Bengaluru: ಬೆಂಗಳೂರಿನಲ್ಲಿ ರ‍್ಯಾಪಿಡೋ ರೈಡರ್ ಕಿರುಕುಳ ಆರೋಪ; ಮಹಿಳೆಯ ಕೈ ಹಿಡಿದು ಅನುಚಿತ ವರ್ತನೆ!

ಬೆಂಗಳೂರು: ನಗರದಲ್ಲಿ ಮಹಿಳೆಯರ ಸುರಕ್ಷತೆ ಕುರಿತು ಮತ್ತೊಮ್ಮೆ ಕಳವಳ ಮೂಡಿಸುವ ಘಟನೆ ಬೆಳಕಿಗೆ ಬಂದಿದೆ. ರ‍್ಯಾಪಿಡೋ ಪಿಂಕ್ ಬೈಕ್ ರೈಡ್ ವೇಳೆ ಚಾಲಕ ತನ್ನ ಕೈ ಹಿಡಿದು ಅನುಚಿತವಾಗಿ ವರ್ತಿಸಿದ್ದಾನೆ ಎಂದು ಬೆಂಗಳೂರಿನ ಮಹಿಳೆಯೊಬ್ಬರು ಆರೋಪಿಸಿದ್ದಾರೆ. ಪ್ರಯಾಣ ಮುಗಿದ ಬಳಿಕವೂ ಚಾಲಕ ತಾನು ವಾಸಿಸುವ ಅಪಾರ್ಟ್‌ಮೆಂಟ್‌ ಸಮುಚ್ಚಯದ ಹೊರಗೆ ಉಳಿದಿದ್ದರಿಂದ ಭಯಗೊಂಡು ಸುಮಾರು 15 ನಿಮಿಷ ರಸ್ತೆಯಲ್ಲೇ ನಿಂತಿದ್ದೆ ಎಂದು ಮಹಿಳೆ ತಿಳಿಸಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದ್ದು, ರ‍್ಯಾಪಿಡೋ ಸಂಸ್ಥೆ ಕೂಡ ಪ್ರತಿಕ್ರಿಯೆ ನೀಡಿದೆ.

ರೈಡ್ ವೇಳೆ ಏನಾಯಿತು?

ಸೃಷ್ಟಿ ಎಂಬ ಎಕ್ಸ್‌ (X) ಬಳಕೆದಾರರು ತಮ್ಮ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ರೈಡ್ ಬುಕಿಂಗ್ ದೃಢೀಕರಣ ಮತ್ತು ಪಾವತಿ ರಸೀದಿಯ ಸ್ಕ್ರೀನ್‌ಶಾಟ್‌ಗಳನ್ನೂ ಪ್ರಕಟಿಸಿರುವ ಅವರು, ಆ್ಯಪ್ ಆಧಾರಿತ ಬೈಕ್ ಸೇವೆಗಳಲ್ಲಿ ಮಹಿಳೆಯರ ಸುರಕ್ಷತೆ ಕುರಿತು ಪ್ರಶ್ನೆಗಳನ್ನು ಎತ್ತಿದ್ದಾರೆ.

Bengaluru Woman Alleges Inappropriate Behaviour by Rapido Rider Company Permanently Suspends Captain

ಸೃಷ್ಟಿ ಅವರ ಪ್ರಕಾರ, ಮಳೆಯ ಕಾರಣದಿಂದ ರೈಡ್ ತೆಗೆದುಕೊಳ್ಳಬೇಕೇ ಬೇಡವೇ ಎಂಬ ಗೊಂದಲದಲ್ಲಿದ್ದರು. ಈ ವೇಳೆ ಚಾಲಕ ಮಳೆಯ ನೆಪದಲ್ಲಿ ಬುಕ್ಕಿಂಗ್ ರದ್ದು ಮಾಡದಂತೆ ಪದೇಪದೆ ಮನವಿ ಮಾಡಿದ್ದ ಎನ್ನಲಾಗಿದೆ.

