ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ನಿಲ್ದಾಣವನ್ನು ನಿರ್ಮಿಸುತ್ತಿದೆ. ಇದು ಬಿಎಂಟಿಸಿ ಡಿಪೋ ಬಳಿ ಸ್ಥಾಪನೆಯಾಗುತ್ತಿದೆ.
ಹೊರ ವರ್ತುಲ ರಸ್ತೆ-ಹೆಬ್ಬಾಳ-ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ನೀಲಿ ಮಾರ್ಗದಲ್ಲಿ ಬರುತ್ತದೆ.
ಕೆಂಪಾಪುರ-ಜೆಪಿ ನಗರ 4 ನೇ ಹಂತದ ಮಾರ್ಗಕ್ಕಾಗಿ ಬಿಎಂಆರ್‌ಸಿಎಲ್ ಕೇಂದ್ರದ ಅನುಮೋದನೆಗೆ ಕಾಯುತ್ತಿದೆ. ಈ ಮಾರ್ಗವು ಹೆಬ್ಬಾಳ ಫ್ಲೈಓವರ್‌ನಲ್ಲಿ ನಿಲ್ದಾಣವನ್ನು ಒಳಗೊಂಡಿದೆ. ಸರ್ಜಾಪುರ-ಹೆಬ್ಬಾಳ ಮೆಟ್ರೊ ಕಾರಿಡಾರ್ ಇನ್ನೂ ಯೋಜನಾ ಹಂತದಲ್ಲಿದೆ. ಈ ಮಾರ್ಗದ ಒಂದು ನಿಲ್ದಾಣವನ್ನು ಫ್ಲೈಓವರ್ ಬಳಿ ನಿರ್ಮಿಸಲು ಯೋಜನೆ ರೂಪಗೊಂಡಿದೆ.

ರೈಲ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಕಂಪನಿ (ಕರ್ನಾಟಕ) ಲಿಮಿಟೆಡ್ - ಕೆ-ರೈಡ್ - ಬೆಂಗಳೂರು ಉಪನಗರ ರೈಲು ಯೋಜನೆಯನ್ನು (ಬಿಎಸ್‌ಆರ್‌ಪಿ) ಕೈಗೆತ್ತಿಕೊಂಡಿದೆ. ಫ್ಲೈಓವರ್‌ನ ಪೂರ್ವ ಭಾಗದಲ್ಲಿ ಮಲ್ಲಿಗೆ ಕಾರಿಡಾರ್‌ನ (ಬೈಯಪ್ಪನಹಳ್ಳಿಯಿಂದ ಚಿಕ್ಕಬಾಣಾವರ) ಉಪನಗರ ರೈಲು ನಿಲ್ದಾಣದ ನಿರ್ಮಾಣವನ್ನು ಮಾಡಲು ನಿರ್ಧರಿಸಲಾಗಿದೆ.
'ರಾಜ್ಯ ಸರ್ಕಾರದ ನಿರ್ಧಾರದಂತೆ, ಹೆಬ್ಬಾಳ ಫ್ಲೈಓವರ್ ಜಂಕ್ಷನ್‌ನಲ್ಲಿ ಬಹು-ಮಾದರಿ ಸಾರಿಗೆ ಹಬ್ ಅನ್ನು ಪ್ರಸ್ತಾಪಿಸಲಾಗಿದೆ. ಮೆಟ್ರೋ, ಉಪನಗರ ರೈಲು ಮತ್ತು ಸಿಟಿ ಬಸ್‌ಗಳಂತಹ ವಿವಿಧ ಸಾರಿಗೆ ವಿಧಾನಗಳನ್ನು ಜಂಕ್ಷನ್‌ನಲ್ಲಿ ಸಂಯೋಜಿಸಲಾಗುತ್ತದೆ. ಮೇಲ್ಸೇತುವೆಗಳು ಎಲ್ಲಾ ನಿಲ್ದಾಣಗಳನ್ನು ಸಂಪರ್ಕಿಸುತ್ತವೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೈಯಪ್ಪನಹಳ್ಳಿ-ಚಿಕ್ಕಬಾಣಾವರ ಉಪನಗರ ಮಾರ್ಗದಲ್ಲಿ ಕೆಲಸ ಪ್ರಗತಿಯಲ್ಲಿದೆ ಮತ್ತು ಇದು ಅಕ್ಟೋಬರ್ 2025 ರ ವೇಳೆಗೆ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ನೈಋತ್ಯ ರೈಲ್ವೆಯ ಹೆಬ್ಬಾಳ ನಿಲ್ದಾಣವು ಜಂಕ್ಷನ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿದೆ.
'ವಿವಿಧ ಸಾರಿಗೆ ವಿಧಾನಗಳ ಏಕೀಕರಣವು ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮೆಟ್ರೋ ಜೋಡಣೆಗೆ ಅಡ್ಡಿಯಾಗದ ರೀತಿಯಲ್ಲಿ ಜಂಕ್ಷನ್‌ನಲ್ಲಿ ತಮ್ಮ ರಸ್ತೆ ಕಾಮಗಾರಿ ಯೋಜನೆಯನ್ನು ವಿನ್ಯಾಸಗೊಳಿಸಲು ನಾವು ಬಿಡಿಎಗೆ ಕೇಳಿದ್ದೇವೆ. ನಮ್ಮ ಮೆಟ್ರೋ ಜೋಡಣೆಯು ಅಸ್ತಿತ್ವದಲ್ಲಿರುವ ಮೇಲ್ಸೇತುವೆಯ ಮೇಲೆ ಯಶವಂತಪುರ ಕಡೆಗೆ ಹೋಗುತ್ತದೆ. ಸರ್ಜಾಪುರ-ಹೆಬ್ಬಾಳ ಮಾರ್ಗವು ಜಂಕ್ಷನ್‌ನಲ್ಲಿ ಕೊನೆಗೊಳ್ಳುತ್ತದೆ' ಎಂದು ಬಿಎಂಆರ್‌ಸಿಎಲ್ ಎಂಡಿ ಅಂಜುಮ್ ಪರ್ವೇಜ್ ಹೇಳಿದ್ದಾರೆ.












Click it and Unblock the Notifications