ರೂಪಾಯಿಗೊಂದು ಮೊಟ್ಟೆ ಆಫರ್: 48 ಸಾವಿರ ಕಳೆದುಕೊಂಡ ಬೆಂಗಳೂರು ಮಹಿಳೆ
ಬೆಂಗಳೂರು, ಫೆಬ್ರವರಿ 26: ಸೈಬರ್ ವಂಚನೆಯ ಬಗ್ಗೆ ಪೊಲೀಸರು ಎಷ್ಟೇ ಅರಿವು ಮೂಡಿಸಿದರು ಕೂಡ ವಂಚನೆಗೊಳಗಾಗುವರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ. ವರ್ಕ್ ಫ್ರಾಂ ಹೋಮ್ ಹಾಗೂ ಅಪರಿಚಿತರು ನೀಡುವ ಆಫರ್ ನಂಬಿ ಮೋಸ ಹೋಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದೇ ರೀತಿ ಅಪರಿಚಿತರು ನೀಡಿರುವ ಮೊಟ್ಟೆ ಆಫರ್ ನಂಬಿ ಮಹಿಳೆಯೊಬ್ಬರು ಸಾವಿರಾರು ರೂಪಾಯಿ ಕಳೆದುಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಒಂದು ರೂಪಾಯಿಗೆ ಒಂದು ಮೊಟ್ಟೆ ಖರೀದಿಸುವ ಆಸೆಗೆ ಬಿದ್ದ ಮಹಿಳೆ ಒಂದಲ್ಲ, ಎರಡಲ್ಲ ಬರೋಬ್ಬರಿ ನೆಲವತ್ತೆಂಟು ಸಾವಿರ ರೂಪಾಯಿ ಕಳೆದುಕೊಂಡಿದ್ದಾರೆ. ಈ ಪ್ರಕರಣ ಸಂಬಂಧ ಬೆಂಗಳೂರಿನ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರಿನ ವಸಂತ ನಗರ ನಿವಾಸಿ ಮಹಿಳೆಯೊಬ್ಬರಿಗೆ ಫೆಬ್ರವರಿ 17ರಂದು ಇ-ಮೇಲ್ ಸಂದೇಶ ಬಂದಿತ್ತು. ಇ-ಕಾಮರ್ಸ್ ಹೆಸರಿನಲ್ಲಿ ಒಂದು ರೂಪಾಯಿಗೆ ಒಂದು ಮೊಟ್ಟೆ ಖರೀದಿಸುವ ಆಫರ್ ನೀಡಲಾಗಿತ್ತು. ಇದನ್ನು ನಂಬಿದ ಮಹಿಳೆ ವಂಚಕರು ಹೇಳಿದಂತೆ ನಡೆದುಕೊಂಡಿದ್ದಾರೆ. 48 ರೂಪಾಯಿಗೆ 48 ಮೊಟ್ಟೆ ಖರೀದಿರುವ ಭರದಲ್ಲಿ ಮಹಿಳೆ ವಂಚಕರು ಹೇಳಿದಂತೆ ಲಿಂಕ್ ಕ್ಲಿಕ್ ಮಾಡಿ 48 ರೂಪಾಯಿ ಪಾವತಿ ಮಾಡಿದ್ದಾರೆ. ಮಹಿಳೆ ಹಣ ಪಾವತಿ ಮಾಡಿದ್ದೇ ತಡ ವಂಚಕರು ಬರೋಬ್ಬರಿ 48 ಸಾವಿರ ರೂಪಾಯಿಯನ್ನು ಮಹಿಳೆ ಖಾತೆಯಿಂದ ದೋಚಿದ್ದಾರೆ.
ತಾನು ವಂಚಕರಿಂದ ಮೋಸ ಹೋದ ಬಗ್ಗೆ ತಿಳಿದ ಮಹಿಳೆ ಕೂಡಲೇ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಸೈಬರ್ ವಂಚನೆ ಅಡಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಬೆಳಗಾವಿಯಲ್ಲಿ ಒಂದು ಕೋಟಿ ರೂಪಾಯಿ ಮಂಗಮಾಯ
ವಂಚಕರ ಮಾತನ್ನು ನಂಬುತ್ತಿರುವ ಜನರು ಕೋಟ್ಯಂತರ ರೂಪಾಯಿ ಕಳೆದುಕೊಳ್ಳುತ್ತಿದ್ದಾರೆ. ಇಂತಹದ್ದೇ ಘಟನೆ ಇತ್ತೀಚಿಗೆ ಬೆಳಗಾವಿಯಲ್ಲಿ ನಡೆದಿದ್ದು, ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 1.53 ಕೋಟಿ ರೂಪಾಯಿ ವಂಚಕರ ಪಾಲಾಗಿದೆ.
ಗೋಕಾಕ್ ಮೂಲದ ಉದ್ಯಮಿ ಬಾಬುರಾವ್ ಅವರಿಗೆ ಟೆಲಿಗ್ರಾಂ ಆ್ಯಪ್‌ನಲ್ಲಿ ವಂಚಕರು ಪರಿಚಯ ಆಗಿದ್ದಾರೆ. ವಂಚಕರು ನಯವಾದ ಮಾತುಗಳಿಂದ ಬಾಬುರಾವ್ ಅವರನ್ನು ನಂಬಿಸಿದ್ದು, ಬಾಬುರಾವ್ ಕೂಡ ವಂಚಕರು ಹೇಳಿದಂತೆ ನಡೆದುಕೊಂಡಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು 27.50 ಲಕ್ಷ ರೂಪಾಯಿ ಹಣ ಪಡೆದು ವಂಚಿಸಿದ್ದಾರೆ.
ಇದೇ ರೀತಿ ಚಿಕ್ಕೋಡಿ ತಾಲೂಕಿನ ಕೆರೂರು ಗ್ರಾಮದ ಚಿದಾನಂದ್ ಸೋಶಿಯಲ್ ಮಿಡಿಯಾ ಮಾರ್ಕೆಟಿಂಗ್ ಕಂಪನಿಯಲ್ಲಿ ವರ್ಕ್ ಫ್ರಮ್ ಹೋಮ್ ಕೆಲಸ ಪಡೆಯಲು ಹೋಗಿ ಬರೋಬ್ಬರಿ 58.34 ಲಕ್ಷ ರೂಪಾಯಿ ಹಣ ಕಳೆದುಕೊಂಡಿದ್ದರು. ಇಂತಹದ್ದೇ ಮತ್ತೊಂದು ಪ್ರಕರಣ ಸೇರಿದಂತೆ ಮೂರು ಜನರು ಮೋಸ ಹೋಗಿ ಬೆಳಗಾವಿ ಜಿಲ್ಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.












Click it and Unblock the Notifications