ಪ್ರಯಾಣದ ವೇಳೆ ಚಾಲಕ ಅತಿಯಾಗಿ ಆತ್ಮೀಯತೆ ತೋರಿಸಲು ಪ್ರಯತ್ನಿಸಿದ್ದಾನೆ ಎಂದು ಅವರು ಆರೋಪಿಸಿದ್ದಾರೆ. ಮಳೆಯಲ್ಲಿದ್ದ ಕಾರಣ ರೈನ್‌ಕೋಟ್ ನೀಡುವುದಾಗಿ ಹೇಳಿದ್ದಲ್ಲದೆ, ಕಿವಿಗೆ ಇಯರ್‌ಫೋನ್ ಹಾಕಿಕೊಂಡಿದ್ದರೂ ತಾವು ಆರಾಮವಾಗಿದ್ದಾರೆಯೇ ಎಂದು ಪದೇಪದೆ ಕೇಳುತ್ತಿದ್ದ ಎಂದು ತಿಳಿಸಿದ್ದಾರೆ.

ಹೆಲ್ಮೆಟ್ ವಾಪಸ್ ನೀಡುವಾಗ ಕೈ ಹಿಡಿದ ಆರೋಪ

ಸೃಷ್ಟಿ ತಮ್ಮ ವಸತಿ ಬಳಿ ತಲುಪಿದ ಬಳಿಕ ಹೆಲ್ಮೆಟ್ ಹಿಂತಿರುಗಿಸುವ ಸಂದರ್ಭದಲ್ಲಿ ಚಾಲಕ ಕೆಲವು ಸೆಕೆಂಡುಗಳ ಕಾಲ ತಮ್ಮ ಕೈ ಹಿಡಿದಿದ್ದಾನೆ ಎಂದು ಆರೋಪಿಸಿದ್ದಾರೆ. ಈ ವೇಳೆ ಆತ ನಗುತ್ತಿದ್ದ ರೀತಿ ತಮಗೆ ತೀವ್ರ ಅಸಹಜ ಭಾವನೆ ಮೂಡಿಸಿತ್ತು ಎಂದು ಅವರು ವಿವರಿಸಿದ್ದಾರೆ.

ಬಳಿಕ ಹಣ ಪಾವತಿಸಲು ಚಾಲಕನ ಕ್ಯೂಆರ್‌ ಕೋಡ್ ಕೇಳಿದಾಗ, ಮಳೆಯಿಂದಾಗಿ ತನ್ನ ಮೊಬೈಲ್ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಆತ ಹೇಳಿದ್ದಾನೆ ಎನ್ನಲಾಗಿದೆ. ನಂತರ ಮಹಿಳೆಯ ಮೊಬೈಲ್ ಸಂಖ್ಯೆ ಕೇಳಿದ್ದಾನೆ ಎಂದು ಸೃಷ್ಟಿ ಆರೋಪಿಸಿದ್ದಾರೆ. ಆದರೆ, ತಾವು ಕ್ಯೂಆರ್‌ ಕೋಡ್ ಮೂಲಕವೇ ಹಣ ಪಾವತಿಸುವುದಾಗಿ ಪಟ್ಟುಹಿಡಿದು ವಹಿವಾಟು ಪೂರ್ಣಗೊಳಿಸಿದ್ದಾಗಿ ತಿಳಿಸಿದ್ದಾರೆ.‌

15 ನಿಮಿಷ ರಸ್ತೆಯಲ್ಲೇ ಕಾದಿದ್ದ ಮಹಿಳೆ!

ರೈಡ್ ಮುಗಿದ ಬಳಿಕವೂ ಚಾಲಕ ಅಲ್ಲಿಂದ ತೆರಳದಿರುವುದನ್ನು ಗಮನಿಸಿದ ಸೃಷ್ಟಿ, ತಕ್ಷಣ ವಸತಿ ಸಮುಚ್ಚಯದೊಳಗೆ ಹೋಗಲು ಸುರಕ್ಷಿತವೆನಿಸಲಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಸುಮಾರು 15 ನಿಮಿಷ ಹೊರಗಡೆಯೇ ನಿಂತಿದ್ದರು ಎನ್ನಲಾಗಿದೆ.

ಈ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿಯ ಸಹಾಯ ಪಡೆದ ಅವರು, ಚಾಲಕನನ್ನು ಅಲ್ಲಿಂದ ತೆರಳುವಂತೆ ಸೂಚಿಸಲು ಮನವಿ ಮಾಡಿದ್ದಾರೆ. ಆದರೂ ಚಾಲಕ ಮೊಬೈಲ್ ಬಳಸುತ್ತಿರುವುದಾಗಿ ಹೇಳುತ್ತಾ ಇನ್ನೂ ಸುಮಾರು ಐದು ನಿಮಿಷ ಅಲ್ಲಿಯೇ ಉಳಿದಿದ್ದಾನೆ ಎಂದು ಆರೋಪಿಸಿದ್ದಾರೆ. ನಂತರ ಭದ್ರತಾ ಸಿಬ್ಬಂದಿ ಮತ್ತೊಮ್ಮೆ ತೆರಳುವಂತೆ ಸೂಚಿಸಿದ ಬಳಿಕ ಆತ ಸ್ಥಳದಿಂದ ಹೊರಟಿದ್ದಾನೆ ಎಂದು ಸೃಷ್ಟಿ ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಈ ಘಟನೆಯಿಂದ ತಮಗೆ ಭಯ ಮತ್ತು ಮಾನಸಿಕ ಆಘಾತ ಉಂಟಾಗಿದೆ ಎಂದು ಹೇಳಿರುವ ಅವರು, ಬೈಕ್, ಆಟೋ ಅಥವಾ ಕ್ಯಾಬ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರ ಸುರಕ್ಷತೆ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ. ಜನನಿಬಿಡ ಸಮಯದಲ್ಲಿಯೂ ಇಂತಹ ಅನುಭವ ಎದುರಾದರೆ ಮಹಿಳೆಯರು ಎಷ್ಟು ಸುರಕ್ಷಿತವಾಗಿರಬಹುದು ಎಂಬ ಪ್ರಶ್ನೆಯನ್ನೂ ಎತ್ತಿದ್ದಾರೆ.

Bengaluru: ಚಾಲಕನನ್ನು ಅಮಾನತು ಮಾಡಿದ ರ‍್ಯಾಪಿಡೋ

ಸೃಷ್ಟಿ ಅವರ ಪೋಸ್ಟ್‌ಗೆ ಬೆಂಗಳೂರು ಪೊಲೀಸರು ಹಾಗೂ ರ‍್ಯಾಪಿಡೋ ಸಂಸ್ಥೆ ಪ್ರತಿಕ್ರಿಯಿಸಿವೆ. ಘಟನೆಯ ಬಗ್ಗೆ ಗಮನ ಹರಿಸುವುದಾಗಿ ತಿಳಿಸಿರುವ ಸಂಸ್ಥೆ, ಮಹಿಳೆ ಎದುರಿಸಿದ ಅನುಭವಕ್ಕೆ ವಿಷಾದ ವ್ಯಕ್ತಪಡಿಸಿದೆ.

ಈ ಕುರಿತು ರ‍್ಯಾಪಿಡೋ ಪ್ರತಿಕ್ರಿಯಿಸಿ, ಪ್ರಯಾಣಿಕರಿಗೆ ಇಷ್ಟವಿಲ್ಲದ ದೈಹಿಕ ಸ್ಪರ್ಶ ಮತ್ತು ಅಸುರಕ್ಷಿತ ಭಾವನೆ ಮೂಡಿಸುವ ವರ್ತನೆಯನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ ಎಂದು ತಿಳಿಸಿದೆ.ಜತೆಗೆ, ಸಂಬಂಧಪಟ್ಟ ಚಾಲಕನನ್ನು ರ‍್ಯಾಪಿಡೋ ವೇದಿಕೆಯಿಂದ ಶಾಶ್ವತವಾಗಿ ಅಮಾನತುಗೊಳಿಸಿರುವುದಾಗಿ ಸಂಸ್ಥೆ ಸ್ಪಷ್ಟಪಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+